ಮಂಗಳೂರಿನಲ್ಲಿ ‘ಮುದ್ರಣ ಮತ್ತು ಪ್ಯಾಕೇಜಿಂಗ್ ಕ್ಷೇತ್ರದಲ್ಲಿ ಹೊಸ ಅವಕಾಶ’ ಕುರಿತು ಟೆಕ್ ಸಮ್ಮಿತ್
ಕನ್ನಡಪ್ರಭ ವಾರ್ತೆ ಮಂಗಳೂರುದೇಶದಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಉದ್ಯೋಗವಕಾಶ ಒದಗಿಸುತ್ತಿರುವ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳು ಹಲವು ಸಮಸ್ಯೆಗಳಿಂದ ಬಳಲುತ್ತಿವೆ. ಲೈಸನ್ಸ್ ಶುಲ್ಕ ಕೂಡ ಗಣನೀಯ ಏರಿಕೆಯಾಗಿದೆ. ಇದನ್ನು ಸರಿಪಡಿಸಲು ಸೂಕ್ಷ್ಮ- ಸಣ್ಣ ಕೈಗಾರಿಕೆಗಳು ಮತ್ತು ಮಧ್ಯಮ ಕೈಗಾರಿಕೆಗಳಿಗೆ ಪ್ರತ್ಯೇಕ ನೀತಿ ರೂಪಿಸುವ ಅಗತ್ಯವಿದೆ. ಸರ್ಕಾರಕ್ಕೂ ಮನವಿ ಸಲ್ಲಿಸಿದ್ದೇವೆ ಎಂದು ಕರ್ನಾಟಕ ಕೈಗಾರಿಕಾ ಸಂಘಟನೆಗಳ ಒಕ್ಕೂಟ (ಎಫ್‌ಕೆಸಿಸಿಐ) ಅಧ್ಯಕ್ಷ ಎಂ.ಜಿ. ಬಾಲಕೃಷ್ಣ ಹೇಳಿದ್ದಾರೆ.
ಅಖಿಲ ಭಾರತ ಮಾಸ್ಟರ್ ಪ್ರಿಂಟರ್ಸ್ ಒಕ್ಕೂಟ, ಕರ್ನಾಟಕ ರಾಜ್ಯ ಪ್ರಿಂಟರ್‌ಗಳ ಸಂಘಗಳು ಕೇಂದ್ರ ಸರ್ಕಾರದ ಎಂಎಸ್‌ಎಂಇ ಸಚಿವಾಲಯದ ಸಹಯೋಗದಲ್ಲಿ ಮಂಗಳೂರಿನಲ್ಲಿ ಶನಿವಾರ ಮುದ್ರಣ ಮತ್ತು ಪ್ಯಾಕೇಜಿಂಗ್ ಕ್ಷೇತ್ರದಲ್ಲಿ ಹೊಸ ಅವಕಾಶ ಎಂಬ ವಿಚಾರದ ಕುರಿತು ‘ಎಂಎಸ್‌ಎಂಇ ಟೆಕ್ ಸಮ್ಮಿತ್’ ಉದ್ಘಾಟಿಸಿ ಅವರು ಮಾತನಾಡಿದರು.15 ಕೋಟಿ ಉದ್ಯೋಗ ಗುರಿ:
ಪ್ರಸ್ತುತ ಸಣ್ಣ ಕೈಗಾರಿಕೆಗಳು ದೇಶದಲ್ಲಿ 11 ಕೋಟಿಗೂ ಅಧಿಕ ಉದ್ಯೋಗ ಒದಗಿಸುತ್ತಿವೆ. ಇದನ್ನು 15 ಕೋಟಿಗೆ ಏರಿಸುವ ಉದ್ದೇಶ ಹೊಂದಲಾಗಿದೆ ಎಂದು ಎಂ.ಜಿ. ಬಾಲಕೃಷ್ಣ ಹೇಳಿದರು.ಅಖಿಲ ಭಾರತ ಮಾಸ್ಟರ್ ಪ್ರಿಂಟರ್ಸ್ ಒಕ್ಕೂಟ (ಎಐಎಫ್‌ಎಂಪಿ) ಅಧ್ಯಕ್ಷ ಸತೀಶ್ ಮಲ್ಹೋತ್ರ ಮಾತನಾಡಿ, ದೇಶದ ಒಟ್ಟು ಜಿಡಿಪಿಯ ಶೇ.29ನ್ನು ಈ ಕ್ಷೇತ್ರ ನೀಡುತ್ತಿದೆ. ಶೇ.99ರಷ್ಟು ಮುದ್ರಣ ಘಟಕಗಳು ಕೂಡ ಸಣ್ಣ ಕೈಗಾರಿಕೆ ವ್ಯಾಪ್ತಿಯೊಳಗೆ ಬರುತ್ತಿವೆ. ಈ ಕ್ಷೇತ್ರದ ಸಮಸ್ಯೆ ನಿವಾರಣೆಗೆ ಪೂರಕ ಕ್ರಮಗಳು ಆಗಬೇಕಿವೆ ಎಂದು ಒತ್ತಾಯಿಸಿದರು.
ಕೇಂದ್ರ ಸರ್ಕಾರದ ಎಂಎಸ್‌ಎಂಇ ಇಲಾಖೆಯ ಸಹಾಯಕ ಸೆಕ್ಷನ್ ಅಧಿಕಾರಿ ಶ್ರೀಪಾಲ್, ಎಐಎಫ್‌ಎಂಪಿ ಕಲ್ಯಾಣ ಸಮಿತಿ ಅಧ್ಯಕ್ಷ ರವೀಂದ್ರ ರೆಡ್ಡಿ, ಶಿವಕಾಶಿಯ ಶಾಸಕ ಅಶೋಕನ್, ಕರ್ನಾಟಕ ರಾಜ್ಯ ಪ್ರಿಂಟರ್ಸ್ ಎಸೋಸಿಯೇಶನ್ ಅಧ್ಯಕ್ಷ ಅಶೋಕ್ ಕುಮಾರ್, ಎಐಎಫ್‌ಎಂಪಿ ಮಾಜಿ ಅಧ್ಯಕ್ಷ ಸಿ.ಆರ್. ಜನಾರ್ದನ ಮತ್ತಿತರರಿದ್ದರು.