ಕುಮಾರವ್ಯಾಸ ಭಾರತದಲ್ಲಿ ಉದ್ಯೋಗ ಪರ್ವ: ಒಂದು ಚಿಂತನೆ’ ಕುರಿತ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣದಲ್ಲಿ ಕುಮಾರವ್ಯಾಸ ಭಾರತ 21ನೇ ಶತಮಾನಕ್ಕೂ ಪ್ರಸ್ತುತ ಎಂದು ಡಾ.ಪ್ರಸನ್ನ ಹೇಳಿದ್ದಾರೆ.
ದಾರ್ಶನಿಕ, ಸಮಕಾಲೀನ ಪ್ರಜ್ಞೆಯಲ್ಲಿ ಸೃಷ್ಟಿಯಾದ ಕುಮಾರವ್ಯಾಸನ ಮಹಾಭಾರತ ಕಾವ್ಯವು 21ನೆಯ ಶತಮಾನದ ರಾಜಕೀಯ ಪರಿಸ್ಥಿತಿ, ತೆರಿಗೆ ವ್ಯವಸ್ಥೆಗೆ ಪ್ರಸುತ್ತವಾಗಿದೆ ಎಂದು ಹಿರಿಯ ವಿದ್ವಾಂಸ ಡಾ.ಎ. ವಿ.ಪ್ರಸನ್ನ ತಿಳಿಸಿದರು.
ತುಮಕೂರು ವಿಶ್ವವಿದ್ಯಾನಿಲಯ ಕುಮಾರವ್ಯಾಸ ಅಧ್ಯಯನ ಪೀಠವು ಆಯೋಜಿಸಿದ್ದ ‘ಕುಮಾರವ್ಯಾಸ ಭಾರತದಲ್ಲಿ ಉದ್ಯೋಗ ಪರ್ವ: ಒಂದು ಚಿಂತನೆ’ ಕುರಿತ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.ಕುಮಾರವ್ಯಾಸ ಲಿಪಿಕಾರ ಮಾತ್ರವಲ್ಲದೇ, ಜನಾಂಗದ-ಸಮುದಾಯದ ಧ್ವನಿಯಾಗಿದ್ದ ಶ್ರೇಷ್ಠ ಕವಿ. ಎಲ್ಲರ ನಾಲಿಗೆಯ ಮೇಲೆ ನಲಿದು ನರ್ತಿಸಿದ ಕಾವ್ಯಗಳು ಕುಮಾರವ್ಯಾಸನದ್ದು.ವ್ಯಾಸರ ಮಹಾಭಾರತವನ್ನು ಕನ್ನಡೀಕರಿಸಿದ ಕವಿ ಅನ್ನುವುದಕ್ಕಿಂತಲೂ, ಮಹಾಭಾರತವನ್ನು ಮರುಸೃಷ್ಟಿ ಮಾಡಿದ ಬಂಧನವಿಲ್ಲದ, ಒತ್ತಡಗಳಿಗೆ ಸಿಲುಕದ, ಆಸ್ಥಾನ ಮುಕ್ತ ಕವಿ ಎಂದು ತಿಳಿಸಿದರು.
ಉದ್ಯೋಗವನ್ನುಉಜ್ಜುಗವೆಂದು ತನ್ನ ಕಾವ್ಯಗಳಲ್ಲಿ ಬಳಸಿ, ಅರ್ಥವನ್ನು ಪ್ರಾರಂಭವೆಂದು ರೂಪಕಗಳಲ್ಲಿ ಸೇರಿಸಿ, ಕೃಷ್ಣನು ಸಂಧಾನಕ್ಕೆ, ಪಾಂಡವರು ಯುದ್ಧಕ್ಕೆ, ಬಲರಾಮ ತನ್ನ ಇರುವಿಕೆಗೆ, ದುರ್ಯೋಧನ ಕೃಷ್ಣನ ಬೆಂಬಲಕ್ಕಾಗಿ, ಇಂದ್ರನು ಅರ್ಜುನನ್ನು ಮೊದಲಿಗೆ ಕೃಷ್ಣನ ಬಳಿ ಕಳುಹಿಸಲು, ದ್ರೌಪದಿ ಎಲ್ಲರನ್ನೂ ಉಜ್ಜುಗಿಸಲು- ಹೀಗೆ ಉದ್ಯೋಗ ಪರ್ವದ ಪ್ರಾರಂಭವನ್ನು ಕುಮಾರವ್ಯಾಸ ಚಿತ್ರಿಸಿದ್ದಾನೆ.
ಪಾಂಡವರ ಸೋದರ ಮಾವ ಶಲ್ಯನೊಂದಿಗೆ ದುರ್ಯೋಧನ ಮಾಡಿದ ರಾಜಕೀಯವನ್ನು ಪ್ರಸ್ತುತ ರಾಜಕೀಯ ಸ್ಥಿತಿ-ಗತಿಗಳಿಗೆ ಹೋಲಿಸಬಹುದಾಗಿದೆ.ವ್ಯಾಸರ ಮಹಾಭಾರತದಲ್ಲಿ ವಿಸ್ತಾರವಿದ್ದರೂ, ನಿರ್ಣಯಗಳಲ್ಲಿ ಸ್ಪಷ್ಟತೆ ಇರಲಿಲ್ಲ. ಯಾರಿಗೆ ಯುದ್ಧದ ಅಗತ್ಯವಿದೆ, ಸಂಧಾನದ ಮನಸ್ಸಿದೆ ಎಂಬುದನ್ನು ವ್ಯಾಸರು ಅಸ್ಪಷ್ಟವಾಗಿ ಚಿತ್ರಿಸಿದ್ದಾರೆ.ಆದರೆ ಕುಮಾರವ್ಯಾಸನ ಕಾವ್ಯಗಳಲ್ಲಿ ಸ್ಪಷ್ಟತೆಯು ಎದ್ದು ಕಾಣುತ್ತದೆ ಎಂದು ತಿಳಿಸಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ತುಮಕೂರು ವಿವಿ ಕುಮಾರವ್ಯಾಸ ಅಧ್ಯಯನ ಪೀಠದ ಸಂಯೋಜಕ ಡಾ. ಪಿ. ಎಂ.ಗಂಗಾಧರಯ್ಯ, ಪ್ರತಿಭೆಯ ಪ್ರಜ್ಞೆಗೆ ಸಾಕ್ಷಿ-ಜ್ಞಾನಕಟ್ಟಿ ಕೊಡುವ ಕಾಯಕ ಅಧ್ಯಯನ ಪೀಠಗಳದ್ದಾಗಬೇಕು ಎಂದು ಹೇಳಿದರು.
ವಿವಿ ಸಿಂಡಿಕೇಟ್ ಸದಸ್ಯಡಾ.ಕೆ.ರಾಜೀವಲೋಚನ, ಡಾ.ಡಿ. ವಿ. ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ.ನಿತ್ಯಾನಂದ ಬಿ.ಶೆಟ್ಟಿ ಉಪಸ್ಥಿತರಿದ್ದರು .ಸಹಾಯಕ ಪ್ರಾಧ್ಯಾಪಕಿ ಡಾ.ಗೀತಾ ವಸಂತ ನಿರೂಪಿಸಿದರು.