ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಮಂಡಳಿಯು ನೀಡಿದ ಈ ಮಾನ್ಯತೆಯು ಪ್ರವೇಶ ಮಟ್ಟದ ಪ್ರಮಾಣೀಕರಣವಾಗಿದ್ದು ಅತ್ಯುತ್ತಮ ದರ್ಜೆಯ ಆಸ್ಪತ್ರೆಗಳಿಗೆ ಈ ಮಾನ್ಯತೆ ಲಭ್ಯವಾಗುತ್ತದೆ. ಹಾನಗಲ್ಲ ಶ್ರೀ ಕುಮಾರೇಶ್ವರ ಆಸ್ಪತ್ರೆಯ ಸೇವಾಗುಣಮಟ್ಟ, ವೈದ್ಯಕೀಯ ಸೌಲಭ್ಯ, ವೈದ್ಯರ ಕಾರ್ಯಕ್ಷಮತೆ, ಅರೆವೈದ್ಯಕೀಯ ಮತ್ತು ನರ್ಸಿಂಗ್ ಸಿಬ್ಬಂದಿಯ ಸೇವಾಮನೋಭಾವ, ಪ್ರಯೋಗಾಲಯಗಳು, ಆಸ್ಪತ್ರೆಯ ಕಟ್ಟಡ ಈ ಎಲ್ಲವುಗಳನ್ನು ಪರಿಶೀಲಿಸಿದ ರಾಷ್ಟ್ರೀಯ ಆಸ್ಪತ್ರೆಗಳ ಮೌಲೀಕರಣ ಮಂಡಳಿ ಆಸ್ಪತ್ರೆಗೆ ಪ್ರವೇಶ ಮಟ್ಟದ ಪ್ರಮಾಣೀಕರಣ ಮಾನ್ಯತೆ ನೀಡಿದೆ.
ಪ್ರಮಾಣಪತ್ರ ಸ್ವೀಕರಿಸಿ ಮಾತನಾಡಿದ ಬಿ.ವಿ.ವಿ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಸಿ.ಚರಂತಿಮಠ ಅವರು , ಎನ್.ಎ.ಬಿ.ಎಚ್ ನಿಂದ ದೊರೆತ ಈ ಮಾನ್ಯತೆಯು ಕುಮಾರೇಶ್ವರ ಆಸ್ಪತ್ರೆಯ ಸೇವಾ ಗುಣಮಟ್ಟದ ಶ್ರೇಷ್ಠತೆಗೊಂದು ನಿದರ್ಶನವಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಗುಣಾತ್ಮಕ ಸೇವೆಯನ್ನು ಸಾರ್ವಜನಿಕರಿಗೆ ಒದಗಿಸಲು ಪ್ರೇರಣೆ ಮತ್ತು ಸ್ಫೂರ್ತಿ ದೊರೆತಂತಾಗಿದೆ. ವೈದ್ಯಕೀಯ, ಅರೆ ವೈದ್ಯಕೀಯ ಮತ್ತು ನರ್ಸಿಂಗ್ ಸಿಬ್ಬಂದಿಯ ಅವಿರತ ಪರಿಶ್ರಮ ಹಾಗೂ ಪ್ರಾಮಾಣಿಕ ಪ್ರಯತ್ನದಿಂದ ಈ ಪ್ರಮಾಣೀಕರಣ ಆಸ್ಪತ್ರೆಗೆ ಪ್ರಾಪ್ತವಾಗಿದೆ. ಈ ವಿಶೇಷ ಸಾಧನೆಗಾಗಿ ಎಲ್ಲರನ್ನೂ ನಾನು ಅಭಿನಂದಿಸುತ್ತೇನೆ'''' ಎಂದು ಹೇಳಿದರು.ಈ ಸಂದರ್ಭ ಬಿ.ವಿ.ವಿ.ಸಂಘದ ಗೌರವ ಕಾರ್ಯದರ್ಶಿಗಳಾದ ಮಹೇಶ .ಅಥಣಿ, ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷರಾದ ಅಶೋಕ ಸಜ್ಜನ (ಬೇವೂರ), ಮೆಡಿಕಲ್ ಕಾಲೇಜ್ ಪ್ರಾಚಾರ್ಯ ಡಾ.ಭುವನೇಶ್ವರಿ ಯಳಮಲಿ, ವೈದ್ಯಕೀಯ ಅಧೀಕ್ಷಕ ಡಾ.ಶ್ರೀರಾಮ ಕೋರಾ ಮತ್ತು ವಿವಿಧ ವಿಭಾಗಗಳ ವೈದ್ಯರು ಉಪಸ್ಥಿತರಿದ್ದರು.