ಕನ್ನಡಪ್ರಭ ವಾರ್ತೆ ಶಿರಾ ರಾಜ್ಯ ಸರಕಾರ ಕೈಗೊಂಡಿರುವ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಜಾತಿ ಜನಗಣತಿಯಲ್ಲಿ ಕುಂಚಿಟಿಗ ಸಮುದಾಯದ ಯುವಕರು ಭವಿಷ್ಯದ ದೃಷ್ಟಿಯಿಂದ ಧರ್ಮ ಹಿಂದು, ಜಾತಿ ಒಕ್ಕಲಿಗ, ಉಪ ಜಾತಿ ಕುಂಚಿಟಿಗ ಎಂದು ಬರೆಸುವಂತೆ ಸ್ಫಟಿಕಪುರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ನಂಜಾವಧೂತ ಸ್ವಾಮೀಜಿ ಕರೆ ನೀಡಿದರು. ಈ ಬಗ್ಗೆ ಅವರು ಸೋಮವಾರ ತಾಲೂಕಿನ ಪಟ್ಟನಾಯಕನಹಳ್ಳಿ ಶ್ರೀ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠದ ಆವರಣದಲ್ಲಿ ಏರ್ಪಡಿಸಿದ್ದ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಜಾಗೃತಿ ಸಭೆಯ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು. ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಜಾತಿ ಜನಗಣತಿಯಲ್ಲಿ ಕುಂಚಿಟಿಗರಲ್ಲಿ ಗೊಂದಲ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಇದನ್ನು ಪ್ರಜ್ಞಾವಂತರು ಅರ್ಥ ಮಾಡಿಕೊಳ್ಳಬೇಕಿದ್ದು, ಕುಂಚಿಟಿಗರು ಧರ್ಮಕಾಲಂನಲ್ಲಿ ಹಿಂದು, ಜಾತಿ ಕಾಲಂ ನಲ್ಲಿ ಒಕ್ಕಲಿಗ, ಉಪಜಾತಿ ಕಾಲಂ ನಲ್ಲಿ ಕುಂಚಿಟಿಗ ಎಂದು ಬರೆಸುವ ಮೂಲಕ ಒಕ್ಕಲಿಗ ಸಮುದಾಯದ ನೆರಳಲ್ಲಿ ಓಬಿಸಿ ಮೀಸಲಾತಿ ಪಡೆಯಲು ಮುನ್ನುಡಿ ಬರೆಯಬೇಕಾಗಿದೆ. ನಮಗೆ ಯಾರು ಬೆದರಿಸಿ ಹೆದರಿಸಿ ಒಕ್ಕಲಿಗ ಎನ್ನುವಂತೆ ಹೇಳಿಲ್ಲ ನಾವು ಮೂಲದಲ್ಲಿ ಕುಂಚ ಒಕ್ಕಲಿಗರಾಗಿದ್ದು ನೇಗಿಲು ಹಿಡಿದು ದುಡಿಯುವ ಕಾರಣ ಒಕ್ಕಲಿಗರಾಗಿದ್ದೇವೆ ಇದನ್ನು ಮರೆಮಾಚಿ ನಾವು ಸ್ವತಂತ್ರ ಅಸ್ತಿತ್ವ ಹೊಂದಿರುವ ಜಾತಿ ಎಂದು ಪ್ರಚಾರ ಮಾಡುತ್ತಾರೆ ಅದರೆ ಒಕ್ಕಲಿಗ ಜಾತಿಯ ಉಪ ಜಾತಿಯಾಗಿ ಕುಂಚಿಟಿಗ ಇದೆ ಇದನ್ನು ಅರಿಯಬೇಕಿದೆ ಎಂದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಟಿ.ಬಿ.ಜಯಚಂದ್ರ ನಾವು ರಾಜಕೀಯವಾಗಿ ಪ್ರಬಲರಾಗಬೇಕಾದರೆ ಇಚ್ಛಾಶಕ್ತಿ ಪ್ರದರ್ಶನ ಮಾಡಬೇಕಿದೆ. ನಮ್ಮತನವನ್ನು ಕಳೆದುಕೊಳ್ಳದೆ ನಾವು ಉಳಿಯಬೇಕಿದೆ ಜಾತಿ ಮತ್ತು ನೀರಾವರಿ ಹೋರಾಟದಲ್ಲಿ ನಾನು ಎಂದು ಸೋತಿಲ್ಲ. ಒಕ್ಕಲಿಗ ಸಮುದಾಯದ ಉಪಜಾತಿಯಾಗಿ ಸಮುದಾಯ ಹೋದಾಗ ಮಾತ್ರ ರಾಜ್ಯದಲ್ಲಿ ರಾಜಕೀಯ ಮತ್ತು ಇತರೆ ಕ್ಷೇತ್ರದಲ್ಲಿ ಪ್ರಾತಿನಿಧ್ಯ ಪಡೆಯಲು ಸಾಧ್ಯ ಎಂದರು. ವಿಧಾನ ಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ, ಮಾಜಿ ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಮಾತನಾಡಿದರು. ಜೆಡಿಎಸ್ ಮುಖಂಡ ಅರ್.ಉಗ್ರೇಶ್ , ಪಿ.ಅರ್.ಮಂಜುನಾಥ್, ಶ್ರೀನಿವಾಸಯ್ಯ,ಕಾಮರಾಜು, ರಾಮಕೃಷ್ಣ, ಜೆಡಿಎಸ್ ಮುಖಂಡ ಯಶೋಧರ ,ಶಿವಪ್ರಸಾದ್ ಇತರರಿದ್ದರು.