ಕನ್ನಡಪ್ರಭ ವಾರ್ತೆ, ತುಮಕೂರುಕುಂಚಿಟಿಗ ಎಂಬುದು ಒಂದು ಸ್ವತಂತ್ರ ಜಾತಿಯಾಗಿದ್ದು, ಯಾವುದೇ ಜಾತಿಯ ಉಪಪಂಗಡವಲ್ಲ. 1928 ರಲ್ಲಿಯೇ ಮೈಸೂರು ಮಹಾರಾಜರು ಸ್ಪಷ್ಷ ಆದೇಶ ಮಾಡಿದ್ದು, ಮುಂದಿನ ತಿಂಗಳಿನಿಂದ ನಡೆಯುವ ಜಾತಿ ಗಣತಿಯಲ್ಲಿ ಕುಂಚಿಟಿಗರು ತಮ್ಮಜಾತಿ ಕಲಂ ನಲ್ಲಿ ಹಿಂದುಕುಂಚಿಟಿಗ ಎಂದಷ್ಟೇ ನಮೂದಿಸುವ ಮೂಲಕ ಒಗ್ಗಟ್ಟು ಪ್ರದರ್ಶಿಸಿ, ಕೇಂದ್ರ ಓಬಿಸಿ ಪಟ್ಟಿಗೆ ಸೇರಿಸಲು ಸಹಕರಿಸುವಂತೆ ಅಖಿಲ ಕುಂಚಿಟಿಗರ ಮಹಾಮಂಡಲ ರಾಜ್ಯಾಧ್ಯಕ್ಷ ಹೆಚ್.ರಂಗ ಹನುಮಯ್ಯ ತಿಳಿಸಿದ್ದಾರೆ.ನಗರದ ಕುಂಚಶ್ರೀ ಪ್ಯಾಲೇಸ್‌ನಲ್ಲಿ ಅಖಿಲ ಕುಂಚಟಿಗರ ಮಹಾಮಂಡಲ ಹಾಗೂ ತುಮಕೂರು ಜಿಲ್ಲಾ ಕುಂಚಿಟಿಗರ ವಿದ್ಯಾಭಿವೃದ್ದಿ ಸಂಘದ ವತಿಯಿಂದ ಜಾತಿಗಣತಿಗೆ ಸಂಬಂದಿಸಿದಂತೆ 2025 ರ ಸೆಪ್ಟಂಬರ್ 12 ರಂದು ನಡೆಯುವ ರಾಜ್ಯಮಟ್ಟದ ಕುಂಚಿಟಿಗರ ಮಹಾಸಮ್ಮಿಲನ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.ಮೈಸೂರು ಮಹಾರಾಜರು 17-08-1928 ರಲ್ಲಿ ಮೈಸೂರು ಸರಕಾರದ ಆದೇಶ ಸಂಖ್ಯೆ 1513-1712/ಸಿಆರ್‌ಬಿ 8-2ಎಸ್-01ರಲ್ಲಿ ಕುಂಚಿಟಿಗ ಎಂಬುದು ಸ್ವತಂತ್ರಜಾತಿ. ಯಾವಜಾತಿಯ ಉಪ ಜಾತಿಯಲ್ಲ ಎಂದು ಸ್ಪಷ್ಟಆದೇಶ ಮಾಡಿದೆ. ಅಂದು ಕೇವಲ 1.28 ಲಕ್ಷ ಜನರಿಂದ ಕುಂಚಿಟಿಗರು, ಇಂದು 35-40 ಲಕ್ಷ ಜನರಿದ್ದೇವೆ. ಹಾಗಾಗಿ ಮುಂಬರುವ ಜಾತಿಗಣತಿಯ ವೇಳೆ ಕುಂಚಟಿಗ ಸಮುದಾಯದ ಎಲ್ಲಾ ಜನರು ತಮ್ಮಜಾತಿ ಕಲಂ ನಲ್ಲಿ ಹಿಂದು ಕುಂಚಿಟಿಗ ಎಂದು ಮಾತ್ರ ನಮೂದಿಸಬೇಕು.ಕುಂಚಿಟಿಗ ಒಕ್ಕಲಿಗ ಮತ್ತಿತರರ ಹೆಸರುಗಳಿಂದ ನಮೂದಿಸಿದರೆ ಕೇಂದ್ರ ಹಿಂದುಳಿದ ಪಟ್ಟಿಗೆ ಸೇರ್ಪಡೆಯಾಗಲು ಕಷ್ಟವಾಗಲಿದೆ ಎಂದರು.ಕುಂಚಿಟಿಗರನ್ನು ಕೇಂದ್ರ ಒಬಿಸಿ ಪಟ್ಟಿಗೆ ಸೇರಿಸಬೇಕೆಂದು ಕಳೆದ 30 ವರ್ಷಗಳಿಂದಲೂ ಹೋರಾಟ ಮಾಡುತ್ತಲೇ ಬಂದಿದ್ದೇವೆ.ಆದರೆ ಇದುವರೆಗೂ ಕೈಗೂಡಿಲ್ಲ. ಇದುವರೆಗೂ ಅಧಿಕಾರ ನಡೆಸಿ ಎಲ್ಲಾ ಸರಕಾರಗಳು ನಮ್ಮ ಮನವಿಯನ್ನು ಪಡೆದು, ಒಂದು ಕವರಿಂಗ್ ಲೆಟರ್ ಹಾಕಿ ಇಡುತ್ತಿದ್ದು ಬಿಟ್ಟರೆ ಯಾವ ಪ್ರಯೋಜನವೂ ಆಗಿರಲಿಲ್ಲ. ಆದರೆ ಸಿದ್ದರಾಮಯ್ಯ ಅವರ ಸರಕಾರದಲ್ಲಿ ನಮ್ಮ ಸಂಘದ ಮನವಿಯನ್ನು ಪುರಸ್ಕರಿಸಿ, ಸಚಿವ ಸಂಪುಟದಲ್ಲಿ ಇಟ್ಟು, ಚರ್ಚೆ ನಡೆಸಿ, 30-10-2023 ರಂದು ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಿದೆ. ಇದಕ್ಕಾಗಿ ಸರಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.ಪ್ರಸ್ತುತ ಕುಂಚಿಟಿಗರನ್ನು ಕೇಂದ್ರ ಒಬಿಸಿ ಪಟ್ಟಿಗೆ ಸೇರಿಸುವ ಸಂಬಂಧ ಕಡತ ಕೇಂದ್ರ ಸರಕಾರದ ಬಳಿ ಇದ್ದು, ತುಮಕೂರು ಲೋಕಸಭಾ ಕ್ಷೇತ್ರದ ಸಂಸದರು, ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರೊಂದಿಗೆ ಸಮುದಾಯದ ಹಿರಿಯರ ನಿಯೋಗ ಹೋಗಿ ಮನವಿ ಮಾಡಲಾಗಿದೆ. ಅಲ್ಲದೆ ಅಧಿವೇಶನದಲ್ಲಿಯೂ ಸೋಮಣ್ಣ ಚರ್ಚೆ ಮಾಡಿದ್ದಾರೆ. ಈ ಬಗ್ಗೆ ಮಾಹಿತಿಯನ್ನು ಕೇಂದ್ರ ಓಬಿಸಿ ಇಲಾಖೆಗೆ ಹಿಂಬರಹದ ಮೂಲಕ ತಿಳಿಸಿದೆ. ಇದಲ್ಲದೆ ಅಖಿಲ ಕುಂಚಟಿಗರ ಮಹಾಮಂಡಲದ ವತಿಯಿಂದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ,ಕೇಂದ್ರದ ಮಂತ್ರಿಗಳಾದ ಎಚ್.ಡಿ. ಕುಮಾರ ಸ್ವಾಮಿ, ಪ್ರಹ್ಲಾದ್ ಜೋಶಿ, ಶೋಭ ಕರಂದ್ಲಾಜೆ ಸೇರಿದಂತೆ ಎಲ್ಲಾ ಸಂಸದರಿಗೆ ಮನವಿ ಮಾಡಲಾಗಿದ್ದು, ಅವರು ಸಹ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.ನಾವೆಲ್ಲರೂ ಜಾತಿ ಗಣತಿಯಲ್ಲಿ ಒಗ್ಗಟ್ಟು ಪ್ರದರ್ಶಿಸುವ ಕೆಲಸ ಮಾಡಬೇಕಾಗಿದೆ. ನಮ್ಮ ಜನಸಂಖೆಯನ್ನು ಸಾಭೀತು ಪಡಿಸಿಕೊಳ್ಳಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ನೀಡಿದ ಒಂದು ಸುವರ್ಣ ಅವಕಾಶ ಜಾತಿಗಣತಿ, ಹಾಗಾಗಿ ಇದನ್ನು ನಾವೆಲ್ಲರೂ ಹಿಂದು ಕುಂಚಿಟಿಗ ಎಂದು ನಮೂದಿಸುವ ಮೂಲಕ ಮತ್ತಷ್ಟು ಗಟ್ಟಿಗೊಳ್ಳಬೇಕಾಗಿದೆ ಎಂದರು.ಅಖಿಲ ಕುಂಚಿಟಿಗ ಮಹಾಮಂಡಲದ ರಾಜ್ಯ ಉಪಾಧ್ಯಕ್ಷ ಎಸ್.ಎಲ್.ಗೋವಿಂದ ರಾಜು ಮಾತನಾಡಿದರು. ವೇದಿಕೆಯಲ್ಲಿ ಅಖಿಲ ಕುಂಚಿಟಿಗ ಮಹಾಮಂಡಳದ ಉಪಾಧ್ಯಕ್ಷ ಬಿ.ಎಸ್.ಜಗದೀಶ್‌ಗೌಡ, ಕೆ.ಆರ್.ಬಾಲಚಂದ್ರ ಜೋಡಿದಾರ್, ವೈ.ಎಂ.ಅಂಜಿನಪ್ಪ,ಶೇಷಾಚಲಮೂರ್ತಿ, ಪಾಂಡುರಂಗಯ್ಯ,ಮಹಿಳಾ ಮುಖಂಡರಾದ ಗಾಯಿತ್ರಿ, ಮೈಸೂರು ಅಧ್ಯಕ್ಷ ಗಣೇಶ್, ಪಟೇಲ್ ದೊಡ್ಡೇಗೌಡ, ಕುಂಚಿಟಿಗರ ವಿದ್ಯಾಭಿವೃದ್ದಿ ಸಂಘದ ಮಾಜಿ ಅಧ್ಯಕ್ಷ ದೊಡ್ಡಲಿಂಗಪ್ಪ,ಪುಟ್ಟೀರಪ್ಪ, ನಾಗೇಶ್ ನೆಲಮಂಗಲ,ಡಾ.ಬೋಗಣ್ಣ, ಪಾಂಡುರಂಗಪ್ಪ, ಕೃಷ್ಣಪ್ಪ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕುಗಳ ಮುಖಂಡರು ಉಪಸ್ಥಿತರಿದ್ದರು.