ಕನ್ನಡಪ್ರಭ ವಾರ್ತೆ ಮಧುಗಿರಿ
ಕುಂಚಿಟಿಗ ಸಮಾಜ ಬಂಧುಗಳು ಸಂಘಟಿತರಾಗುವ ನಿಟ್ಟಿನಲ್ಲಿ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಹಾಗೂ ಧಾರ್ಮಿಕವಾಗಿ ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಎಂದು ಎಲೆರಾಂಪುರ ಕುಂಚಿಟಿಗ ಮಠದ ಪೀಠಾಧ್ಯಕ್ಷ ಡಾ.ಶ್ರೀಶ್ರೀ ಹನುಮಂತನಾಥಸ್ವಾಮಿಜಿ ಕರೆ ನೀಡಿದರು.ಪಟ್ಟಣದ ಕುಂಚಿಟಿಗ ವಕ್ಕಲಿಗರ ಸಂಘದ ಸಭಾಂಗಣದಲ್ಲಿ ಭಾನುವಾರ ಮಧುಗಿರಿ ತಾಲೂಕು ಕುಂಚಿಟಿಗ ಒಕ್ಕಲಿಗರ ಸಂಘ ಕುಂಚಿಟಿಗ ಒಕ್ಕಲಿಗ ನೌಕರರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ನಾಡಪ್ರಭು ಕೆಂಪೇಗೌಡ, ಡಿ.ಬನುಮಯ್ಯ ಅವರ ಜಯಂತಿ ಆಚರಣೆ ಹಾಗೂ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
ಹಸಿದು ಬಂದವರಿಗೆ ಅನ್ನವಿಟ್ಟು ಸಲುಹಿದ ಸಮಾಜ ನಮ್ಮದು, ಜಗತ್ತಿನ ಎಲ್ಲ ಧರ್ಮ, ಜಾತಿ, ಜನಾಂಗದವರನ್ನು ಪ್ರೀತಿ, ವಿಶ್ವಾಸ, ಸ್ನೇಹ , ಸೌರ್ಹಾದತೆಯಂದ ಕಾಣುವ ವಿಶಾಲ ದೃಷ್ಠಿ ಬೆಳಸಿಕೊಂಡಿರುವ ಜನಾಂಗ ನಮ್ಮದು. ಆ ಮೂಲಕ ವಿದ್ಯಾರ್ಥಿಗಳು ಸಂಸ್ಕೃತಿ, ಸಂಸ್ಕಾರ, ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ವಿವಿಧ ಶೈಕ್ಷಣಿಕ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿದವರನ್ನು ಗೌರವಿಸುವುದು ಸಂತಸ ತಂದಿದೆ ಎಂದರು.ಜಿಲ್ಲೆಯಲ್ಲಿ 3 ಲಕ್ಷ 92 ಸಾವಿರ ಕುಂಚಿಗರಿದ್ದರೂ ರಾಜಕೀಯವಾಗಿ ಬೆಳೆಯಲು ಆಗದೆ ಹಿಂದೆ ಬೀಳುತ್ತಿದ್ದೇವೆ. ಆಸೂಹೇ, ದ್ವೇಶ ಅಸಮಾಧಾನಗಳ ಬಿಸಿಯಿಂದಾಗಿ ರಾಜಕೀಯವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಸ್ಥಾನ ಮಾನ ಗಳಿಸಲು ಸಾದ್ಯವಾಗುತ್ತಿಲ್ಲ. ಹಾಗಾಗಿ ಇದನ್ನು ಮೀರಿ ಅತಿ ಎತ್ತರಕ್ಕೆ ಬೆಳೆಯುವ ಸಂಕಲ್ಪ ಮಾಡಬೇಕು. ಕುಂಚಿಟಿಗ ಬಂಧುಗಳು ಪರಸ್ಪರರು ಒಗ್ಗಟ್ಟಾಗಿ ಜಾಗೃತರಾಗಿ ಸಂಘಟಿತರಾಗಬೇಕು. ದಕ್ಷಿಣ ಭಾರತದ ಕರ್ನಾಟಕ , ಆಂಧ್ರ, ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಹೆಚ್ಚು ಕುಲಬಾಂಧವರಿದ್ದು ಅಲ್ಲಿ ರಾಜಕೀಯ ಕ್ಷೇತ್ರದಲ್ಲಿ ಹೆಚ್ಚಿದ್ದಾರೆ. ಆ ನಿಟ್ಟಿನಲ್ಲಿ ಕರ್ನಾಟಕದ ವಿಧಾನ ಸೌಧದಲ್ಲಿ ಕನಿಷ್ಟ 10 ಎಂಎಲ್‌ಗಳನ್ನು ನನ್ನ ಜೀವಿತಾವಧಿಯಲ್ಲಿ ನೋಡಬೇಕು ಎಂಬುದು ನನ್ನ ಮಹಾದಾಸೆ ಎಂದರು.
ಕೌಶಲ್ಯಾಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ ಮಾತನಾಡಿ, ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಜ್ಞಾನ ಸಂಪಾದಿಸಿಕೊಂಡು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಿ ಉನ್ನತ ಹುದ್ದೆಗಳನ್ನು ಗಳಿಸಿ ರಾಷ್ಟ್ರ ಮಟ್ಟದಲ್ಲಿ ಸೇವೆ ಸಲ್ಲಿಸಿ. ನಮ್ಮ ಸಮಾಜ ಸದಾ ನಿಮ್ಮ ಬೆಂಬಲಕ್ಕಿದೆ. ಸಮಾಜದ ಮಕ್ಕಳಿಗೆ ಆರ್ಥಿಕ ನೆರವು ನೀಡುವುದಾಗಿ ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು.ನೌಕರ ಸಂಘದ ಅಧ್ಯಕ್ಷ ಕರೇಗೌಡ, ಈಶ್ವರಪ್ಪ, ಡಿ.ಎಸ್.ಸಿದ್ದಪ್ಪ ಮಾತನಾಡಿದರು. ತಾಲೂಕು ಕುಂಚಿಟಿಗರ ಸಂಘದ ಅಧ್ಯಕ್ಷ ರಾಜಶೇಖರ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷ ಡಿ.ಎಸ್.ಸಿದ್ದಪ್ಪ, ಕಾರ್ಯದರ್ಶಿ ಉಮೇಶ್, ಖಜಾಂಚಿ ರಾಮಚಂದ್ರಪ್ಪ, ಮಹಿಳಾ ಸಂಘದ ಅಧ್ಯಕ್ಷೆ ಸಾವಿತ್ರಮ್ಮ, ಲಕ್ಷ್ಮಮ್ಮ, ನಿರ್ದೇಶಕರಾದ, ಜಿ.ಜಯರಾಮಯ್ಯ, ಜಗದೀಶ್, ವೀರಣ್ಣ, ಶಿವಲಿಂಗಣ್ಣ, ರಂಗನಾಥ್, ಹರೀಶ್, ಕಲ್ಪನಾ, ಮ್ಯಾನೇಜರ್ ರಾಮಕೃಷ್ಣಪ್ಪ , ಸುಧಾ ಗಂಗರಾಜು, ಈಶ್ವರಪ್ಪ ಸೇರಿದಂತೆ ಅನೇಕರಿದ್ದರು. ಜಯರಾಮಯ್ಯ ಸ್ವಾಗತಿಸಿ ಹೊನ್ನೇಶ್ ನಿರೂಪಿಸಿ ವಂದಿಸಿದರು.