ಕುಂದಾಪುರ: ನಾಳೆ 20ನೇ ಕನ್ನಡ ಸಾಹಿತ್ಯ ಸಮ್ಮೇಳನ

KannadaprabhaNewsNetwork |  
Published : Jun 27, 2026, 01:15 AM IST
ಕುಂದಾಪುರ  | Kannada Prabha

ಸಾರಾಂಶ

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕುಂದಾಪುರ ತಾಲೂಕು ಘಟಕದ ಆಶ್ರಯದಲ್ಲಿ ಕುಂದಾಪುರ ತಾಲೂಕಿನ 20ನೇ ಕನ್ನಡ ಸಾಹಿತ್ಯ ಸಮ್ಮೇಳನವು ಜೂನ್ 28ರಂದು ಕುಂಭಾಶಿ ಗ್ರಾಮದ ಆನೆಗುಡ್ಡೆಯ ಶ್ರೀ ವಿನಾಯಕ ಸಭಾಂಗಣದಲ್ಲಿ ನಡೆಯಲಿದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಉಮೇಶ್ ಪುತ್ರನ್ ತಿಳಿಸಿದ್ದಾರೆ.

ಕುಂದಾಪುರ: ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕುಂದಾಪುರ ತಾಲೂಕು ಘಟಕದ ಆಶ್ರಯದಲ್ಲಿ ಕುಂದಾಪುರ ತಾಲೂಕಿನ 20ನೇ ಕನ್ನಡ ಸಾಹಿತ್ಯ ಸಮ್ಮೇಳನವು ಜೂನ್ 28ರಂದು ಕುಂಭಾಶಿ ಗ್ರಾಮದ ಆನೆಗುಡ್ಡೆಯ ಶ್ರೀ ವಿನಾಯಕ ಸಭಾಂಗಣದಲ್ಲಿ ನಡೆಯಲಿದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಉಮೇಶ್ ಪುತ್ರನ್ ತಿಳಿಸಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿರಿಯ ಪತ್ರಕರ್ತ ಹಾಗೂ ಲೇಖಕ ಯು.ಎಸ್. ಶೆಣೈ ಸಮ್ಮೇಳನದ ಅಧ್ಯಕ್ಷತೆ ವಹಿಸಲಿದ್ದು, ಬೆಳಗ್ಗೆ 8 ಗಂಟೆಗೆ ರಾಷ್ಟ್ರಧ್ವಜಾರೋಹಣದೊಂದಿಗೆ ಕಾರ್ಯಕ್ರಮ ಆರಂಭವಾಗಿ ಸಂಜೆ 6 ಗಂಟೆಯವರೆಗೆ ವಿವಿಧ ಸಾಹಿತ್ಯ, ಸಾಂಸ್ಕೃತಿಕ ಹಾಗೂ ಚಿಂತನಾತ್ಮಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ಧ್ವಜಾರೋಹಣದ ಬಳಿಕ ಶಾಲಾ ವಿದ್ಯಾರ್ಥಿಗಳು, ವಿವಿಧ ಸಂಘ-ಸಂಸ್ಥೆಗಳು, ಗ್ರಾಮಾಭಿವೃದ್ಧಿ ಯೋಜನೆ ಸದಸ್ಯರು, ಭಜನಾ ತಂಡಗಳು ಹಾಗೂ ಸಾರ್ವಜನಿಕರ ಪಾಲ್ಗೊಳ್ಳುವಿಕೆಯಲ್ಲಿ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಲಿದೆ. ಬೆಳಗ್ಗೆ 10 ಗಂಟೆಗೆ ಲೇಖಕ ಡಾ. ನರೇಂದ್ರ ರೈ ದೇರ್ಲ ಸಮ್ಮೇಳನವನ್ನು ಉದ್ಘಾಟಿಸಲಿದ್ದು, ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಶಯ ನುಡಿಗಳನ್ನಾಡಲಿದ್ದಾರೆ. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಪ್ರೊ. ಬಾಲಕೃಷ್ಣ ಶೆಟ್ಟಿ ಮೊಳಹಳ್ಳಿ ಹಾಗೂ ರಥಶಿಲ್ಪಿ ಲಕ್ಷ್ಮಿನಾರಾಯಣ ಆಚಾರ್ಯ ಪುಸ್ತಕ ಮಳಿಗೆಯನ್ನು ಉದ್ಘಾಟಿಸಲಿದ್ದಾರೆ. ಸಂಸದ ಕೋಟ ಶ್ರೀನಿವಾಸ್ ಪೂಜಾರಿ, ಶಾಸಕ ಕಿರಣ್ ಕುಮಾರ್ ಕೊಡ್ಗಿ ಸೇರಿದಂತೆ ಜನಪ್ರತಿನಿಧಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.ಸಾಂಸ್ಕೃತಿಕ ಕಾರ್ಯಕ್ರಮಗಳ ವೈವಿಧ್ಯ: ಮಧ್ಯಾಹ್ನ 12.30ರಿಂದ ಭಂಡಾರ್ ಕಾರ್ಸ್ ಪ.ಪೂ. ಕಾಲೇಜಿನ ವಿದ್ಯಾರ್ಥಿಗಳಿಂದ, ಮಧ್ಯಾಹ್ನ 2.15ರಿಂದ ಕೋಟೇಶ್ವರ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳಿಂದ ಹಾಗೂ ಸಂಜೆ 3.45ರಿಂದ ಮಯೂರಿ ನೃತ್ಯ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಸಮಾರೋಪ ಹಾಗೂ ಸನ್ಮಾನ: ಸಂಜೆಯ ಸಮಾರೋಪ ಸಮಾರಂಭದಲ್ಲಿ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ದಿನೇಶ್ ಹೆಗ್ಡೆ ಮೊಳಹಳ್ಳಿ, ಮಲ್ಯಾಡಿ ಶಿವರಾಮ ಶೆಟ್ಟಿ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾಬು ಶೆಟ್ಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ.ವೈದ್ಯಕೀಯ, ಯಕ್ಷಗಾನ, ಕೃಷಿ, ಶಿಕ್ಷಣ, ಯೋಗ, ಮಹಿಳಾ ಸಬಲೀಕರಣ, ಚಿತ್ರಕಲೆ, ಭಜನೆ, ಸಮಾಜಸೇವೆ, ಸಾರ್ವಜನಿಕ ಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 15ಕ್ಕೂ ಹೆಚ್ಚು ಗಣ್ಯರನ್ನು ದಾನಿ ಹಾಗೂ ಉದ್ಯಮಿ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ ಸನ್ಮಾನಿಸಲಿದ್ದಾರೆ.ಅನಂತರ ‘ಮುದ್ರಣ ಮಾಧ್ಯಮ ಮನ್ವಂತರ’ ವಿಷಯದ ಕುರಿತು ಗೋಷ್ಠಿ ಹಾಗೂ ಯುವ ಕವಿಗೋಷ್ಠಿ ನಡೆಯಲಿದ್ದು, ಕವಿ ರಾಜೀವ ನಾಯಕ್ ನಿರ್ವಹಿಸಲಿದ್ದಾರೆ. ಕುಂಭಾಶಿಯ ಮಾಜಿ ಸಮ್ಮೇಳನಾಧ್ಯಕ್ಷ ವಿಶ್ವಂಭರ ಉಪಾಧ್ಯಾಯರ ಜನ್ಮಶತಮಾನೋತ್ಸವದ ಅಂಗವಾಗಿ ಅವರ ಹೆಸರಿನ ಸಂಸ್ಮರಣಾ ಪುರಸ್ಕಾರವನ್ನು ಖ್ಯಾತ ಗಮಕಿ ಹಾಗೂ ಲೇಖಕ ಡಾ. ರಾಘವೇಂದ್ರ ರಾವ್ ಅವರಿಗೆ ಪ್ರೊ. ಉಪೇಂದ್ರ ಸೋಮಯಾಜಿ ಪ್ರದಾನ ಮಾಡಲಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಕಸಾಪ ತಾಲೂಕು ಗೌರವ ಕಾರ್ಯದರ್ಶಿಗಳಾದ ದಿನಕರ ಆರ್. ಶೆಟ್ಟಿ ಹಾಗೂ ಅಕ್ಷತಾ ಗಿರೀಶ್ ಉಪಸ್ಥಿತರಿದ್ದರು.

ಕುಂದಾಪ್ರ ಕನ್ನಡ ಕಡೆಗಣಿಸಿಲ್ಲ: ಸಮ್ಮೇಳನದಲ್ಲಿ ಕುಂದಾಪ್ರ ಕನ್ನಡ ಕುರಿತ ಗೋಷ್ಠಿ ಅಥವಾ ಚರ್ಚೆಗೆ ಅವಕಾಶ ನೀಡದಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಾ. ಉಮೇಶ್ ಪುತ್ರನ್, ‘ಕುಂದಾಪ್ರ ಕನ್ನಡವನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ. ಹಿಂದಿನ ಎಲ್ಲ ಸಾಹಿತ್ಯ ಸಮ್ಮೇಳನಗಳಲ್ಲೂ ಈ ವಿಷಯದ ಕುರಿತು ಗೋಷ್ಠಿ ಹಾಗೂ ಚರ್ಚೆಗಳನ್ನು ಆಯೋಜಿಸಲಾಗಿತ್ತು. ಈ ಬಾರಿ ಬೇರೆ ಸಮಕಾಲೀನ ವಿಷಯಗಳಿಗೆ ಆದ್ಯತೆ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜುಲೈಯಲ್ಲಿ ಬಾಲಿಕಾ ಜಾಗೃತಿ ಅಭಿಯಾನ
ಉಪ್ಪಿನಂಗಡಿ: ನೇತ್ರಾವತಿ ಒಡಲಿಗೆ ತ್ಯಾಜ್ಯ ನೀರು!