ಉಪ್ಪಿನಂಗಡಿ: ಜಿಲ್ಲೆಯ ಜೀವ ನದಿ ನೇತ್ರಾವತಿ ನದಿಯಲ್ಲಿ ಈ ಬಾರಿ ಮುಂಗಾರು ಮಳೆಯ ನೀರು ಹರಿಯದಿದ್ದರೂ ವಸತಿ ಸಮುಚ್ಚಯಗಳ ಶೌಚಾಲಯದ ತ್ಯಾಜ್ಯ ಸೇರಿದಂತೆ ಮಲಿನ ನೀರು ಹರಿಯುತ್ತಿದ್ದು, ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ.
ಈ ಬಗ್ಗೆ ನದಿಯ ಒಡಲಿನಲ್ಲಿ ವಸತಿ ಸಮುಚ್ಚಯದಿಂದ ಹರಿದು ಬಂದು ಸಂಗ್ರಹವಾಗಿರುವ ಮಲಿನ ನೀರು ಹರಿಯುವ ನದಿಯನ್ನು ಸೇರುತ್ತಿರುವ ದೃಶ್ಯವನ್ನು ಸೆರೆ ಹಿಡಿದಿರುವ ಉಪ್ಪಿನಂಗಡಿ ನೆಲ ಜಲ ಸಂರಕ್ಷಣಾ ಸಮಿತಿ ಅಧ್ಯಕ್ಷ ಕೈಲಾರ್ ರಾಜಗೋಪಾಲ ಭಟ್ ಜಿಲ್ಲೆಯ ಜೀವ ನದಿಯನ್ನು ಈ ಪ್ರಮಾಣದಲ್ಲಿ ಕೆಡಿಸುತ್ತಿರುವುದು ನಾಗರಿಕ ಸಮಾಜಕ್ಕೆ ಶೋಭೆ ಎನಿಸುವುದೇ ಎಂದು ಪ್ರಶ್ನಿಸಿದ್ದಾರೆ.ಈ ಬಗ್ಗೆ ವಸತಿ ಸಮುಚ್ಚಯದಲ್ಲಿನ ನಿವಾಸಿಯೊಬ್ಬಬ್ಬರು ಪ್ರತಿಕ್ರಿಯಿಸಿ, ಶೌಚಾಲಯದ ತ್ಯಾಜ್ಯ ವಿಲೇವಾರಿ ವೈಜ್ಞಾನಿಕವಾಗಿ ನಿರ್ವಹಿಸುವ ಅವಕಾಶವಿದ್ದರೂ, ಅದನ್ನು ಮಾಡದೆ ರಾತ್ರಿ ಹೊತ್ತು ನೇರವಾಗಿ ನದಿಗೆ ಬಿಡುವುದರಿಂದ ಪರಿಸರವಿಡೀ ದುರ್ನಾತ ಪಸಹರಿಸುತ್ತದೆ. ಮನೆಗೆ ಬಂದ ಅತಿಥಿಗಳು ದುರ್ನಾತ ಸಹಿಸಲಾಗದೆ ಮನೆಯಿಂದ ಹೊರಟ ಘಟನಾವಳಿಗಳು ನಡೆದು ಮುಜುಗರ ತರಿಸುತ್ತಿದೆ. ಆಡಳಿತ ವ್ಯವಸ್ಥೆ ಮೌನವಾಗಿದೆ ಎಂಬ ಅಳಲನ್ನು ತೋಡಿಕೊಂಡಿದ್ದಾರೆ.
ನದಿಗೆ ಶೌಚಾಲಯದ ತ್ಯಾಜ್ಯ ಬಿಡುತ್ತಿರುವ ಬಗ್ಗೆ, ರಾತ್ರಿ ಹೊತ್ತು ನದಿ ಪಾತ್ರದುದ್ದಕ್ಕೂ ಸಹಿಸಲಸಾಧ್ಯವಾದ ದುರ್ವಾಸನೆ ಪಸಹರಿಸುತ್ತಿರುವ ಬಗ್ಗೆ ಶಾಸಕರಲ್ಲಿ ಸಾರ್ವಜನಿಕರು ದೂರಿಕೊಂಡಾಗ, ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕೆಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರಾದರೂ, ಅದ್ಯಾವುದೂ ಪಾಲನೆಯಾಗುತ್ತಿಲ್ಲ ಎನ್ನುವುದಕ್ಕೆ ಈ ದೃಶ್ಯವೇ ಸಾಕ್ಷಿಯಾಗಿದೆ.