ಕನ್ನಡಪ್ರಭ ವಾರ್ತೆ ಕುಂದಾಪುರ
ಘಟಪ್ರಭಾ ಭಾಗದಲ್ಲಿ ಕಳೆದ 35 ವರ್ಷಗಳ ಸತತ ಪರಿಶ್ರಮ, ದುಡಿಮೆಯಿಂದ ತಮ್ಮ ಉದ್ಯಮ ಹಾಗೂ ವ್ಯವಹಾರಗಳಲ್ಲಿ ಹೆಸರು ಗಳಿಸಿದ ಘಟಪ್ರಭಾ ಜಯಶೀಲ ಶೆಟ್ಟರು, ಹುಟ್ಟೂರಿನಲ್ಲಿ ನೂರಾರು ಜನರಿಗೆ ಉದ್ಯೋಗಾವಕಾಶವನ್ನು ನೀಡುವ ನಿಟ್ಟಿನಲ್ಲಿ ಸ್ಥಾಪಿಸಿರುವ ಹೋಟೇಲ್ ಉದ್ಯಮ ಯಶಸ್ಸಾಗಲಿ ಹಾಗೂ ಇದೇ ರೀತಿಯ ಹತ್ತಾರು ಹೋಟೇಲ್‍ಗಳನ್ನು ರಾಜ್ಯದ ಜನರಿಗೆ ನೀಡುವಂತಾಗಲಿ ಎಂದು ರಾಜ್ಯ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿಯವರು ಶುಭ ಹಾರೈಸಿದರು.ಪ್ರತಿಷ್ಠಿತ ಜೆ.ಎನ್.ಎಸ್. ಕಂಪೆನಿ ಹಾಗೂ ಯುವ ಮೆರಿಡಿಯನ್ ಸಮೂಹ ಸಂಸ್ಥೆಗಳ ಪಾಲುದಾರಿಕೆಯಲ್ಲಿ ಕುಂದಾಪುರದ ಶಾಸ್ತ್ರಿ ಸರ್ಕಲ್ ಬಳಿಯ ಗಾಂಧಿ ಮೈದಾನದ ಎದುರು ನಿರ್ಮಾಣಗೊಂಡ ` ಯುವ ಮನೀಶ್ '''''''' ಸುಸಜ್ಜಿತ ಬ್ಯುಸಿನೆಸ್ ಹೋಟೆಲನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು. ವಿಶ್ವದ ಎಲ್ಲೆಡೆಯಲ್ಲಿ ಹೋಟೇಲ್ ಆತಿಥ್ಯಕ್ಕೆ ಹೆಸರುವಾಸಿಯಾಗಿರುವ ಕುಂದಾಪುರ ಹಾಗೂ ಉಡುಪಿ ಭಾಗದವರು ತಮ್ಮ ಸಂಸ್ಕಾರಯುತ ನಡವಳಿಕೆಯಿಂದ ಜನಮಾನ್ಯರಾಗಿದ್ದಾರೆ. ಮರವಂತೆ ಸಮುದ್ರ ತೀರ ಸೇರಿದಂತೆ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶವನ್ನು ಹೊಂದಿರುವ ಈ ಭಾಗದ ಅಭಿವೃದ್ಧಿಗಾಗಿ ಸರ್ಕಾರ ವಿಶೇಷ ಗಮನ ಕೇಂದ್ರಿಕರಿಸಲಿದೆ. ಸಾರಿಗೆ ಹಾಗೂ ಸಂಪರ್ಕ ವ್ಯವಸ್ಥೆಯನ್ನು ಕಲ್ಪಿಸಲು ಸರ್ಕಾರ ಬದ್ಧವಾಗಿದೆ ಎಂದರು. ಆಶೀರ್ಚನ ನೀಡಿದ ಘಟಪ್ರಭಾ ಗುಬ್ಬಲಗುಡ್ಡ ಕೆಂಪಯ್ಯ ಸ್ವಾಮಿ ಮಠದ ಡಾ.ಮಲ್ಲಿಕಾರ್ಜುನ ಸ್ವಾಮೀಜಿ ಅವರು, ಕೇವಲ ಶ್ರೀಮಂತಿಕೆ ಹಾಗೂ ಅಧಿಕಾರಗಳು ನಮ್ಮ ಗುರಿಯನ್ನು ಮುಟ್ಟಿಸೋದಿಲ್ಲ. ಭಗವಂತನ ಅನುಗ್ರಹ, ಆಶೀರ್ವಾದ ಹಾಗೂ ಒಳ್ಳೆಯ ದುಡಿಮೆ, ಪರಿಶ್ರಮವಿದ್ದರೆ ಮಾತ್ರ ಯಶಸ್ಸು ಗಳಿಸಲು ಸಾಧ್ಯ. ತಮ್ಮ ದುಡಿಮೆಯಲ್ಲಿ ಸಂತೃಪ್ತಿ ಗಳಿಸುವ ಜೊತೆಯಲ್ಲಿ ಇತರರನ್ನು ಸಂತೃಪ್ತಗೊಳಿಸುವವರೇ ಜೀವನದಲ್ಲಿ ಸಾಧನೆಯ ಗುರಿಯನ್ನು ಮುಟ್ಟುತ್ತಾರೆ ಎಂದರು. ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ ಅವರು, ಸಾಂಸ್ಕೃತಿಕ, ಭೌಗೋಳಿಕ ಹಾಗೂ ಧಾರ್ಮಿಕತೆಯ ಕಾರಣಗಳಿಂದಾಗಿ ವಿಶ್ವಮಾನ್ಯವಾಗಿರುವ ಉಡುಪಿ ಜಿಲ್ಲೆ ಪ್ರವಾಸೋದ್ಯಮ ಹಾಗೂ ಆತಿಥ್ಯದ ಕಾರಣಗಳಿಂದಾಗಿಯೂ ಜಾಗತೀಕವಾಗಿ ಗುರುತಿಸಿಕೊಂಡಿದೆ. ಸಂಪಾದನೆಯನ್ನು ಮಾತ್ರ ಗುರಿಯಾಗಿರಿಸಿಕೊಳ್ಳದೆ, ಗ್ರಾಹರನ್ನು ಸಂತ್ರಪ್ತಗೊಳಿಸುವ ನಡವಳಿಕೆಗಳು ಈ ಭಾಗದವರನ್ನು ಶ್ರೀಮಂತಗೊಳಿಸಿದೆ. ಅಂತರಾಷ್ಟ್ರೀಯ ಗುಣಮಟ್ಟದ ಯುವ ಮೆರಿಡಿಯನ್ ಸಮೂಹ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ ಸಹೋದದರಾದ ಬೈಲೂರು ಉದಯ್‍ಕುಮಾರ ಶೆಟ್ಟಿ ಹಾಗೂ ಬೈಲೂರು ವಿನಯಕುಮಾರ ಶೆಟ್ಟಿಯವರ ಸರಳತೆ ಹಾಗೂ ಹೃದಯ ವೈಶಾಲ್ಯತೆ ಇಂದಿನ ಯುವ ಉದ್ಯಮಿಗಳಿಗೆ ಮಾದರಿಯಾಗಿದೆ. ಇನ್ನೊರ್ವ ಸಜ್ಜನ ಉದ್ಯಮಿ ಜಯಶೀಲ ಎನ್ ಶೆಟ್ಟಿ ಅವರೊಂದಿಗಿನ ಹೊಸ ಉದ್ಯಮ ಅತ್ಯಂತ ಹೆಚ್ಚು ಗ್ರಾಹಕರನ್ನು ತಲುಪಲಿ ಎಂದು ಶುಭ ಹಾರೈಸಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ದೇವರು ಹಾಗೂ ಧಾರ್ಮಿಕತೆಯಲ್ಲಿ ವಿಶೇಷ ನಂಬಿಕೆ ಇರುವ ಉಡುಪಿ ಜಿಲ್ಲೆಯ ಜನರು, ಜೀವನದಲ್ಲಿ ಪರಿಶ್ರಮ ಹಾಗೂ ಬದ್ಧತೆಯನ್ನು ಹೊಂದಿರುವುದರಿಂದ ಅಭಿವೃದ್ಧಿಯ ಪಥದಲ್ಲಿ ಯಾವಾಗಲೂ ಮುಂದೆ ಇರುತ್ತಾರೆ. ಬೆಳೆಯುತ್ತಿರುವ ಉಡುಪಿ ಜಿಲ್ಲೆಯಲ್ಲಿ ಪ್ರಾವಾಸೋದ್ಯಮದ ವಿಸ್ತರಣೆಗೂ ಸಾಕಷ್ಟು ಅವಕಾಶಗಳಿವೆ. ಮೈಸೂರು ಹಾಗೂ ಬೆಂಗಳೂರು ಕಾರಿಡಾರ್ ವ್ಯವಸ್ಥೆಯಂತೆ ಉಡುಪಿ-ಮಂಗಳೂರು-ಬೆಂಗಳೂರು ಸಂಪರ್ಕವನ್ನು ಸರಳವಾಗಿಸುವ ದಿಸೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡುರಾವ್ ಹಾಗೂ ನಾನು ಕಾರ್ಯ ಯೋಜನೆಯನ್ನು ಸಿದ್ಧಪಡಿಸುತ್ತಿದ್ದು, ಶೀಘ್ರದಲ್ಲಿಯೇ ಲೋಕೋಪಯೋಗಿ ಸಚಿವರನ್ನು ಭೇಟಿಯಾಗಿ ಚರ್ಚೆ ನಡೆಸುವುದಾಗಿ ತಿಳಿಸಿದ ಅವರು ಜಿಲ್ಲೆಯ ಅಭಿವೃದ್ಧಿ ಯೋಜನೆಯ ಅನುಷ್ಠಾನಕ್ಕೆ ತೊಡಕಾಗಿರುವ ಸಮಸ್ಯೆಗಳನ್ನು ಆದ್ಯತೆಯ ನೆಲೆಯಲ್ಲಿ ಪರಿಹರಿಸಿ ಅಭಿವೃದ್ಧಿಯ ಗುರಿಯನ್ನು ತಲುಪುದಾಗಿ ತಿಳಿಸಿದರು. ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ ಹೆಗ್ಡೆ ಅವರು, ಕೆಲವೇ ದಿನಗಳಿಗಾಗಿ ಅಭಿವೃದ್ಧಿ ಯೋಜನೆಗಳು ಸಿದ್ದವಾಗಬಾರದು, ಭವಿಷ್ಯದ ದೂರಗಾಮಿ ಯೋಚನೆಯಲ್ಲಿ ಯೋಜನೆಗಳು ರೂಪಗೊಳ್ಳಬೇಕು. ಕೋಸ್ಟಲ್, ಟೆಂಪಲ್ ಹಾಗೂ ಹೆಲ್ತ್ ಪ್ರವಾಸೋದ್ಯಮಕ್ಕೆ ಜಿಲ್ಲೆಯಲ್ಲಿ ಸಾಕಷ್ಟು ಅವಕಾಶಗಳಿದ್ದು, ಉದ್ಯೋಗಾವಕಾಶದ ಜೊತೆಯಲ್ಲಿ ಆರ್ಥಿಕ ಸಂಪನ್ಮೂಲದ ಅಭಿವೃದ್ಧಿಯೂ ಆಗುತ್ತದೆ. ಬಂಡವಾಳ ತೊಡಗಿಸುವವರನ್ನು ಆಕರ್ಷಿಸಲು, ಅವರಿಗೆ ರಸ್ತೆ, ನೀರು, ವಿದ್ಯುತ್ ಸೇರಿದಂತೆ ಮೂಲಭೂತ ಅವಶ್ಯಕತೆಗಳನ್ನು ಪೂರೈಸಲು ಸರ್ಕಾರ ಕಾಳಜಿ ವಹಿಸಬೇಕು ಎಂದು ಅವರು ಸಲಹೆ ನೀಡಿದರು. ಶಾಸಕರಾದ ಬಾಲಚಂದ್ರ ಜಾರಕಿಹೊಳಿ, ಕಿರಣ್‍ಕುಮಾರ ಕೊಡ್ಗಿ, ಗುರುರಾಜ್ ಗಂಟಿಹೊಳೆ, ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ವಿಧಾನ ಪರಿಷತ್ ಸದಸ್ಯ ಎಂ.ಶ್ರೀನಿವಾಸ್, ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್, ರೆಡಿಸ್ಸನ್ ಬ್ಲೂ ಆರ್ಟಿಯಾ ನಿರ್ದೇಶಕ ಕೆ. ನಾಗರಾಜ್, ದುಬೈನ ಫಾರ್ಚೂನ್ ಗ್ರೂಫ್ ಆಫ್ ಹೋಟೆಲ್ಸ್ ಸಿಎಂಡಿ ವಕ್ವಾಡಿ ಪ್ರವೀಣ್‍ಕುಮಾರ ಶೆಟ್ಟಿ, ಉದ್ಯಮಿ ದಿನೇಶ್ ಹೆಗ್ಡೆ ಮೊಳಹಳ್ಳಿ, ಜೆ.ಎನ್.ಎಸ್. ಕಂಪೆನಿಯ ಮನೀಶ್ ಜೆ. ಶೆಟ್ಟಿ, ಯುವ ಮೆರಿಡಿಯನ್ ಸಮೂಹ ಸಂಸ್ಥೆಗಳ ಬೈಲೂರು ವಿನಯ್ ಕುಮಾರ್ ಶೆಟ್ಟಿ ಇದ್ದರು. ಯುವ ಮನೀಶ್ ಹೋಟೇಲ್ ಪಾಲುದಾರರಾದ ಜಯಶೀಲ ಎನ್ ಶೆಟ್ಟಿ ಸ್ವಾಗತಿಸಿದರು, ಬೈಲೂರು ಉದಯ್‍ಕುಮಾರ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಪತ್ರಕರ್ತ ರಾಜೇಶ್ ಕೆ.ಸಿ ಕುಂದಾಪುರ ನಿರೂಪಿಸಿದರು.