ಕನ್ನಡಪ್ರಭ ವಾರ್ತೆ ಮಡಿಕೇರಿ
ಕಾರ್ಯಕ್ರಮ ಉದ್ಘಾಟಿಸಿದ ವಿಧಾನಪರಿಷತ್ತಿನ ಮಾಜಿ ಸದಸ್ಯ, ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಎಂ.ಪಿ.ಸುನಿಲ್ ಸುಬ್ರಮಣಿ, ತಾವು ಚೌಟಿ ಮಾರಿಯಮ್ಮ ದೇವತೆಯ ಭಕ್ತರಾದ ಪ್ರಸಂಗ ನೆನಪು ಮಾಡಿದರು.
ಹಿಂದೆ ಸಾಕಷ್ಟು ಮಂದಿ ಬಂದು ದೇಗುಲಕ್ಕೆ ಬರುವಂತೆ ಆಹ್ವಾನ ನೀಡಿದರೂ ನಾನು ಅದನ್ನು ನಿರ್ಲಕ್ಷಿಸಿದ್ದೆ. ಆದರೆ, ಒಮ್ಮೆ ಅಪಘಾತವಾಗಿ ಉಳಿಯುವುದೇ ಕಷ್ಟಕರವಾಗಿದ್ದಾಗ ಇದೆ ದೇವತೆ ನನ್ನನ್ನು ಕಾಪಾಡಿತು ಎಂದರು.ಸ್ಮರಣ ಸಂಚಿಕೆಯ ಸಂಪಾದಕ ಟಿ.ಪಿ.ರಮೇಶ್ ಮಾತನಾಡಿ, ಇದು ಸರ್ವ ಧರ್ಮೀಯರೂ ಒಟ್ಟಾಗಿ ಕೆಲಸ ಮಾಡುವ ದೇವಾಲಯ ಎಂದು ಹೇಳಿದರು.
ಸ್ಮರಣ ಸಂಚಿಕೆ ರಚಿಸುವಾಗ ದಾಖಲೆಗಳ ಕೊರತೆ ಎದುರಾಯಿತು. ಆದರೂ ಮೌಖಿಕ ಪರಂಪರೆ ಸೇರಿದಂತೆ ಸಾಕಷ್ಟು ಕ್ಷೇತ್ರ ಕಾರ್ಯ ಮಾಡಿ ಈ ಪುಸ್ತಕ ರಚಿಸಲಾಗಿದೆ. ಇದರಲ್ಲಿ ದೇವಸ್ಥಾನದ ದಸರಾ ಉತ್ಸವ ಸಮಿತಿಯಲ್ಲಿ ಕಳೆದ 50 ವರ್ಷದಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ 24 ಜನರ ಮಾಹಿತಿ ಇದೆ. ದೇಗುಲಕ್ಕಿರುವ 300 ವರ್ಷಗಳ ಇತಿಹಾಸ ಸೇರಿದಂತೆ ಹಲವು ಕೌತುಕಮಯ ವಿಚಾರಗಳು ಸ್ಮರಣ ಸಂಚಿಕೆಯಲ್ಲಿವೆ ಎಂದರು.ಪತ್ರಿಕೋದ್ಯಮಿ ಜಿ.ರಾಜೇಂದ್ರ ಅವರು ದೇಗುಲದಲ್ಲಿ ಧನಾತ್ಮಕ ಶಕ್ತಿ ಇದೆ ಎಂದರು.
ಮಾಜಿ ಅಧ್ಯಕ್ಷರು, ನಿಧನರಾದ ಅಧ್ಯಕ್ಷರ ಕುಟುಂಬಸ್ಥರು, ಹಿರಿಯ ಪದಾಧಿಕಾರಿಗಳು ಸೇರಿದಂತೆ 31 ಮಂದಿಗೆ ಸನ್ಮಾನ ಮಾಡಲಾಯಿತು. ಮಂಟಪ ಸಮಿತಿಯ 110 ಮಂದಿಗೆ ಸ್ಮರಣಿಕೆ ನೀಡಲಾಯಿತು.ಸಮಿತಿ ಅಧ್ಯಕ್ಷ ರವಿ ಕರ್ಕೆರ ಅಧ್ಯಕ್ಷತೆ ವಹಿಸಿದ್ದರು. ಸಮಿತಿಯ ಸಂಚಾಲಕ ಮಂಜುನಾಥ, ಸ್ಮರಣ ಸಂಚಿಕೆಯ ಪೋಷಕ ಸಂಪಾದಕ ಡಾ.ಎಚ್.ವಿ.ದೇವದಾಸ್ ಭಾಗವಹಿಸಿದ್ದರು.