ದುಗ್ಗಳ ಸದಾನಂದ
ಕನ್ನಡಪ್ರಭ ವಾರ್ತೆ ನಾಪೋಕ್ಲುಕೊಡವ ಕುಟುಂಬ ತಂಡಗಳ ನಡುವಿನ ಕೌಟುಂಬಿಕ ಹಾಕಿ ಉತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ಈ ಬಾರಿ ನಾಪೋಕ್ಲುವಿನಲ್ಲಿ ಕುಂಡ್ಯೋಳಂಡ ಕಪ್ ಹಾಕಿ ನಮ್ಮೆ ಜರುಗಲಿದೆ. ಹಾಕಿ ನಮ್ಮೆಯ ಆಯೋಜಕರಾದ ಕುಂಡ್ಯೋಳಂಡ ಕುಟುಂಬಸ್ಥರು ಬಿರುಸಿನ ಸಿದ್ಧತೆ ನಡೆಸಿದ್ದು, ಚೆರಿಯಪರಂಬುವಿನ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ಭರ್ಜರಿ ತಯಾರಿ ನಡೆಯುತ್ತಿದೆ. ಮೈದಾನಗಳ ನಿರ್ಮಾಣ, ಗ್ಯಾಲರಿ, ವೇದಿಕೆ, ಸ್ಟಾಲ್‌ಗಳ ನಿರ್ಮಾಣ ಸೇರಿದಂತೆ ವಿವಿಧ ಕಾರ್ಯಗಳು ಭರದಿಂದ ಸಾಗುತ್ತಿವೆ.ಮಾ.30ರಿಂದ ಏ.28ರ ವರೆಗೆ ಒಂದು ತಿಂಗಳು ಕೌಟುಂಬಿಕ ಹಾಕಿ ಉತ್ಸವ ನಡೆಯಲಿದ್ದು, ಮಾ.30ರಂದು ಉದ್ಘಾಟನಾ ಸಮಾರಂಭ ನಡೆಯಲಿದೆ. ಏ.28 ರಂದು ಅಂತಿಮ ಪಂದ್ಯ ನಡೆಯಲಿದೆ.* ಈ ಬಾರಿ ವಿಶ್ವ ದಾಖಲೆಸುಮಾರು 400 ಕೊಡವ ಕುಟುಂಬಗಳು ಪಂದ್ಯಾಟದಲ್ಲಿ ಪಾಲ್ಗೊಳ್ಳುವ ಉದ್ದೇಶದಿಂದ ಕುಟುಂಬಸ್ಥರು ಕಾರ್ಯೋನ್ಮುಖರಾಗಿದ್ದು, ಈಗಾಗಲೇ 360 ಕುಟುಂಬ ತಂಡಗಳು ಈ ಬಾರಿಯ ಹಾಕಿ ಉತ್ಸವದಲ್ಲಿ ಪಾಲ್ಗೊಳ್ಳಲು ನೋಂದಯಿಸಿವೆ. ಈ ಮೂಲಕ ಕುಂಡ್ಯೋಳಂಡ ಹಾಕಿ ಉತ್ಸವ ಅಧಿಕೃತವಾಗಿ ವಿಶ್ವ ದಾಖಲೆ ಪುಟ ಸೇರಲಿದೆ.
ಚೆರಿಯಪರಂಬುವಿನ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ಹಾಕಿ ನಮ್ಮೆಯ ಅಧ್ಯಕ್ಷ ಕುಂಡ್ಯೋಳಂಡ ರಮೇಶ್ ಮುದ್ದಯ್ಯ ಭಾನುವಾರ ಮಾಧ್ಯಮದೊಂದಿಗೆ ಮಾತನಾಡಿ, ಮೈದಾನ, ಗ್ಯಾಲರಿಗಳ ನಿರ್ಮಾಣ ಅಂತಿಮ ಹಂತದಲ್ಲಿದೆ. ಕ್ರೀಡಾ ಉತ್ಸವದ ಯಶಸ್ವಿಗೆ ವಿವಿಧ ಸಮಿತಿಗಳು ಕಾರ್ಯ ಪ್ರವೃತ್ತವಾಗಿವೆ. ಈ ಬಾರಿ ದಾಖಲೆಯ ತಂಡಗಳು ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿದ್ದು, ಯಶಸ್ಸಿಗೆ ಕುಂಡ್ಯೋಳಂಡ ಹಾಕಿ ಸಮಿತಿ ಸಮಿತಿ ಶ್ರಮಿಸುತ್ತಿದೆ ಎಂದರು.ಟೂರ್ನಮೆಂಟ್ ಡೈರೆಕ್ಟರ್ ಅಂಜಪರವಂಡ ಕುಶಾಲಪ್ಪ ಮಾತನಾಡಿ, ದಿನಕ್ಕೆ ಆರು ಪಂದ್ಯಗಳಂತೆ ಮೂರು ಮೈದಾನಗಳಲ್ಲಿ ಒಟ್ಟು 18 ಪಂದ್ಯಗಳು ನಡೆಯಲಿವೆ. ಉದ್ಘಾಟನಾ ದಿನದಂದು ಇಂಡಿಯನ್ ನೇವಿ ಹಾಗೂ ಕೂರ್ಗ್ 11 ತಂಡಗಳ ನಡುವೆ ಪ್ರದರ್ಶನ ಪಂದ್ಯ ನಡೆಯಲಿದೆ. ಪ್ರತಿದಿನ ನಿಗದಿತ ಸಮಯಕ್ಕೆ ತಂಡದ ಆಟಗಾರರು ಆಗಮಿಸಿ ಪಂದ್ಯಗಳನ್ನು ಯಶಸ್ವಿಗೊಳಿಸಿಕೊಡಬೇಕು ಎಂದು ವಿನಂತಿಸಿದರು.
ಹಾಕಿ ನಮ್ಮೆಯ ಸಮಿತಿ ಕಾರ್ಯದರ್ಶಿ ಕುಂಡ್ಯೋಳಂಡ ವಿಶು ಪೂವಯ್ಯ, ಬೋಸ್ ಬೋಪಣ್ಣ, ಗಣಪತಿ, ಸುರೇಶ್ ಕುಟ್ಟಪ್ಪ, ಭೀಮಯ್ಯ, ಭುವನ್ ಬೋಪಣ್ಣ, ಜತ್ತಿ ಸುಬ್ಬಯ್ಯ, ಶಬನ್ ಪಳಂಗಪ್ಪ, ದಿವಿನ್ ದೇವಯ್ಯ ಉಪಸ್ಥಿತರಿದ್ದರು.ಇದುವರೆಗೆ 23 ಹಾಕಿ ಪಂದ್ಯಾಟಗಳನ್ನು ಆಯೋಜಿಸಲಾಗಿದ್ದು, 24ನೇ ಹಾಕಿ ಉತ್ಸವದಲ್ಲಿ ಅತಿ ಹೆಚ್ಚಿನ ಕೊಡವ ಕುಟುಂಬಗಳು ಪಾಲ್ಗೊಳ್ಳುತ್ತಿವೆ. 1997ರಲ್ಲಿ ಕರಡದಲ್ಲಿ ಆಯೋಜಿಸಲಾಗಿದ್ದ ಪ್ರಥಮ ಕೊಡವ ಕೌಟುಂಬಿಕ ಹಾಕಿ ಉತ್ಸವ ಪಾಂಡ೦ಡ ಕಪ್‌ನಲ್ಲಿ 60 ತಂಡಗಳು ಪಾಲ್ಗೊಂಡಿದ್ದವು. ಬಳಿಕ 1998ರಲ್ಲಿ ಕಡಗದಲ್ಲಿ ನಡೆದ ಕೋಡಿರ ಕಪ್‌ನಲ್ಲಿ 116 ತಂಡಗಳು ಪಾಲ್ಗೊಂಡಿದ್ದವು. ನಂತರದ ವರ್ಷದಲ್ಲಿ ಕಾಕೋಟು ಪರಂಬುವಿನಲ್ಲಿ ನಡೆದ ಬಲ್ಲಚಂಡ ಕಪ್‌ನಲ್ಲಿ 140 ತಂಡಗಳು, ಪೊನ್ನಂಪೇಟೆಯಲ್ಲಿ ನಡೆದ ಚೆಪ್ಪುಡಿರ ಕಪ್‌ನಲ್ಲಿ 170 ತಂಡಗಳು ಪಾಲ್ಗೊಂಡಿದ್ದು, ಕುಲ್ಲೇಟಿರ ಕಪ್‌ನಲ್ಲಿ 320 ತಂಡಗಳು ಪಾಲ್ಗೊಂಡಿದ್ದವು. ಕಳೆದ ವರ್ಷ 336 ತಂಡಗಳು ಪಾಲ್ಗೊಂಡಿದ್ದವು.
* ಪಳಂಗಂಡ ದಾಖಲೆ 5 ಬಾರಿ ಚಾಂಪಿಯನ್‌ಇದುವರೆಗೆ ನಡೆದ ಕೊಡವ ಕೌಟುಂಬಿಕ ಹಾಕಿ ನಮ್ಮೆಯಲ್ಲಿ ಪಳಂಗಂಡ ಕುಟುಂಬ ತಂಡ 5 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸುವ ಮೂಲಕ ಕೊಡವ ಹಾಕಿ ಉತ್ಸವದಲ್ಲಿ ದಾಖಲೆ ನಿರ್ಮಿಸಿದೆ. ಕೂತಂಡ ತಂಡವು ನಾಲ್ಕು ಬಾರಿ, ಕಲಿಯಂಡ, ಕುಲ್ಲೇಟಿರ, ನೆಲ್ಲ ಮಕ್ಕಡ ತಂಡಗಳು ಮೂರು ಬಾರಿ, ಅಂಜಪರವಂಡ, ಮಂಡೆಪಂಡ, ಕುಪ್ಪಂಡ (ಕೈಕೆರಿ) ತಂಡಗಳು ತಲಾ ಒಂದು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿವೆ.