ಕನ್ನಡಪ್ರಭ ವಾರ್ತೆ ನಾಪೋಕ್ಲು
ಕುಂಡ್ಯೋಳಂಡ ಕೊಡವ ಕೌಟುಂಬಿಕ ಹಾಕಿ ಉತ್ಸವ 2024 ರ ಯಶಸ್ವಿಯಾಗಿ ಸಂಘಟಿಸಲು ಕುಂಡ್ಯೋಳಂಡ ಕುಟುಂಬಸ್ಥರಿಂದ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಹಾಕಿ ಉತ್ಸವ ಸಮಿತಿ ಅಧ್ಯಕ್ಷ ರಮೇಶ್ ಮುದ್ದಯ್ಯ ಹೇಳಿದ್ದಾರೆ.ಇಲ್ಲಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಶುಕ್ರವಾರ ಮೈದಾನದ ಪೂರ್ವ ತಯಾರಿಗೆ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕೊಡವ ಹಾಕಿ ಅಕಾಡೆಮಿ ಅನುಮತಿ ಮೇರೆಗೆ ಕೊಡವ ಕೌಟುಂಬಿಕ ಹಾಕಿ ಉತ್ಸವ ಏಪ್ರಿಲ್ ತಿಂಗಳಲ್ಲಿ ಇಲ್ಲಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಗ್ಯಾಲರಿ ನಿರ್ಮಾಣ ,ಮೈದಾನ ಸಿದ್ಧತೆ ಸೇರಿದಂತೆ ವಿವಿಧ ಕಾರ್ಯಗಳನ್ನು ಕೈಗೆತ್ತಿಕೊಡಲಾಗುವುದು. ಅದಕ್ಕೂ ಮುನ್ನ ಮೈದಾನದ ಸಿದ್ಧತೆಗಾಗಿ ಭೂಮಿ ಪೂಜೆ ನೆರವೇರಿಸಿ ಯಾವುದೇ ವಿಘ್ನಗಳು ಬಾರದಂತೆ ಗುರು ಕಾರಣ ಹಾಗೂ ದೈವ ದೇವರುಗಳನ್ನು ಪ್ರಾರ್ಥಿಸಿ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.ಕುಟುಂಬದ ಪಟ್ಟೆದಾರ ಎಸ್. ಸುಬ್ಬಯ್ಯ ವಿಶೇಷ ಪ್ರಾರ್ಥನೆ ಮಾಡಿ ಗುದ್ದಲಿಯಿಂದ ಮಣ್ಣು ಅಗೆಯುವುದರ ಮೂಲಕ ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭ ಹಾಕಿ ಉತ್ಸವದ ಸಂಚಾಲಕ ದಿನೇಶ್ ಕಾರ್ಯಪ್ಪ, ಖಜಾಂಚಿ ವಿಷು ಪೂವಯ್ಯ, ಕಾರ್ಯದರ್ಶಿ ಬಿಪಿನ್ ಬೆಳ್ಳಿಯಪ್ಪ, ಟೂರ್ನಿಯ ನಿರ್ದೇಶಕ ಅಂಜಪರವಂಡ ಕುಶಾಲಪ್ಪ, ಕೆಪಿಎಸ್ ಶಾಲಾ ಪ್ರಾಂಶುಪಾಲೆ ವಿಶಾಲ ಕುಶಾಲಪ್ಪ,ಉಪ ಪ್ರಾಂಶುಪಾಲ ಶಿವಣ್ಣ ಎಂ.ಎಸ್, ಶಿಕ್ಷಕಿ ಉಷಾರಾಣಿ ಹಾಗೂ ಕುಂಡ್ಯೋಳಂಡ ಕುಟುಂಬದ ಸದಸ್ಯರು ಪಾಲ್ಗೊಂಡರು.ಇದಕ್ಕೂ ಮೊದಲು ಕೊಳಕೇರಿಯಲ್ಲಿರುವ ಕುಟುಂಬದ ಕೈಮಾಡ ಹಾಗೂ ಗ್ರಾಮ ದೇವತೆ ಶ್ರೀ ಭಗವತಿ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಹಾಗೂ ಪೂಜೆ ಸಲ್ಲಿಸಲಾಯಿತು. ಪೂಜಾ ವಿಧಿ ವಿಧಾನಗಳನ್ನು ದೇವಾಲಯದ ಅರ್ಚಕ ಸೀತಾರಾಮ್ ಭಟ್ ನೆರವೇರಿಸಿ ಕೊಟ್ಟರು.