ಮಣಿಪಾಲ: 200ಕ್ಕೂ ಹೆಚ್ಚು ಆರ್‌ಎಸ್‌ಬಿ ವಧು-ವರ ಸಮಾವೇಶ

KannadaprabhaNewsNetwork | Updated : Feb 03 2024, 01:55 AM IST

ಸಾರಾಂಶ

ರಾಜಾಪುರ ಸಾರಸ್ವತ ಬ್ರಾಹ್ಮಣ ಸಮಾಜದ ವಧು-ವರ ಸಮಾವೇಶ ನಡೆಯಿತು. ಹೆಸರು ನೋಂದಾಯಿಸಿಕೊಂಡವರಲ್ಲಿ ವರರ ಸಂಖ್ಯೆ ಶೇ.೭೦ರಷ್ಟು ಇದ್ದು, ವಧುಗಳ ಪ್ರಮಾಣ ಕೇವಲ ಶೇ.೩೦ ಇದೆ.

ಕನ್ನಡಪ್ರಭ ವಾರ್ತೆ ಮಣಿಪಾಲ

ರಾಜಾಪುರ ಸಾರಸ್ವತ ಸಂಘ ಮಣಿಪಾಲ ಆಶ್ರಯದಲ್ಲಿ ಬೆಂಗಳೂರಿನ ರಾಜಾಪುರ ಸಾರಸ್ವತ ಸಮಾಜದ ಅಂಗಸಂಸ್ಥೆ ಅನುಬಂಧ ವೇದಿಕೆ ವತಿಯಿಂದ ರಾಜಾಪುರ ಸಾರಸ್ವತ ಬ್ರಾಹ್ಮಣ ಸಮಾಜದ ‘ವಧು-ವರ ಸಮಾವೇಶ -೨೦೨೪’ ಇಲ್ಲಿನ ಆರ್‌ಎಸ್‌ಬಿ ಸಭಾಭವನದಲ್ಲಿ ಜರುಗಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜಾಪುರ ಸಾರಸ್ವತ ಸಂಘ ಮಣಿಪಾಲ ಅಧ್ಯಕ್ಷ ಶ್ರೀಶ ನಾಯಕ್ ಪೆರ್ನಂಕಿಲ ವಹಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಇಂದಿನ ಯುವ ಸಮುದಾಯ ಶಿಕ್ಷಣ, ಉದ್ಯೋಗ, ಅಂತಸ್ತಿನ ಕಡೆಗೆ ಹೆಚ್ಚಿನ ಗಮನ ನೀಡುತ್ತಿದ್ದು, ಅವರಿಗೆ ಸೂಕ್ತ ವೈವಾಹಿಕ ಸಂಬಂಧಗಳನ್ನು ಹುಡುಕುವುದು ಕುಟುಂಬದ ಹಿರಿಯರಿಗೆ ತ್ರಾಸದಾಯಕವಾಗುತ್ತಿದೆ. ಇದಕ್ಕೆ ಪರಿಹಾರವಾಗಿ ಪ್ರಪ್ರಥಮ ಬಾರಿಗೆ ಆಯೋಜಿಸಿರುವ ‘ವಧು-ವರ ಸಮಾವೇಶ’ದಲ್ಲಿ ೨೦೦ಕ್ಕೂ ಹೆಚ್ಚು ವಧುವರರ ನೋಂದಣಿ ಆಶಾದಾಯಕವಾಗಿದೆ ಎಂದರು.

ಆದರೆ ಹೆಸರು ನೋಂದಾಯಿಸಿಕೊಂಡವರಲ್ಲಿ ವರರ ಸಂಖ್ಯೆ ಶೇ.೭೦ರಷ್ಟು ಇದ್ದು, ವಧುಗಳ ಪ್ರಮಾಣ ಕೇವಲ ಶೇ.೩೦ ಇದೆ. ಮುಂದಿನ ದಿನಗಳಲ್ಲಿ ಪ್ರತಿ ಆರು ತಿಂಗಳಿಗೊಮ್ಮೆ ಕಾರ್ಯಕ್ರಮ ವ್ಯವಸ್ಥೆ ಮಾಡುವ ಬಗ್ಗೆ ಅಲೋಚನೆ ಇದೆ ಎಂದರು.

ಅನುಬಂಧ ವೇದಿಕೆ ಬೆಂಗಳೂರು ಮುಖ್ಯ ಸಂಯೋಜಕ ಮೋಹನದಾಸ್ ಪ್ರಭು ಮಾತನಾಡಿ, ಕಳೆದ ವರ್ಷ ಬೆಂಗಳೂರಿನಲ್ಲಿ ಜರುಗಿದ ‘ವಧು-ವರ ಸಮಾವೇಶ’ ಯಶಸ್ವಿಯಾಗಿದ್ದು, ಈ ಬಾರಿ ಸಂಯುಕ್ತವಾಗಿ ಮಣಿಪಾಲದಲ್ಲಿ ನಡೆಯುತ್ತಿದೆ. ಸಮಾಜ ಬಾಂಧವರು ಅಧಿಕ ಸಂಖ್ಯೆಯಲ್ಲಿ ಇರುವ ಸ್ಥಳಗಳಲ್ಲಿಯೂ ಇಂತಹ ಕಾರ್ಯಕ್ರಮದ ಅಗತ್ಯ ಇದೆ ಎಂದರು.

ಸಂಘದ ಕಾರ್ಯದರ್ಶಿ ನಿತ್ಯಾನಂದ ನಾಯಕ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಬೆಂಗಳೂರು ಸಂಘದ ಅಧ್ಯಕ್ಷ ನಾಗೇಂದ್ರ ಕಾಮತ್, ಕಾರ್ಯದರ್ಶಿ ರಮೇಶ್ ನಾಯಕ್, ಉಪಾಧ್ಯಕ್ಷ ಚೇತನ್ ನಾಯಕ್ ವೇದಿಕೆಯಲ್ಲಿದ್ದರು.

ಅನುಬಂಧ ವೇದಿಕೆಯ ಸಂಯೋಜಕಿ ಮಹಾಲಕ್ಷ್ಮೀ ರಾಮಕೃಷ್ಣ ಧೊಂಡ್ಯೆ, ಕಲಾವತಿ, ಸುಮತಿ ಕಾಮತ್, ಮಣಿಪಾಲ ಆರ್‌ಎಸ್‌ಬಿ ಮಹಿಳಾ ವೇದಿಕೆಯ ಅಧ್ಯಕ್ಷೆ ಗೀತಾ ನಾಯಕ್, ಕಾರ್ಯದರ್ಶಿ ನಯನಾ ನಾಯಕ್ ಉಪಸ್ಥಿತರಿದ್ದರು. ರಂಜಿತ್ ಕೆ.ಸ್.ಪುನಾರು ನಿರೂಪಿಸಿ ವಂದಿಸಿದರು.

ಉಡುಪಿ ಮಾತ್ರವಲ್ಲದೆ, ದಕ್ಷಿಣ ಕನ್ನಡ, ಮುಂಬೈ, ಕಾಸರಗೋಡು ಸೇರಿದಂತೆ ರಾಜ್ಯದ ವಿವಿಧ ಭಾಗದ ವಧುವರರು ಮತ್ತು ಅವರ ಹೆತ್ತವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.

Share this article