ಹೂವಿನಹಡಗಲಿ: ಹರ ಹರ ಮಹಾದೇವ... ಬಸವಣ್ಣ ದೊರೆಯೇ ನಿನಗಾರು ಸರಿಯೇ? ಸರಿ ಸರಿ ಅಂದವರ ಹಲ್ಲು ಮುರಿಯೇ ಬಹು ಪರಾಕ್...ಎಂಬ ದೇವರ ನಾಮ ಸ್ಮರಣೆಯೊಂದಿಗೆ, ಐತಿಹಾಸಿಕ ಸುಪ್ರಸಿದ್ಧ ಕುರುವತ್ತಿ ಬಸವೇಶ್ವರ, ಮಲ್ಲಿಕಾರ್ಜುನ ಸ್ವಾಮಿ ರಥೋತ್ಸವ, ಲಕ್ಷಾಂತರ ಭಕ್ತ ಸಾಗರ ಮಧ್ಯೆ ಮಂಗಳವಾರ ಸಂಜೆ ಸಡಗರ ಸಂಭ್ರಮದಿಂದ ಜರುಗಿತು.
ತೇರಿಗೆ ವಿವಿಧ ತಳಿರು ತೋರಣಗಳು ಹಾಗೂ ಭಾರಿ ಗಾತ್ರದ ರುದ್ರಾಕ್ಷಿ, ಹೂ ಮಾಲೆಗಳಿಂದ ಅಲಂಕರಿಸಲಾಗಿತ್ತು. ಸಮಾಳ, ನಂದಿಕೋಲು, ಹಲಗೆ, ಡೊಳ್ಳು ಸೇರಿದಂತೆ ಮಂಗಳ ವಾದ್ಯಗಳು ರಥೋತ್ಸವ ಸಂಭ್ರಮಕ್ಕೆ ಮತ್ತಷ್ಟು ಮೆರಗು ತಂದಿತು.
ಸುಗ್ಗಿಯ ಕಾಲ ಮುಗಿದ ಬಳಿಕ ಬದುಕಿನಲ್ಲಿ ಬಿಡುವು ಮಾಡಿಕೊಂಡ ಸಮಯದಲ್ಲಿ ಆರಂಭವಾಗುವ ಕುರುವತ್ತಿ ಬಸವೇಶ್ವರ, ಮಲ್ಲಿಕಾರ್ಜುನ ಸ್ವಾಮಿ ಜಾತ್ರೆಗೆ ಅಪಾರ ಪ್ರಮಾಣದಲ್ಲಿ ರೈತರು ಹಳಿ ಬಂಡಿ, ಸವಾರಿ ಕೋಲಿನ ಬಂಡಿಗಳನ್ನು ಸಿಂಗರಿಸಿಕೊಂಡು ಜಾತ್ರೆಗೆ ಬಂದಿದ್ದರು.ದೇವರ ಕೃಪೆಗೆ ಪಾತ್ರರಾಗಲು ಜಾತ್ರೆಗೆ ಬಂದ ಭಕ್ತರು ತಮ್ಮ ಎತ್ತುಗಳನ್ನು ಜೂಲಾ, ಗೆಜ್ಜೆಸರ, ಬಣ್ಣ ಬಣ್ಣದ ಬಲೂನ್, ವಿವಿಧ ಅಲಂಕಾರಿಕ ವಸ್ತುಗಳಿಂದ ಸಿಂಗರಿಸಿಕೊಂಡು, ಎತ್ತಿನ ಮೆರವಣಿಗೆ ಮಾಡಿದ್ದು ಎಲ್ಲರ ಗಮನ ಸೆಳೆಯಿತು. ಜಾತ್ರೆಗೆ ಬಂದ ಭಕ್ತರು ದೀಡ್ ನಮುಸ್ಕಾರ ಹಾಕಿ ದೇವರಿಗೆ ಹರಕೆ ತೀರಿಸಿದರು. ಕುರುವತ್ತಿ ಬಸವೇಶ್ವರ ಸಿಂಹಾಸನ ಕಟ್ಟೆಯ ಮುಂಭಾಗದಲ್ಲಿ ಸಾವಿರಾರು ಭಕ್ತರು ಕೊಬ್ಬರಿಯನ್ನು ಸುಟ್ಟು ಹರಕೆ ತೀರಿಸಿದರು.
ಉತ್ತರ ಕರ್ನಾಟಕದ ಭಕ್ತರನ್ನೇ ಹೆಚ್ಚು ಸೆಳೆಯುವ ಕುರುವತ್ತಿ ಬಸವೇಶ್ವರ ಜಾತ್ರೆಗೆ ಬಂದ ಭಕ್ತರು, ದೇವಸ್ಥಾನದಲ್ಲಿ ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ಪುನೀತರಾದರು.
ಜಾತ್ರೆಗೆ ಬರುವ ಭಕ್ತರಿಗೆ ದಾವಣಗೆರೆ, ಹಾವೇರಿ, ರಾಣಿಬೆನ್ನೂರು, ಹುಬ್ಬಳ್ಳಿ, ಧಾರವಾಡ, ಗದಗ, ಹೂವಿನಹಡಗಲಿ, ಹರಿಹರ ಸೇರಿದಂತೆ ಇತರೆ ಸಾರಿಗೆ ಘಟಕಗಳಿಂದ ವಿಶೇಷ ಸಾರಿಗೆ ವ್ಯವಸ್ಥೆ ಮಾಡಲಾಗಿತ್ತು. ಜಾತ್ರೆಯ ಪ್ರಯುಕ್ತ ಕುರುವತ್ತಿ ಬಸವೇಶ್ವರ ಹಾಗೂ ಮಲ್ಲಿಕಾರ್ಜುನ ಸ್ವಾಮಿಗೆ, ಬೆಳ್ಳಿ ಆಭರಣಗಳಿಂದ ಅಲಂಕರಿಸಲಾಗಿತ್ತು.
ಹೂವಿನಹಡಗಲಿ: ತಾಲೂಕಿನ ಸುಕ್ಷೇತ್ರ ಕುರುವತ್ತಿ ಬಸವೇಶ್ವರ ರಥೋತ್ಸವ ಸಾಗಿ ಬರುವ ತೇರು ಬೀದಿಯಲ್ಲಿ ಪೊಲೀಸ್ ಠಾಣೆ ನಿರ್ಮಾಣ ಮಾಡಿದ್ದಾರೆ. ಜತೆಗೆ ಪೊಲೀಸ್ ಮತ್ತು ಇತರೆ ಇಲಾಖೆಯ ವಾಹನಗಳ ನಿಲುಗಡೆಯಿಂದ ತೇರು ನೋಡಲು ಬರುವ ಭಕ್ತರಿಗೆ ತೊಂದರೆ ಉಂಟಾಗಿತ್ತು. ವಿವಿಧೆಡೆಗಳಿಂದ ಲಕ್ಷಾಂತರ ಭಕ್ತರು ತೇರು ನೋಡಲು ಆಗಮಿಸಿದ್ದರು. ಆಗದರೆ, ರಥ ಬೀದಿಯಲ್ಲಿ ಸರ್ಕಾರಿ ವಾಹನಗಳೇ ತುಂಬಿದ್ದರಿಂದ ದೂರದಿಂದಲೇ ನಿಂತು ನೋಡುವಂತಾಯಿತು. ರಥೋತ್ಸವಕ್ಕೆ ತಹಸೀಲ್ದಾರ್ ಕೆ.ಎಂ. ಗುರುಬಸವರಾಜ, ಪಿಡಿಒ ಗುತ್ತೆಪ್ಪ, ಎಸ್ಪಿ ಜಾಹ್ವವಿ, ಸಿಪಿಐ ಮಲ್ಲಪ್ಪ ಸೇರಿದಂತೆ ಇತತರಿದ್ದರು.