ಪ್ರತಿಯೊಬ್ಬರಲ್ಲಿ ತ್ಯಾಗ ಮನೋಭಾವ ಮೂಡಲಿ: ಸಚಿವ ಎಚ್.ಕೆ. ಪಾಟೀಲ

KannadaprabhaNewsNetwork |  
Published : Feb 18, 2026, 02:30 AM IST
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್‌.ಕೆ. ಪಾಟೀಲ ಮಾತನಾಡಿದರು. | Kannada Prabha

ಸಾರಾಂಶ

ಜನರನ್ನು ಕೂಡಿಸಿ, ಮನಸ್ಸಿನ ತಿಳಿಗೊಳಿಸಿ, ಸೌಹಾರ್ದಯುತವಾದ‌ ವಾತಾವರಣ ನಿರ್ಮಾಣ ಮಾಡಿ ಪ್ರತಿವರ್ಷ ಮಹಾ ಶಿವರಾತ್ರಿ ಉತ್ಸವ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಶಿವಸ್ಮರಣೆಯೊಂದಿಗೆ ಶ್ರೇಷ್ಠ ಸಂದೇಶವನ್ನು ಗುದ್ನೇಶ್ವರ ಮಠ ನೀಡುತ್ತಿದೆ.

ಮುಳಗುಂದ: ತ್ಯಾಗ ಮನೋಭಾವ ಪ್ರತಿಯೊಬ್ಬರಲ್ಲೂ ಮೂಡಬೇಕು. ಅಂತಹ ತ್ಯಾಗಿಯ ಗುಣ ನೀಲಗುಂದ ಪ್ರಭುಲಿಂಗ ದೇವರಲ್ಲಿ ಕಾಣಬಹುದಾಗಿದೆ. ಒಂದು ಸರ್ಕಾರ ಮಾಡುವಂಥ ಕೆಲಸವನ್ನು ದಿವ್ಯ ಚೇತನ ಟ್ರಸ್ಟ್ ಮೂಲಕ‌ ಶ್ರೀಗಳ ಮಾರ್ಗದರ್ಶನದಲ್ಲಿ ಶ್ರೀಮಠದಲ್ಲಿ ನಡೆದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಕೆ. ಪಾಟೀಲ ಶ್ಲಾಘಿಸಿದರು.

ಸಮೀಪದ ನೀಲಗುಂದ ಗ್ರಾಮದ ಜ್ಞಾನಗಿರಿ ಗುದ್ನೇಶ್ವರ ಮಠದಲ್ಲಿ ಭಾನುವಾರ ಸಂಜೆ ದಿವ್ಯ ಚೇತನ ಟ್ರಸ್ಟ್ ವತಿಯಿಂದ ನಡೆದ ಮಹಾಶಿವರಾತ್ರಿ ಉತ್ಸವದ ಜಾಗರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅಂದಾಜು ₹8 ಕೋಟಿ ವೆಚ್ಚದಲ್ಲಿ ಶಾಲಾ ಶೈಕ್ಷಣಿಕ ಸಂಕೀರ್ಣವನ್ನು ನಿರ್ಮಿಸಿ ಗ್ರಾಮೀಣ ಭಾಗದ ಮಕ್ಕಳ ಶೈಕ್ಷಣಿಕ ವಿಕಾಸಕ್ಕೆ ಅದ್ಭುತ ಕೆಲಸವನ್ನ ಪೂಜ್ಯರು ಮಾಡಿದ್ದಾರೆ. ತಮ್ಮ ಬದುಕಿನ ಅನುಭಾವಗಳ ಮೂಲಕ ಸಮಾಜಕ್ಕೆ ಸಂದೇಶ ನೀಡುತ್ತಿದ್ದಾರೆ. ಅಂತಹ ನೈತಿಕ ಶಕ್ತಿ ಅವರಲ್ಲಿ ಇದೆ ಎಂದರು.ಜನರನ್ನು ಕೂಡಿಸಿ, ಮನಸ್ಸಿನ ತಿಳಿಗೊಳಿಸಿ, ಸೌಹಾರ್ದಯುತವಾದ‌ ವಾತಾವರಣ ನಿರ್ಮಾಣ ಮಾಡಿ ಪ್ರತಿವರ್ಷ ಮಹಾ ಶಿವರಾತ್ರಿ ಉತ್ಸವ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಶಿವಸ್ಮರಣೆಯೊಂದಿಗೆ ಶ್ರೇಷ್ಠ ಸಂದೇಶವನ್ನು ಗುದ್ನೇಶ್ವರ ಮಠ ನೀಡುತ್ತಿದೆ. ಪ್ರೀತಿ, ನೈಜತೆ, ಶ್ರಮ ಇವುಗಳ ಮೂಲಕ ಬದುಕನ್ನು ಶಿಸ್ತುಗೊಳಿಸಿಕೊಂಡು ಇರುವುದೇ ಧರ್ಮ. ಮನಸ್ಸಿನ ಕೊಳೆಯನ್ನು ತೊಳೆದು ನಾವೆಲ್ಲರೂ ಒಂದೇ ಎನ್ನುವ ಮನೋಭಾವ ಮೂಡಿಸುವ ಕೆಲಸವನ್ನು ಪ್ರಭುಲಿಂಗ ದೇವರು ಮಾಡುತ್ತಿದ್ದಾರೆ ಎಂದರು.ದಿವ್ಯ ಚೇತನ ಆಂಗ್ಲ ಮಾಧ್ಯಮ ಶಾಲೆ, ಪ್ರಸಾದ ನಿಲಯ, ಮ್ಯೂಸಿಯಂ, ಶಾಲಾ ಕಟ್ಟಡವನ್ನು ಅದ್ಭುತವಾಗಿ ನಿರ್ಮಾಣ ಮಾಡಿದ್ದಾರೆ. ಅವರ ಒಂದು ಸಾಮಾಜಿಕ ನಿಸ್ವಾರ್ಥ ಸೇವೆಗೆ ನಮ್ಮ ಬೆಂಬಲವನ್ನು ನೀಡಿ, ಶ್ರೀಮಠದ ಆವರಣದಲ್ಲಿ ಯಾತ್ರಿ ನಿವಾಸ ನಿರ್ಮಾಣಕ್ಕೆ ಪ್ರವಾಸೋದ್ಯಮ ಇಲಾಖೆಯಿಂದ ₹1 ಕೋಟಿ ಅನುದಾನ ನೀಡುವುದಾಗಿ ಭರವಸೆ ನೀಡಿದರು.ಈ ವೇಳೆ ದಿವ್ಯ ಚೇತನ ಆಂಗ್ಲ ಮಾಧ್ಯಮ ಶಾಲಾ ಮಕ್ಕಳಿಂದ ಯೋಗಾಸನ ಪ್ರದರ್ಶನ ಜರುಗಿತು. ಶ್ರೀಮಠದಿಂದ ಕೊಡ ಮಾಡುವ ದಿವ್ಯ ಚೇತನ ಪ್ರಶಸ್ತಿಯನ್ನು ಎಪಿಎಂಸಿ ಮಾಜಿ ಸದಸ್ಯ ಅಪ್ಪಣ್ಣ ಇನಾಮತಿ ಅವರಿಗೆ ನೀಡಿ ಗೌರವಿಸಲಾಯಿತು. ಶ್ರೀಮಠದ ಶಾಲೆಯ 2024- 25ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳು ಹಾಗೂ ಪ್ರಸಾದ ಸೇವೆಗೈದ ಮಹನೀಯರನ್ನು ಸನ್ಮಾನಿಸಲಾಯಿತು.ನೀಲಗುಂದ ಗುದ್ನೇಶ್ವರ ಮಠದ ಪ್ರಭುಲಿಂಗ ದೇವರು, ಮಹಾವೀರ ಗೌತಮ ಬಾಫನಾ, ಎಂ.ಡಿ. ಬಟ್ಟೂರ, ಸಿದ್ದಲಿಂಗೇಶ್ವರ ಪಾಟೀಲ, ಬಸವರಾಜ ಬಳ್ಳಾರಿ, ಮಲ್ಲಪ್ಪ ಅದರಗುಂಚಿ, ಷಣ್ಮುಖ ಗುರಿಕಾರ ಸೇರಿದಂತೆ ಪ್ರಮುಖರು ಇದ್ದರು. ನಂತರ ತತ್ ಸಿಶಿರ ನಾದ ತರಂಗ ಜುಗಲಬಂದಿ ಸಂಗೀತ ಕಾರ್ಯಕ್ರಮ ಜರುಗಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಫೆ. 27ರಿಂದ ನೀರಿಗಾಗಿ ಹೆಜ್ಜೆ ಹಾಕಿ ಜನಜಾಗೃತಿ ಪಾದಯಾತ್ರೆ
ಸಮಾಜಸೇವೆ ಗುಣ ಬೆಳೆಸಿಕೊಳ್ಳಿ: ಅಭಿನವ ಮೃತ್ಯುಂಜಯ ಸ್ವಾಮೀಜಿ