ಕನ್ನಡಪ್ರಭ ವಾರ್ತೆ ಕುಶಾಲನಗರ
ರಾಷ್ಟ್ರ ಪ್ರೇಮದೊಂದಿಗೆ ದೇಶದ ಸಂಸ್ಕೃತಿ, ನಾಡು ನುಡಿ ಬೆಳೆಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಕೊಡಗು ವಿಶ್ವವಿದ್ಯಾಲಯ ಕನ್ನಡ ಉಪನ್ಯಾಸಕ ಡಾ. ಜಮೀರ್ ಅಹ್ಮದ್ ಹೇಳಿದರು.ಅವರು ಕುಶಾಲನಗರ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಆಶ್ರಯದಲ್ಲಿ ಕುಶಾಲನಗರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆದ 78ನೇ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.
ವರ್ಷದ ಎಲ್ಲ ದಿನಗಳಲ್ಲಿಯೂ ದೇಶಪ್ರೇಮ ಅಗತ್ಯ ಎಂದ ಅವರು, ಒಳಜಗಳ, ಅರಾಜಕತೆಯನ್ನು ಇತರರು ಲಾಭ ಪಡೆಯುವ ಆತಂಕ ಉಂಟಾಗಿದೆ.ಭಾರತೀಯ ಅಸ್ಮಿತೆಯನ್ನು ಜೀವಂತವಾಗಿಸಲು ಪ್ರತಿಯೊಬ್ಬರೂ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು.
ಬ್ರಿಟಿಷರು ಪಾಲಿಸಿದ್ದ ಒಡೆದು ಆಳುವ ನೀತಿ ಮತ್ತೆ ಮರುಕಳಿಸದಂತೆ ಎಚ್ಚರ ವಹಿಸಬೇಕು. ಇತಿಹಾಸವನ್ನು ತಿಳಿಯದವರು ಇತಿಹಾಸ ಸೃಷ್ಟಿ ಮಾಡಲು ಅಸಾಧ್ಯ ಎಂದು ಜಮೀರ್ ಅಹ್ಮದ್ ಹೇಳಿದರು.ಸ್ವಾತಂತ್ರ್ಯ ಕೇವಲ ದಿನಾಚರಣೆಗೆ ಸೀಮಿತ ಆಗಬಾರದು. ಪ್ರತಿಕ್ಷಣ ಸ್ವಾತಂತ್ರ್ಯದ ಬಗ್ಗೆ ಅಭಿಮಾನ ಹೊಂದಿರಬೇಕು ಎಂದು ಹೇಳಿದ ಜಮೀರ್ ಅಹ್ಮದ್ ಒಗ್ಗಟ್ಟು ಇದ್ದಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದರು.
ಧ್ವಜಾರೋಹಣ ಹಾಗೂ ಸ್ವಾತಂತ್ರ್ಯ ದಿನಾಚರಣೆಯ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಅಧ್ಯಕ್ಷರು ಹಾಗೂ ತಹಸೀಲ್ದಾರ್ ಆಗಿರುವ ಕಿರಣ್ ಜಿ ಗೌರಯ್ಯ ಅವರು ಮಾತನಾಡಿ, ಎಲ್ಲ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರುವ ಭಾರತ ವಿಶ್ವದಲ್ಲಿ ಅತಿ ವೇಗದಲ್ಲಿ ಬೆಳವಣಿಗೆ ಕಂಡಿದೆ, ಅಡೆತಡೆಗಳನ್ನು ಎದುರಿಸಿ ಅಭಿವೃದ್ಧಿ ಪಥದತ್ತ ದೇಶ ಸಾಗುವ ಮೂಲಕ ಭಾರತ ವಿಶ್ವ ವೇದಿಕೆಯಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದೆ ಎಂದರು.ಯುವ ಪೀಳಿಗೆ ಉತ್ತಮ ಸದಾಶಯಗಳೊಂದಿಗೆ ಸಾಗಬೇಕಾಗಿದೆ ಎಂದು ಆಶಯ ವ್ಯಕ್ತಪಡಿಸಿದರು.
ಸಂಚಾರಿ ಪೊಲೀಸ್ ಠಾಣಾಧಿಕಾರಿ ಕಾಶಿನಾಥ್ ಬಗಲಿ ಅವರ ನೇತೃತ್ವದಲ್ಲಿ ಪೊಲೀಸ್ ಎನ್‌ಸಿಸಿ ಶಾಲಾ ಕಾಲೇಜುಗಳು ಸೇರಿದಂತೆ 22 ತಂಡಗಳ ಸದಸ್ಯರು ಆಕರ್ಷಕ ಪಥಸಂಚಲನ ನಡೆಸಿದರು.ಕಾರ್ಯಕ್ರಮದಲ್ಲಿ ಪತ್ರಕರ್ತ ರಘು ಹೆಬ್ಬಾಲೆ ,ಸಮಾಜ ಸೇವಕ ಮುನೀರ್, ದುಬಾರೆ ರಾಪ್ಟರ್ ತಂಡದ ರಕ್ಷಿತ್, ಪುರಸಭೆ ಪೌರಕಾರ್ಮಿಕ ಕೃಷ್ಣ ಮತ್ತು ನಿರೂಪಕಿ ಸುಪ್ರೀತ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ನಾಡಗೀತೆ, ಶಿಕ್ಷಕರು ರೈತ ಗೀತೆ ಮತ್ತು ಮಹೇಶ್ ಅಮೀನ್ ಅವರು ವಂದೇ ಮಾತರಂ ಹಾಡಿದರು.ಈ ಸಂದರ್ಭ ಮುಖ್ಯ ಅತಿಥಿಗಳಾಗಿ ಕುಶಾಲನಗರ ಪೊಲೀಸ್ ಉಪ ಅಧೀಕ್ಷಕರಾದ ಆರ್ ವಿ ಗಂಗಾಧರಪ್ಪ, ಪುರಸಭೆ ಮುಖ್ಯಾಧಿಕಾರಿ ಕೃಷ್ಣಪ್ರಸಾದ್, ವಿವಿಧ ಇಲಾಖೆ ಅಧಿಕಾರಿಗಳು ಪುರಸಭೆ ಸದಸ್ಯರು ಜನಪ್ರತಿನಿಧಿಗಳು, ಮಾಜಿ ಸೈನಿಕರು, ವಿವಿಧ ಇಲಾಖೆ, ಸಿಬ್ಬಂದಿ ಇದ್ದರು. ಮುಖ್ಯ ಶಿಕ್ಷಕಿ ಪುಷ್ಪ ಅವರು ಸ್ವಾಗತಿಸಿದರು. ಹೇಮಲತಾ ಅವರು ಕಾರ್ಯಕ್ರಮ ನಿರೂಪಿಸಿದರು.
ನಂತರ ಶಾಲಾ-ಕಾಲೇಜು ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.