ಕನ್ನಡಪ್ರಭ ವಾರ್ತೆ ಕುಶಾಲನಗರ
ಕುಶಾಲನಗರ ಶ್ರೀ ಮಹಾಗಣಪತಿ ರಥೋತ್ಸವ ಅಂಗವಾಗಿ ವಿವಿಧ ರೀತಿಯ ಉತ್ಸವಾದಿಗಳು ಜರುಗಿದ್ದು ದೇವರ ತೀರ್ಥ ಸ್ನಾನದೊಂದಿಗೆ ಸಂಪನ್ನಗೊಂಡಿತು.ದೇವಾಲಯದಲ್ಲಿ ದಿನನಿತ್ಯ ಸೇವಾರ್ಥದಾರರಿಂದ ದೀಪಾರಾದನೆ, ಮೂಷಿಕ ವಾಹನ ಉತ್ಸವ, ವೃಷಭ ವಾಹನ ಸೇವೆ , ಅಶ್ವರೂಢ ವಾಹನ ಸೇವೆ ಉಯ್ಯಾಲೋತ್ಸವ, ಮಯೂರರೂಢ ಸೇವೆ ಶನಿವಾರ ರಾತ್ರಿ ಕಾವೇರಿ ನದಿಯಲ್ಲಿ ತೆಪ್ಪೋತ್ಸವ ನಡೆಯುವ ಮೂಲಕ ವಿವಿಧ ರೀತಿಯ ಉತ್ಸವಗಳು ವಿಶಿಷ್ಟ ರೀತಿಯಲ್ಲಿ ಅದ್ದೂರಿಯಾಗಿ ನಡೆದವು.
ಕಾವೇರಿ ನದಿಯಲ್ಲಿ ಆದಿಶೇಷ ರೂಢ ಹೂವಿನ ಮಂಟಪ ಪಲ್ಲಕ್ಕಿ ಸೇವೆ ಜೊತೆಗೆ ತೀರ್ಥ ಸ್ನಾನ ನಂತರ ದೇವಾಲಯದಲ್ಲಿ ಪಂಚಾಮೃತ ಅಭಿಷೇಕ, ರಕ್ಷಾಬಂಧನ ವಿಮೋಚನೆ, ಧ್ವಜ ಅವರೋಹಣ ನಂತರ ಅವಭೃತ ಸ್ನಾನ, ಮಂಗಳಾರತಿ ನಂತರ ತೀರ್ಥ ಪ್ರಸಾದ ವಿನಿಯೋಗ ನಡೆಯಿತು.ಪ್ರಧಾನ ಅರ್ಚಕರಾದ ಆರ್ ಕೆ ನಾಗೇಂದ್ರ ಬಾಬು ನೇತೃತ್ವದಲ್ಲಿ ರಾಘವೇಂದ್ರ ಭಟ್ ಮತ್ತಿತರ ಅರ್ಚಕರು ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು.
ನಿತ್ಯ ಪೂಜೆಯಲ್ಲಿ ಪೂಜಾ ಸೇವಾರ್ಥದಾರರು ಕುಟುಂಬ ಸದಸ್ಯರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡಿದ್ದರು.ದೇವಾಲಯ ಕಾರ್ಯಕಾರಿ ಮಂಡಳಿಯ ಅಧ್ಯಕ್ಷರಾದ ಎಂ ಕೆ ದಿನೇಶ್ ಅವರ ಉಸ್ತುವಾರಿಯಲ್ಲಿ ಈ ಬಾರಿ ವಿಶೇಷವಾಗಿ ಉತ್ಸವಾದಿಗಳನ್ನು ಅದ್ದೂರಿಯಾಗಿ ನಡೆಸುವ ಸಲುವಾಗಿ ಕುದುರೆ ಗಾಡಿ, ಎತ್ತಿನಗಾಡಿ ಮತ್ತಿತರ ರಥಗಳ ಮೂಲಕ ಪಲ್ಲಕ್ಕಿ ಸೇವೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಕುಶಾಲನಗರ ಗಣಪತಿ ವಾರ್ಷಿಕ ಜಾತ್ರೆ ಅಂಗವಾಗಿ ಸ್ಥಳೀಯ ಗೆಳೆಯರ ಬಳಗದ ವತಿಯಿಂದ ಪಟ್ಟಣದ ಮುಖ್ಯ ರಸ್ತೆ ಬೀದಿಗಳಲ್ಲಿ ವಿದ್ಯುತ್ ದೀಪ ಅಲಂಕಾರ ಮಾಡಲಾಗಿದೆ.ಜಾತ್ರೆ ಅಂಗವಾಗಿ ಕುಶಾಲನಗರದ ಗುಂಡೂರಾವ್ ಬಡಾವಣೆಯ ಜಾತ್ರಾ ಮೈದಾನದಲ್ಲಿ ಅಮ್ಯೂಸ್ಮೆಂಟ್ ಪಾರ್ಕ್ ಮೂಲಕ ಹಲವು ಬಗೆಗಳ ಮನೋರಂಜನಾ ಚಟುವಟಿಕೆಗಳನ್ನು ಆಯೋಜಿಸಲಾಗಿದೆ.
ಜಾತ್ರಾ ಮೈದಾನದಲ್ಲಿ ನಿತ್ಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿದ್ದು ಡಿಸೆಂಬರ್ 1 ರ ತನಕ ವಿವಿಧ ರೀತಿಯ ನೃತ್ಯ, ಮತ್ತಿತರ ಕಾರ್ಯಕ್ರಮಗಳು ಮುಂದುವರಿಯಲಿವೆ.ಡಿಸೆಂಬರ್ 7ರಿಂದ ಮೂರು ದಿನಗಳ ಕಾಲ ಜಾತ್ರಾ ಮೈದಾನದಲ್ಲಿ ಗೋ ಜಾತ್ರೆ ಮತ್ತು ಕೃಷಿ ಮೇಳ ಹಮ್ಮಿಕೊಳ್ಳಲಾಗಿದೆ.