ವಾಜಪೇಯಿಗೆ ಕಾರು ಚಾಲಕರಾಗಿದ್ದ ಸುಳ್ಯದ ಕುಶಾಲಪ್ಪ ಗೌಡ

KannadaprabhaNewsNetwork |  
Published : Nov 19, 2025, 01:45 AM IST
ಅಟಲ್‌ ನೆನಪು | Kannada Prabha

ಸಾರಾಂಶ

ಅಟಲ್ ಬಿಹಾರಿ ವಾಜಪೇಯಿ ಚಾಲಕರಾಗಿ ಕೆಲಸ ಮಾಡಿದವರುಕ ರಾವಳಿ ಜಿಲ್ಲೆಯ ಗಡಿ ಭಾಗದಲ್ಲಿ ಇದ್ದಾರೆ ಎನ್ನುವುದು ಬಹುತೇಕರಿಗೆ ಗೊತ್ತಿಲ್ಲ. ವಾಜಪೇಯಿ ಮಾತ್ರವಲ್ಲ, ಬಿ.ಎಸ್. ಯಡಿಯೂರಪ್ಪ, ಅಮಿತಾಬ್ ಬಚ್ಚನ್, ಶಂಕರ್‌ನಾಗ್ ಸಹಿತ ರಾಜಕಾರಣ ಮತ್ತು ಚಿತ್ರರಂಗದ ಪ್ರಸಿದ್ಧರಿಗೆ ಕಾರು ಚಾಲಕನಾಗಿ ಕೆಲಸ ಮಾಡಿದ ವ್ಯಕ್ತಿಯೊಬ್ಬರು ಯಾವ ಪ್ರಸಿದ್ಧಿಗೂ ಬಾರದೆ ಸುಳ್ಯ ಸಮೀಪದ ಚೆಂಬು ಗ್ರಾಮದ ಬಾಲೆಂಬಿ ಎಂಬಲ್ಲಿದ್ದಾರೆ.

‘ಗುಡ್ ಡ್ರೈವ್, ಥ್ಯಾಂಕ್ಸ್’ ಎಂದು ಬರೆದು ಕೊಟ್ಟಿದ್ದರು ಮಾಜಿ ಪ್ರಧಾನಿ ಅಟಲ್‌

ದುರ್ಗಾ ಕುಮಾರ್‌ ನಾಯರ್ ಕೆರೆ ಸುಳ್ಯ

ದೇಶ ಕಂಡ ಮುತ್ಸದ್ಧಿ ರಾಜಕಾರಣಿ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮಶತಾಬ್ಧ ವರ್ಷವಿದು. ವರ್ಷದುದ್ದಕ್ಕೂ ವಿವಿಧ ಕಾರ್ಯಕ್ರಮಗಳು ನಡೆದಿವೆ. ಪುತ್ತೂರಿನಲ್ಲಿ ಅಟಲ್ ವಿರಾಸತ್ ಎಂಬ ಬೃಹತ್ ಕಾರ‍್ಯಕ್ರಮಕ್ಕೆ ಸಿದ್ಧತೆಗಳು ನಡೆಯುತ್ತಿದೆ.ಆದರೆ ಅಟಲ್ ಬಿಹಾರಿ ವಾಜಪೇಯಿ ಚಾಲಕರಾಗಿ ಕೆಲಸ ಮಾಡಿದವರುಕ ರಾವಳಿ ಜಿಲ್ಲೆಯ ಗಡಿ ಭಾಗದಲ್ಲಿ ಇದ್ದಾರೆ ಎನ್ನುವುದು ಬಹುತೇಕರಿಗೆ ಗೊತ್ತಿಲ್ಲ. ವಾಜಪೇಯಿ ಮಾತ್ರವಲ್ಲ, ಬಿ.ಎಸ್. ಯಡಿಯೂರಪ್ಪ, ಅಮಿತಾಬ್ ಬಚ್ಚನ್, ಶಂಕರ್‌ನಾಗ್ ಸಹಿತ ರಾಜಕಾರಣ ಮತ್ತು ಚಿತ್ರರಂಗದ ಪ್ರಸಿದ್ಧರಿಗೆ ಕಾರು ಚಾಲಕನಾಗಿ ಕೆಲಸ ಮಾಡಿದ ವ್ಯಕ್ತಿಯೊಬ್ಬರು ಯಾವ ಪ್ರಸಿದ್ಧಿಗೂ ಬಾರದೆ ಸುಳ್ಯ ಸಮೀಪದ ಚೆಂಬು ಗ್ರಾಮದ ಬಾಲೆಂಬಿ ಎಂಬಲ್ಲಿದ್ದಾರೆ.

ಅವರೇ ಕುಶಾಲಪ್ಪ ಗೌಡ ಬಟ್ಯನ. ಮಡಿಕೇರಿ ಹಾಗೂ ಸುಳ್ಯ ಮಧ್ಯೆ ಸಿಗುವ ಮದೆ ಗ್ರಾಮ ಕುಶಾಲಪ್ಪ ಗೌಡರ ಹುಟ್ಟೂರು. ದಿ. ಬಟ್ಯನ ಚಿನ್ನಪ್ಪ ಹಾಗೂ ಪೂವಮ್ಮ ದಂಪತಿಯ ಪುತ್ರ ಕುಶಾಲಪ್ಪ, ಐದನೇ ತರಗತಿಯವರೆಗೆ ಬೆಟ್ಟತ್ತೂರು ಶಾಲೆಯಲ್ಲಿ ಓದಿದರು. ಆರು ಮತ್ತು ಏಳನೇ ತರಗತಿಯನ್ನು ಮದೆನಾಡು ಶಾಲೆಯಲ್ಲಿ ಪೂರೈಸಿ ಕೇವಲ ಆರು ತಿಂಗಳಷ್ಟೆ ಪ್ರೌಢ ಶಿಕ್ಷಣ ಪಡೆದಿದ್ದರು. ಅಲ್ಲಿಗೆ ಶಿಕ್ಷಣ ಮೊಟಕಾಯಿತು.

ವಿದ್ಯಾಭ್ಯಾಸ ಸ್ಥಗಿತಗೊಂಡ ನಂತರ ತಂದೆ ಊರಾದ ಊರುಬೈಲಿನಲ್ಲಿ, ತಾಯಿ ಊರಾದ ನಿಡಿಂಜಿಯಲ್ಲಿ ಒಂದಷ್ಟು ವರ್ಷ ಕಾರ್ಮಿಕರಾಗಿ ದುಡಿದರು. ೧೯೭೪ರಲ್ಲಿ ಹೊಟ್ಟೆಪಾಡಿಗಾಗಿ ಬೆಂಗಳೂರಿನತ್ತ ಹೊರಟರು. ಫರ್ನೀಚರ್‌ ಕಂಪನಿಯಲ್ಲಿ ಒಂದಷ್ಟು ಕಾಲ ಕೆಲಸ ಮಾಡಿದರು. ಅಲ್ಲಿ ವಾಹನ ಚಾಲನೆ ಕಲಿತರು. ಜರ್ಮನಿಯವರಾದ ಸಿ.ಎ. ವಿಲ್ನರ್ ಎಂಬವರಲ್ಲಿ ಎರಡು ವರ್ಷ ಚಾಲಕರಾಗಿ ಕೆಲಸ ಮಾಡಿದರು. ನಂತರ ವುಡ್‌ಲ್ಯಾಂಡ್‌ ಹೋಟೆಲ್‌ನಲ್ಲಿ ಟ್ಯಾಕ್ಸಿ ಚಾಲಕರಾಗಿ ಕೆಲಸಕ್ಕೆ ಸೇರಿದರು. ಒಂದಷ್ಟು ಕಾಲ ವೆಸ್ಟ್ಂಡ್ ಹೊಟೇಲ್‌ನಲ್ಲೂ ಕೆಲಸದಲ್ಲಿದ್ದರು.

ಈ ವೃತ್ತಿ ಅವರಿಗೆ ಹೊಸ ಅನುಭವ ಮತ್ತು ಅವಕಾಶ ನೀಡಿತು. ೧೯೮೪ರಲ್ಲಿ ಅಶೋಕ ಹೋಟೆಲ್‌ನಲ್ಲಿ ನಡೆದ ನಾಲ್ಕನೇ ಇಂಡಿಯನ್ ಫಿಲ್ಮ್ ಫೆಸ್ಟಿವಲ್‌ಗೆ ಚಿತ್ರನಟ ಶಂಕರ್‌ನಾಗ್‌ ಅವರನ್ನು ಕಾರಿನಲ್ಲಿ ಕರೆದೊಯ್ಯಬೇಕಾಗಿ ಬಂತು. ಅವರೊಂದಿಗಿನ ನಂಟು ಇನ್ನಷ್ಟು ಚಿತ್ರ ನಟರಿಗೆ ಸಾರಥಿಯಾಗುವಂತೆ ಮಾಡಿತು. ಸ್ವಲ್ಪ ಕಾಲ ಮುಂಬೈಯಲ್ಲೂ ಚಾಲಕ ಕೆಲಸಕ್ಕಿದ್ದರು. ಅಲ್ಲಿ ಅಮಿತಾಬ್ ಬಚ್ಚನ್, ಶತ್ರುಘ್ನ ಸಿನ್ಹಾ, ಧರ್ಮೇಂದ್ರ, ರೇಖಾ, ಅಮೋಲ್ ಫಾರೂಕ್ ಮೊದಲಾದ ಚಿತ್ರನಟ, ನಟಿಯರಿಗೂ ಸಾರಥಿಯಾದರು. ಎರಡು ಹಿಂದಿ ಸಿನಿಮಾ ಚಿತ್ರೀಕರಣ ಸಂದರ್ಭ ಖ್ಯಾತ ಚಿತ್ರನಟಿ ಝರೀನಾ ವಹಾಬ್ ಅವರಿಗೆ ಚಾಲಕರಾಗಿ ಊಟಿ, ಕೊಡೈಕೆನಲ್, ರಾಮೇಶ್ವರ, ರಂಗನತಿಟ್ಟು ಮೊದಲಾದ ಕಡೆಗಳಿಗೆ ಸುತ್ತಾಟ ನಡೆಸಿದರು. ಚಿತ್ರ ನಟ ಅಂಬರೀಷ್, ರವಿಚಂದ್ರನ್, ಜೈ ಜಗದೀಶ ಅವರ ಆತ್ಮೀಯತೆಗೂ ಪಾತ್ರರಾದರು. ಚಿತ್ರ ನಟರ ಮಾತ್ರವಲ್ಲ, ರಾಜಕಾರಣಿಗಳಿಗೂ ಸಾರಥಿಯಾದ ಕುಶಾಲಪ್ಪ ಗೌಡರಿಗೆ ಬಿಜೆಪಿ ನಾಯಕರಾಗಿದ್ದ ಬಿ.ಬಿ.ಶಿವಪ್ಪ ಆತ್ಮೀಯರಾದರು.

ವಾಜಪೇಯಿ ಪರಿಚಯ:ಅಟಲ್ ಬಿಹಾರಿ ವಾಜಪೇಯಿ ಆಗ ಕೇಂದ್ರದ ವಿರೋಧ ಪಕ್ಷ ನಾಯಕ. ಅದೊಂದು ದಿನ ಅವರು ಬೆಂಗಳೂರಿಗೆ ಆಗಮಿಸಿದಾಗ ಬಿ.ಬಿ. ಶಿವಪ್ಪರ ಸೂಚನೆ ಮೇರೆಗೆ ಕಾರಿನ ಸಾರಥಿಯಾಗಿ ತೆರಳಿದ್ದು ಕುಶಾಲಪ್ಪ ಗೌಡರು. ಅದಾಗಿ ಕೆಲವು ತಿಂಗಳ ಬಳಿಕ ಮತ್ತೆ ವಾಜಪೇಯಿ ಬೆಂಗಳೂರಿಗೆ ಆಗಮಿಸಿದಾಗ ಕನ್ಯಾಕುಮಾರಿ, ರಾಮೇಶ್ವರ, ಮಹಾಬಲಿಪುರಂಗಳಿಗೆ ಕರೆದೊಯ್ದರು. ಬಳಿಕ ಮೂರು ತಿಂಗಳಿಗೊಮ್ಮೆಯೋ, ಆರು ತಿಂಗಳಿಗೊಮ್ಮೆಯೋ ವಾಜಪೇಯಿವರು ರಾಜ್ಯ ರಾಜಧಾನಿಗೆ ಆಗಮಿಸಿದಾಗಲೆಲ್ಲ ಕುಶಾಲಪ್ಪ ಗೌಡರೇ ಸಾರಥಿಯಾಗುವಂತಾಯಿತು. ಚೆನ್ನಾಗಿ ಹಿಂದಿ ಬರುತ್ತಿದ್ದುದರಿಂದಾಗಿ ಅವರ ಅನಿವಾರ್ಯತೆಯೂ ಉಂಟಾಯಿತು.

ದೆಹಲಿ ಹಾದಿ ಹಿಡಿದ ಗೌಡರು:ಹೀಗೆ ಆತ್ಮೀಯತೆ ಬೆಸೆದ ವಾಜಪೇಯಿಯವರು ಕುಶಾಲಪ್ಪ ಗೌಡರನ್ನು ‘ದಿಲ್ಲಿ ಆ ಜಾವೋ’ ಎಂದರು. ಹಾಗೆ ರಾಷ್ಟ್ರ ರಾಜಧಾನಿ ಸೇರಿದ ಹಳ್ಳಿ ಹೈದ ಕುಶಾಲಪ್ಪ ಗೌಡರು ದೆಹಲಿಯ ರಾಯಸಿನ್ಹಾ ನಂ.೬ನಲ್ಲಿರುವ ವಾಜಪೇಯಿ ನಿವಾಸದಲ್ಲಿದ್ದು, ಅವರ ಖಾಸಗಿ ಅಂಬಾಸಿಡರ್ ಕಾರಿಗೆ ಚಾಲಕರಾಗಿ ಸುಮಾರು ಎರಡು ವರ್ಷ ದುಡಿದರು. ವಾಜಪೇಯಿಯವರ ಸಾಕು ಪುತ್ರಿಯ ಆತ್ಮೀಯತೆಯನ್ನೂ ಸಂಪಾದಿಸಿದರು.

ಇದಾಗಿ ಎರಡು ವರ್ಷಗಳ ಬಳಿಕ ಕುಶಾಲಪ್ಪ ಗೌಡರಿಗೆ ಊರಿಗೆ ಬರುವ ಅನಿವಾರ್ಯತೆ ಉಂಟಾಯಿತು. ತಾಯಿಗೆ ಹುಷಾರಿಲ್ಲವೆಂದು ಊರಿಗೆ ಬಂದವರು, ಕೌಟುಂಬಿಕ ಕಾರಣದಿಂದಾಗಿ ಮತ್ತೆ ದೆಹಲಿ ಸೇರಲಾಗಲಿಲ್ಲ.

ಒಂದಷ್ಟು ವರ್ಷ ಊರಲ್ಲೇ ಇದ್ದು ಮತ್ತೆ ಬೆಂಗಳೂರು ಸೇರಿದಾಗ ಬಿಜೆಪಿ ನಾಯಕ ಬಿ.ಎಸ್. ಯಡಿಯೂರಪ್ಪ ಅವರ ಖಾಸಗಿ ಕಾರಿಗೆ ಚಾಲಕನಾದರು. ಆಗ ಯಡಿಯೂರಪ್ಪನವರು ವಿಪಕ್ಷ ನಾಯಕ, ಬಳಿಕ ಉಪಮುಖ್ಯಮಂತ್ರಿಯಾಗಿದ್ದರು. ಯಡಿಯೂರಪ್ಪನವರ ಪುತ್ರರಿಗೂ ಸಾರಥಿಯಾದರು. ಶೋಭಾ ಕರಂದ್ಲಾಜೆ ಅವರಿಗೂ ಒಂದಷ್ಟು ಕಾಲ ಚಾಲಕರಾಗಿದ್ದರು. ಆ ಬಳಿಕ ಮತ್ತೆ ಊರಿಗೆ ಬಂದು ಪತ್ನಿ ಭಾಗೀರಥಿ ಅವರೊಂದಿಗೆ ಬಾಲೆಂಬಿಯಲ್ಲಿ ನೆಲೆಸಿದ್ದಾರೆ. ಪುತ್ರರಾದ ವಿನೋದ್ ಮತ್ತು ಪವನ್ ಸಣ್ಣ ಪುಟ್ಟ ಉದ್ಯೋಗದಲ್ಲಿದ್ದಾರೆ.ಪ್ರಥಮ ಭೇಟಿಯ ವೇಳೆ ವಾಜಪೇಯಿ ಅವರೊಂದಿಗೆ ಕುಶಾಲಪ್ಪ ಗೌಡರು ತೆಗೆಸಿಕೊಂಡ ಪೋಟೋ ಮತ್ತು ‘ಗುಡ್ ಡ್ರೈವಿಂಗ್ ಥ್ಯಾಂಕ್ಸ್’ ಎಂದು ಇಂಗ್ಲೀಷ್‌ನಲ್ಲಿ ವಾಜಪೇಯಿ ಹಸ್ತಾಕ್ಷರ ಈಗಲೂ ಕುಶಾಲಪ್ಪ ಗೌಡರಲ್ಲಿದೆ.

ರಾಜಕಾರಣ ಮತ್ತು ಚಲನಚಿತ್ರರಂಗದ ದಿಗ್ಗಜರಿಗೆ ಸಾರಥಿಯಾದ ಕುಶಾಲಪ್ಪ ಗೌಡರಿಗೆ ಈ ಹಳೆಯ ನೆನಪುಗಳಷ್ಟೆ ಆಸ್ತಿ. ಅನಾರೋಗ್ಯ, ಆರ್ಥಿಕ ಸಂಕಷ್ಟದ ಬಳಲಿಕೆಯೂ ಇದೆ. ಬಿಜೆಪಿ ನಾಯಕರು ಸಹಕಾರ ಮಾಡಬೇಕು ಎಂಬ ಕೋರಿಕೆ ಅವರದ್ದು......................ಇಷ್ಟೆಲ್ಲ ಆದರೂ ಸ್ವಂತಕ್ಕೊಂದು ಸೂರಿಲ್ಲ!

ವಾಜಪೇಯಿ, ಯಡಿಯೂರಪ್ಪ, ಅಮಿತಾ ಬಚ್ಚನ್‌ ಅವರಂತಹ ದಿಗ್ಗಜರಿಗೆ ಚಾಲಕರಾಗಿ ಕೆಲಸ ಮಾಡಿದ್ದರೂ ಕುಶಾಲಪ್ಪ ಗೌಡರಿಗೆ ಸ್ವಂತಕ್ಕೊಂದು ಮನೆಯಿಲ್ಲ. ಅವರದೇ ಆದ ಕೌಟುಂಬಿಕ ಸಮಸ್ಯೆಗಳೂ ಇದಕ್ಕೆ ಕಾರಣ.ಮದೆನಾಡಿನ ಅವರ ಮನೆತನಕ್ಕೆ ಹಲವು ಎಕರೆಗಳ ಆಸ್ತಿ ಮತ್ತು ಕಾಫಿ ತೋಟವಿತ್ತು. ಆದರೆ ತಂದೆಗೆ ಎರಡು ವಿವಾಹವಾಗಿದುದ್ದರಿಂದ ಆಸ್ತಿ ವಿಚಾರದಲ್ಲಿ ತಕರಾರುಗಳಿತ್ತು. ಕುಶಾಲಪ್ಪ ಗೌಡರಿಗೆಂದು ಮೀಸಲಾಗಿದ್ದ ಸ್ಥಳದಲ್ಲಿದ್ದ ಮನೆ ಏಳು ವರ್ಷಗಳ ಹಿಂದೆ ಕೊಡಗಿನಲ್ಲಿ ಸಂಭವಿಸಿದ ಪ್ರಕೃತಿ ದುರಂತ ವೇಳೆ ನೆಲಸಮವಾಯಿತು. ಆ ಬಳಿಕ ಕುಶಾಲಪ್ಪರು ಬಾಲೆಂಬಿಗೆ ಬಂದು ನೆಲೆಸಿದ್ದಾರೆ.

PREV

Recommended Stories

ಕಾರ್ಕಳ ಪುರಸಭೆ: ರಸ್ತೆಗಳ ತುರ್ತು ದುರಸ್ತಿಗೆ ಶಾಸಕ ಸುನಿಲ್‌ಕುಮಾರ್‌ ಸೂಚನೆ
ಗೀತೆಯಿಂದ ಬದಲಾಗುವ ಬದುಕು: ಗಣಪತಿ ಸಚ್ಚಿದಾನಂದ ಶ್ರೀ