ಕುಶಾಲನಗರ: ವಾಣಿಜ್ಯ ಮಳಿಗೆಗಳಲ್ಲಿ ಶೇ. 60ರಷ್ಟು ಕನ್ನಡ ಬಳಕೆ ಆದೇಶ ಉಲ್ಲಂಘಿಸಿ ಸಂಪೂರ್ಣ ಆಂಗ್ಲಮಯ ಫಲಕಗಳನ್ನು ಅಳವಡಿಸಿರುವ ಕ್ರಮ ವಿರೋಧಿಸಿ ಕುಶಾಲನಗರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಶಿವರಾಮೇಗೌಡ ಬಣದ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ವೇದಿಕೆ ಜಿಲ್ಲಾಧ್ಯಕ್ಷ ಬಿ.ಎ. ದಿನೇಶ್ ಶೆಟ್ಟಿ ಅವರ ನೇತೃತ್ವದಲ್ಲಿ ಪ್ರಮುಖರು ಹಾಗೂ ಕಾರ್ಯಕರ್ತರು ಮೆರವಣಿಗೆಯಲ್ಲಿ ಪುರಸಭೆ ಕಚೇರಿಗೆ ಆಗಮಿಸಿ ಕನ್ನಡ ವಿರೋಧಿ ಧೋರಣೆಯ ವಿರುದ್ಧ ಘೋಷಣೆ ಕೂಗಿದರು.
ನಂತರ ಮಳಿಗೆಯ ಮಾಲೀಕರಿಗೆ ಅಧಿಕಾರಿಗಳು ಸ್ಥಳದಲ್ಲಿಯೇ 5 ಸಾವಿರ ದಂಡ ವಿಧಿಸುವ ಸಂಬಂಧ ಪುರಸಭೆಯಿಂದ ರಶೀದಿ ನೀಡಲಾಯಿತು.
ಆಂಗ್ಲ ಫಲಕಗಳನ್ನು ತೆರೆವುಗೊಳಿಸುವುದಾಗಿ ಅಂಗಡಿಯ ಮಾಲೀಕರು ಭರವಸೆ ನೀಡಿದ ಮೇರೆಗೆ ಪ್ರತಿಭಟನೆ ಹಿಂತೆಗೆದು ಕೊಂಡರು.ವೇದಿಕೆಯ ಜಿಲ್ಲಾ ಸಂಚಾಲಕ ಎಂ.ಎಸ್. ಮಣಿಕಂಠ, ತಾಲೂಕು ಅಧ್ಯಕ್ಷರಾದ ಪುಟ್ಟಸ್ವಾಮಿ, ಪ್ರವೀಣ್ ಪೂಜಾರಿ, ಗೌರವಾಧ್ಯಕ್ಷ ನಾಗರಾಜ್ ಪ್ರಮುಖರಾದ ವಿನ್ಸೆಂಟ್ ಲೋಬೋ, ಸರಳ ರಾಮಣ್ಣ, ಸೋಮೇಶ್ ಮತ್ತಿತರರು ಇದ್ದರು.