ಕುಶಾಲನಗರ: ಕಾವೇರಿ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಸ್ವಲ್ಪ ಏರಿಕೆ

KannadaprabhaNewsNetwork |  
Published : Apr 10, 2026, 02:15 AM IST
ಕುಶಾಲನಗರ ಬೈಚನಹಳ್ಳಿ ಪಂಪ್ ಹೌಸ್ ಬಳಿಯ ದೃಶ್ಯ | Kannada Prabha

ಸಾರಾಂಶ

ಬಿರು ಬಿಸಿಲಿನ ನಡುವೆ ಕೆಲವು ದಿನಗಳ ಹಿಂದೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಸುರಿದ ಮಳೆ ಕಾರಣ ಕುಶಾಲನಗರ ಮೂಲಕ ಹರಿವ ಕಾವೇರಿ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಸ್ವಲ್ಪ ಏರಿಕೆ ಕಂಡು ಬಂದಿದೆ.

ಕನ್ನಡಪ್ರಭ ವಾರ್ತೆ ಕುಶಾಲನಗರ ಬಿರು ಬಿಸಿಲಿನ ನಡುವೆ ಕೆಲವು ದಿನಗಳ ಹಿಂದೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಸುರಿದ ಮಳೆ ಕಾರಣ ಕುಶಾಲನಗರ ಮೂಲಕ ಹರಿವ ಕಾವೇರಿ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಸ್ವಲ್ಪ ಏರಿಕೆ ಕಂಡು ಬಂದಿದೆ. ಮಾರ್ಚ್ ತಿಂಗಳ ನಡುವೆ ಕಾವೇರಿ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಸಂಪೂರ್ಣ ಕ್ಷೀಣ ಗೊಂಡಿತ್ತು. ಕುಶಾಲನಗರ ಸೇರಿದಂತೆ ಜಲಾನಯನ ಪ್ರದೇಶಗಳಲ್ಲಿ ಮಳೆ ಬಿದ್ದ ಬೆನ್ನಲ್ಲಿಯೇ ಕೃಷಿ ಚಟುವಟಿಕೆಗಳಿಗೆ ನದಿ ಅಂಚಿನಲ್ಲಿ ಅಳವಡಿಸಿದ್ದ ಮೋಟಾರ್ ಪಂಪ್ ಗಳು ಸ್ಥಗಿತಗೊಂಡು ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಏರಿಕೆಯಾಗಲು ಕಾರಣವಾಗಿದೆ. ಕುಶಾಲನಗರ ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ನಿಟ್ಟಿನಲ್ಲಿ ನೀರು ಸರಬರಾಜು ಮಂಡಳಿ ನದಿಯಲ್ಲಿ ನೀರಿನ ಸಂಗ್ರಹ ಮಾಡಲು ಮರಳು ಬಂಡ್ ನಿರ್ಮಿಸಿ ಮೋಟಾರ್ ಮೂಲಕ ಕುಶಾಲನಗರ ಪಟ್ಟಣಕ್ಕೆ ನೀರು ಸರಬರಾಜು ಮಾಡುವ ಕಾರ್ಯ ನಡೆದಿದೆ. ಆದರೆ ಕೆಲವು ದಿನಗಳ ಹಿಂದೆ ಸುರಿದ ಮಳೆ ಹಿನ್ನೆಲೆಯಲ್ಲಿ ಇದೀಗ ನದಿಯಲ್ಲಿ ನೀರಿನ ಹರಿವು ಹೆಚ್ಚಳಗೊಂಡು ಪಂಪ್ ಹೌಸ್ ಬಳಿ ಹೆಚ್ಚುವರಿ ನೀರು ನದಿಯಲ್ಲಿ ಹರಿಯುತ್ತಿರುವ ದೃಶ್ಯ ಕಾಣಬಹುದು. ಈ ಬಾರಿ ಇದುವರೆಗೆ ಕುಡಿಯುವ ನೀರಿನ ಸರಬರಾಜು ವ್ಯವಸ್ಥೆಯಲ್ಲಿ ಯಾವುದೇ ರೀತಿಯ ತೊಡಕು ಉಂಟಾಗಿಲ್ಲ ಎಂದು ಕರ್ನಾಟಕ ಒಳಚರಂಡಿ ಮತ್ತು ಕುಡಿಯುವ ನೀರು ಸರಬರಾಜು ಮಂಡಳಿ ಅಧಿಕಾರಿಗಳು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.ಮುಂದಿನ ದಿನಗಳಲ್ಲಿ ಜಲಾನಯನ ಪ್ರದೇಶಗಳಲ್ಲಿ ಮಳೆಯಾಗದಿದ್ದರೆ ನದಿ ನೀರಿನ ಹರಿವು ಕುಸಿತ ಉಂಟಾಗಿ ಮತ್ತೆ ನೀರಿಗೆ ಸಮಸ್ಯೆ ಉಂಟಾಗಬಹುದು ಎನ್ನುವುದು ಸ್ಥಳೀಯ ಅಧಿಕಾರಿಗಳ ಅಭಿಪ್ರಾಯವಾಗಿದೆ. ಯಾವುದೇ ಸಂದರ್ಭ ಪಟ್ಟಣ ಹಾಗೂ ಗ್ರಾಮ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಉಂಟಾಗದಂತೆ ಕ್ರಮ ಕೈಗೊಳ್ಳಲು ಕ್ಷೇತ್ರದ ಶಾಸಕರಾದ ಮಂತರ್ ಗೌಡ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಪಟ್ಟಣ ಮತ್ತು ಗ್ರಾಮ ವ್ಯಾಪ್ತಿಗಳಲ್ಲಿ ಕೊಳವೆ ಬಾವಿಗಳ ನಿರ್ವಹಣೆ ಮತ್ತು ಅಗತ್ಯವಿದ್ದಲ್ಲಿ ನೂತನ ಕೊಳವೆಬಾವಿಗಳನ್ನು ನಿರ್ಮಿಸುವ ಕೆಲಸ ಮಾಡುವಂತೆ ಸೂಚಿಸಿದ್ದಾರೆ.ಕುಶಾಲನಗರ ಪಟ್ಟಣ ಮತ್ತು ಸುತ್ತಮುತ್ತ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಪೋಲಾಗದಂತೆ ಎಚ್ಚರವಹಿಸಲು ಪುರಸಭೆಯ ಮುಖ್ಯ ಅಧಿಕಾರಿ ಗಿರೀಶ್ ಅವರು ಮನವಿ ಮಾಡಿದ್ದಾರೆ. ನದಿ ನೀರಿಗೆ ಪರ್ಯಾಯವಾಗಿ ಪಟ್ಟಣಕ್ಕೆ ಕುಡಿಯುವ ನೀರು ಒದಗಿಸಲು ಕೊಳವೆ ಬಾವಿಗಳ ಮೂಲಕ ನೀರು ಸರಬರಾಜು ಮಾಡಲು ಕೂಡ ಎಲ್ಲ ರೀತಿಯ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಗಿರೀಶ್ ಅವರು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹನುಮಗಿರಿ ಬ್ರಹ್ಮಕಲಶ: ಪುತ್ತೂರಿನಿಂದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ
ಈ ವರ್ಷವೂ ಮಂಗಳೂರಲ್ಲೇ ಅಂ.ರಾ. ಬ್ಯಾಡ್ಮಿಂಟನ್‌ ಟೂರ್ನಿ