ಫೆ.15ರಂದು ಕುಷ್ಟಗಿ ತಾಲೂಕು ಸಾಹಿತ್ಯ ಸಮ್ಮೇಳನ

KannadaprabhaNewsNetwork |  
Published : Dec 31, 2024, 01:00 AM IST
ಪೋಟೊ30ಕೆಎಸಟಿ1: ಕುಷ್ಟಗಿ ಪಟ್ಟಣದ ಶಾಸಕರ ಕಾರ್ಯಾಲಯದಲ್ಲಿ ಸ್ವಾಗತ ಸಮಿತಿ ಅಧ್ಯಕ್ಷ ಶಾಸಕ ದೊಡ್ಡನಗೌಡ ಪಾಟೀಲ ಅವರ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಯಿತು. | Kannada Prabha

ಸಾರಾಂಶ

ತಾಲೂಕಿನ ಹೂಲಗೇರಾ ಗ್ರಾಮದಲ್ಲಿ ಫೆ.15ರಂದು ಕುಷ್ಟಗಿ ತಾಲೂಕಿನ 13ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ನಿರ್ಧರಿಸಲಾಗಿದೆ.

ಪೂರ್ವಭಾವಿ ಸಭೆಯಲ್ಲಿ ನಿರ್ಧಾರ । ಜ.3ರಂದು ಲಾಂಛನ ಬಿಡುಗಡೆ

ಯಶಸ್ವಿಗೆ ಮುಂದಾಗುವಂತೆ ಶಾಸಕ ದೊಡ್ಡನಗೌಡ ಪಾಟೀಲ ಮನವಿ

ಕನ್ನಡಪ್ರಭ ವಾರ್ತೆ ಕುಷ್ಟಗಿ

ತಾಲೂಕಿನ ಹೂಲಗೇರಾ ಗ್ರಾಮದಲ್ಲಿ ಫೆ.15ರಂದು ಕುಷ್ಟಗಿ ತಾಲೂಕಿನ 13ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ನಿರ್ಧರಿಸಲಾಗಿದ್ದು, ಎಲ್ಲಾ ಕಸಾಪ ಆಜೀವ ಸದಸ್ಯರು ಕನ್ನಡಾಭಿಮಾನಿಗಳು, ಸಾರ್ವಜನಿಕರು ಸಹಕಾರ ನೀಡುವ ಮೂಲಕ ಸಮ್ಮೇಳನ ಯಶಸ್ವಿಗೊಳಿಸಬೇಕು ಎಂದು ಸ್ವಾಗತ ಸಮಿತಿ ಅಧ್ಯಕ್ಷ ಶಾಸಕ ದೊಡ್ಡನಗೌಡ ಪಾಟೀಲ ತಿಳಿಸಿದರು.

ಪಟ್ಟಣದ ಶಾಸಕರ ಕಾರ್ಯಾಲಯದಲ್ಲಿ ನಡೆದ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಸುಮಾರು ಮೂರ್ನಾಲ್ಕು ವರ್ಷಗಳಿಂದ ನಮ್ಮ ತಾಲೂಕಿನಲ್ಲಿ ಸಮ್ಮೇಳನ ನಡೆದಿಲ್ಲ. ಆದ ಕಾರಣ ಈ ಸಮ್ಮೇಳನವನ್ನು ಅತ್ಯಂತ ಯಶಸ್ವಿಯಾಗುವಂತೆ ನೋಡಿಕೊಳ್ಳಬೇಕು. ಯಾವುದೇ ತೊಂದರೆ ಉಂಟಾಗದ ರೀತಿಯಲ್ಲಿ ಕೆಲಸ ಮಾಡಬೇಕು ಎಂದರು.

ಈ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ನಾಡು ನುಡಿ, ನೆಲ ಜಲದ ಕುರಿತು ವಿಶೇಷ ಗೋಷ್ಠಿ ಏರ್ಪಡಿಸಲಾಗುವುದು. ಸಮ್ಮೇಳನದ ಕುರಿತಂತೆ ಒಂದು ಸ್ಮರಣ ಸಂಚಿಕೆ ಹೊರತರುವ ಕೆಲಸವಾಗಲಿದ್ದು, ಒಟ್ಟಿನಲ್ಲಿ ಸಮ್ಮೇಳನದ ಯಶಸ್ವಿಗೆ ಎಲ್ಲರೂ ಶ್ರಮಿಸಬೇಕು. ಕನ್ನಡಮ್ಮನ ಸೇವೆ ಮಾಡಲು ಮುಂದಾಗಬೇಕು. ಅದಕ್ಕೆ ಬೇಕಾಗುವಂತಹ ಸಹಕಾರ ನೀಡಲಾಗುತ್ತದೆ ಎಂದರು.

ಕಸಾಪ ಜಿಲ್ಲಾ ನಿಕಟಪೂರ್ವ ಕಾರ್ಯದರ್ಶಿ ರವೀಂದ್ರ ಬಾಕಳೆ ಮಾತನಾಡಿ, 13ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಜನವರಿ ತಿಂಗಳ ಕೊನೆಯ ವಾರದಲ್ಲಿ ಮಾಡುವಂತೆ ನಿರ್ಧರಿಸಲಾಗಿತ್ತು. ಆದರೆ ಸ್ಮರಣ ಸಂಚಿಕೆಯ ಸಲುವಾಗಿ ಫೆ. 15ರಂದು ನಿರ್ಧರಿಸಲಾಗಿದೆ. ಇದೇ ಜ. 3ರಂದು ಸಮ್ಮೇಳನದ ಲಾಂಛನ ಬಿಡುಗಡೆ ಮಾಡಲಾಗುತ್ತದೆ. ಅಂದು ನಡೆಯುವ ತಾಲೂಕು ಕಸಾಪ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಸಮ್ಮೇಳನಾಧ್ಯಕ್ಷರ ಆಯ್ಕೆ ಹಾಗೂ ಘೋಷಣೆ ಮಾಡಲಾಗುತ್ತದೆ. ಈ ಸಮ್ಮೇಳನದಲ್ಲಿ ಒಟ್ಟು 13 ಪುಸ್ತಕಗಳ ಬಿಡುಗಡೆ, 13 ಜನ ಸಾಧಕರಿಗೆ ಸನ್ಮಾನ ಕಾರ್ಯಕ್ರಮ, ಅನೇಕ ಗೋಷ್ಟಿಗಳು ಸೇರಿದಂತೆ ವಿಶಿಷ್ಟವಾದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಕಸಾಪ ತಾಲೂಕಾಧ್ಯಕ್ಷ ಲೆಂಕಪ್ಪ ವಾಲಿಕಾರ ಮಾತನಾಡಿದರು.

ಈ ಸಂದರ್ಭ ಕಸಾಪ ಕೇಂದ್ರ ಸಂಘ-ಸಂಸ್ಥೆ ಪ್ರತಿನಿಧಿ ನಬಿಸಾಬ ಕುಷ್ಟಗಿ, ಜಿಪಂ ಮಾಜಿ ಸದಸ್ಯ ಕೆ. ಮಹೇಶ, ಗೌರವ ಕಾರ್ಯದರ್ಶಿ ಶರಣಪ್ಪ ಲೈನದ, ಶಶಿಧರ ಕವಲಿ, ಶ್ರೀನಿವಾಸ ಕಂಟ್ಲಿ, ಪರಶಿವಮೂರ್ತಿ ಮಾಟಲದಿನ್ನಿ, ಶ್ರೀಕಾಂತ ಸರಗಣಾಚಾರಿ, ಸಂಗಮೇಶ ಲೂತಿಮಠ, ದೊಡ್ಡಪ್ಪ ಕೈಲವಾಡಗಿ, ನಾಗರಾಜ ಬಡಿಗೇರ, ಶುಖಮುನಿ ಗುರುವಿನ, ಶರಣಪ್ಪ ಸೇರಿದಂತೆ ಹಲವರು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ