ಉಪ್ಪಿನಂಗಡಿ: ಐರ್ಲೆಂಡ್‌ನಲ್ಲಿ ಫೆ. ೧೯ರಂದು ಮೃತಪಟ್ಟ ಕಡಬ ತಾಲೂಕು ಕುಟ್ರುಪ್ಪಾಡಿ ಗ್ರಾಮದ ವಿಮಲಗಿರಿ ನಿವಾಸಿ ಸುನಿಲ್ ಅವರ ಪುತ್ರ ಸಾಂಜೋ ಸುನಿಲ್ (೩೧) ಅವರ ಪಾರ್ಥಿವ ಶರೀರ ಶನಿವಾರ ಸಂಜೆ ಅವರ ಮನೆಗೆ ತಲುಪಿದ್ದು, ಭಾನುವಾರ ವಿಮಲಗಿರಿ ಸೈಂಟ್ ಮೇರಿಸ್ ಮಲಂಕರ ಕ್ಯಾಥೊಲಿಕ್ ಚರ್ಚನ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ನಡೆಯಿತು.
ಸಾಂಜೋ ಸುನಿಲ್ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದು, ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಐರಿಶ್ ಪೊಲೀಸರು ಪ್ರಾಥಮಿಕ ತನಿಖೆ ನಡೆಸಿ ಆತ್ಮಹತ್ಯೆ ಇರಬಹುದು ಎಂದು ಶಂಕಿಸಿದ್ದರು. ವರ್ಷದ ಹಿಂದೆಯಷ್ಟೆ ಸಾಂಜೋ ಸುನಿಲ್ ಅವರ ಮದುವೆಯಾಗಿತ್ತು. ಪತ್ನಿ ಲಿಷ್ಮಾ ಫಿಲಿಫ್ ಐರ್ಲೆಂಡ್ ನಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದಾರೆ. ಇಸ್ರೆಲ್ ನಲ್ಲಿ ಉದ್ಯೋಗದಲ್ಲಿದ್ದ ಸ್ಯಾಂಜೋ ಬದುವೆ ಬಳಿಕ ಅಲ್ಲಿನ ಕೆಲಸ ಬಿಟ್ಟು ಐರ್ಲೆಂಡ್‌ನಲ್ಲಿ ಕೆಲಸ ಮಾಡುವುದಾಗಿ ತಿಂಗಳ ಹಿಂದೆಯಷ್ಟೆ ಅಲ್ಲಿಗೆ ತೆರಳಿದ್ದರು ಎಂದು ತಿಳಿದುಬಂದಿದೆ. ಮೃತರು ಪತ್ನಿ, ತಂದೆ, ತಾಯಿ ಮತ್ತು ಇಬ್ಬರು ಸಹೋದರರನ್ನು ಅಗಲಿದ್ದಾರೆ.