ಕುವೆಂಪು ಅಂತರಂಗದ ಶಿಷ್ಯ ವೃಷಭೇಂದ್ರಸ್ವಾಮಿ

KannadaprabhaNewsNetwork |  
Published : Jan 30, 2025, 12:32 AM IST
29ಡಿಡಬ್ಲೂಡಿ5ಕರ್ನಾಟಕ ವಿದ್ಯಾವರ್ಧಕ ಸಂಘವು ದಿ.ಡಾ.ಎಸ್.ಎಂ. ವೃಷಭೇಂದ್ರಸ್ವಾಮಿ ದತ್ತಿಯಲ್ಲಿ ಅವರ ಭಾವಚಿತ್ರಕ್ಕೆ ಗೌರವ ಸಲ್ಲಿಸಲಾಯಿತು.  | Kannada Prabha

ಸಾರಾಂಶ

ಡಾ. ಎಸ್.ಎಂ. ವೃಷಭೇಂದ್ರಸ್ವಾಮಿಗಳು ಮಾನವೀಯತೆ ಹಾಗೂ ಹೃದಯವಂತಿಕೆಯ ವ್ಯಕ್ತಿಗಳು. ಡಾ. ಚಂದ್ರಶೇಖರ ಕಂಬಾರ, ಡಾ. ಎಂ.ಎಂ. ಕಲಬುರ್ಗಿ, ಡಾ. ಗುರುಲಿಂಗ ಕಾಪಸೆಯಂಥವರಿಗೆ ವಿದ್ಯಾಗುರುಗಳಾಗಿ ಸೃಜನಶೀಲ ಶಕ್ತಿ ಅರಳುವಂತೆ ಮಾಡಿದವರು.

ಧಾರವಾಡ:

ದಿ. ಎಸ್.ಎಂ. ವೃಷಭೇಂದ್ರಸ್ವಾಮಿಗಳು ರಾಷ್ಟ್ರಕವಿ ಕುವೆಂಪು ಅವರ ಅಂತರಂಗದ ಶಿಷ್ಯರು. ಅವರೊಬ್ಬ ಶ್ರೇಷ್ಠ ಪ್ರಾಧ್ಯಾಪಕರು ಮಾತ್ರವಲ್ಲ ಉತ್ತಮ ಆಡಳಿತಗಾರರೂ ಆಗಿದ್ದರು ಎಂದು ವಿಶ್ರಾಂತ ಪ್ರಾಧ್ಯಾಪಕ ಡಾ. ಜಿ.ಎಂ. ಹೆಗಡೆ ಹೇಳಿದರು.

ಕರ್ನಾಟಕ ವಿದ್ಯಾವರ್ಧಕ ಸಂಘವು ದಿ. ಡಾ. ಎಸ್.ಎಂ. ವೃಷಭೇಂದ್ರಸ್ವಾಮಿ ದತ್ತಿ ಅಂಗವಾಗಿ ಆಯೋಜಿಸಿದ್ದ ಉಪನ್ಯಾಸದಲ್ಲಿ ಮಾತನಾಡಿದ ಅವರು, ಡಾ. ಎಸ್.ಎಂ. ವೃಷಭೇಂದ್ರಸ್ವಾಮಿಗಳು ಮಾನವೀಯತೆ ಹಾಗೂ ಹೃದಯವಂತಿಕೆಯ ವ್ಯಕ್ತಿಗಳು. ಡಾ. ಚಂದ್ರಶೇಖರ ಕಂಬಾರ, ಡಾ. ಎಂ.ಎಂ. ಕಲಬುರ್ಗಿ, ಡಾ. ಗುರುಲಿಂಗ ಕಾಪಸೆಯಂಥವರಿಗೆ ವಿದ್ಯಾಗುರುಗಳಾಗಿ ಸೃಜನಶೀಲ ಶಕ್ತಿ ಅರಳುವಂತೆ ಮಾಡಿದವರು. ಕವಿವಿಯಲ್ಲಿ ಪಠ್ಯಪುಸ್ತಕ ವಿಭಾಗದ ನಿರ್ದೇಶಕರಾಗಿ ವಿಜ್ಞಾನ ವಿಷಯಗಳನ್ನು ಕನ್ನಡದಲ್ಲಿ ಅನುವಾದಿಸುವ ಕಾರ್ಯ ಮಾಡಿದ್ದಾರೆ. ಉತ್ತಮ ಭಾಷಣಕಾರರಾದ ಅವರು ನಾಡಿನಾದ್ಯಂತ ಸಂಚರಿಸಿ ಕನ್ನಡ ಸಾಹಿತ್ಯ ಲೋಕ ಶ್ರೀಮಂತಗೊಳಿಸಿದ್ದಾರೆ ಎಂದರು.

1975ರಲ್ಲಿ ಹೊರಬಂದ ಅವರ ಪಿಎಚ್.ಡಿ ಮಹಾಪ್ರಬಂಧ ‘ಕನ್ನಡ ಸಾಹಿತ್ಯದಲ್ಲಿ ಅಲ್ಲಮಪ್ರಭುದೇವ’ ಒಂದು ಮೇರು ಕೃತಿಯಾಗಿದೆ. ಅಲ್ಲಮಪ್ರಭುವಿನ ವಚನಗಳೇ ಕಠಿಣ ಎಂಬ ಭಾವನೆ ಇದ್ದಾಗ ಡಾ. ಎಸ್.ಎಂ. ವೃಷಭೇಂದ್ರಸ್ವಾಮಿಗಳು ಬಹಳ ಎಚ್ಚರಿಕೆಯಿಂದ ಶ್ರಮವಹಿಸಿ ಮಹಾಪ್ರಬಂಧವನ್ನು ರಚಿಸಿದ್ದಾರೆ. ಇದರ ವಿವಿಧ ಭಾಗದಲ್ಲಿ ಅಲ್ಲಮಪ್ರಭುವಿನ ಜೀವನ, ಕುರುಹು, ಶರಣರು ಕಂಡಂತೆ ಅಲ್ಲಮಪ್ರಭುವಿನ ವ್ಯಕ್ತಿತ್ವ ಹಾಗೂ ಶೂನ್ಯ ಸಂಪಾದನೆಯ ಬಗ್ಗೆ ಮನೋಜ್ಞವಾಗಿ ವ್ಯಾಖ್ಯಾನಿಸಿದ್ದಾರೆ. 50 ವರ್ಷಗಳ ನಂತರದ ಈ ಕಾಲಘಟ್ಟದಲ್ಲಿ ಅವರ ಮಹಾಪ್ರಬಂಧದ ಮರುಚಿಂತನೆ ಮಾಡುವುದು ಅಗತ್ಯವಾಗಿದೆ ಎಂದು ಹೇಳಿದರು. ದತ್ತಿದಾನಿ, ಖ್ಯಾತ ವಿಜ್ಞಾನಿ ಡಾ. ಎಸ್.ಎಂ. ಶಿವಪ್ರಸಾದ ಮಾತನಾಡಿ, ಸಾಹಿತ್ಯ ಹಾಗೂ ವಿಜ್ಞಾನಕ್ಕೂ ನಿಕಟ ಸಂಬಂಧವಿದೆ. ಕನ್ನಡ ಸಾಹಿತ್ಯದಲ್ಲಿ ಗುಣಾತ್ಮಕ ಪುಸ್ತಕಗಳ ಕೊರತೆ ಇದೆ. ಕನ್ನಡದಲ್ಲಿ ಶಕ್ತಿ ಹೆಚ್ಚಿಸಲು ವಿಜ್ಞಾನವನ್ನು ಕನ್ನಡದಲ್ಲಿ ತರುವ ಪ್ರಯತ್ನಬೇಕೆಂದರು.

ಅಧ್ಯಕ್ಷತೆ ವಹಿಸಿದ್ದ ಎಮೆರಿಟಸ್ ಪ್ರೊಫೆಸರ್ ಡಾ. ಸಿ.ಆರ್. ಯರವಿನತೆಲಿಮಠ, ಡಾ. ಎಸ್.ಎಂ. ವೃಷಭೇಂದ್ರಸ್ವಾಮಿಗಳದು ಆತ್ಮ ಸಂತೋಷದ ಸಂತೃಪ್ತ ಬದುಕು. ಮಕ್ಕಳೆಂದರೆ ಅವರಿಗೆ ಬಲು ಪ್ರೀತಿ. ಈ ನಾಡಿಗೆ ಎಸ್.ಎಂ. ಶಿವಪ್ರಸಾದರಂತಹ ಶ್ರೇಷ್ಠ ವಿಜ್ಞಾನಿಯನ್ನು ನೀಡಿದ್ದಾರೆ ಎಂದರು.

ಶಿಲ್ಪಾ ನವಲಿಮಠ ಮತ್ತು ಜಯಂತಿ ಸಂಗಡಿಗರಿಂದ ವಚನ ಗಾಯನ ನಡೆಯಿತು. ವಿನೋದ ಪಾಟೀಲ ಹಾರ್ಮೋನಿಯಂ ಮತ್ತು ತಬಲಾ ತುಕಾರಾಂ ಮಡಿವಾಳರ ಸಾಥ್ ನೀಡಿದರು. ವಿಶ್ವೇಶ್ವರಿ ಹಿರೇಮಠ ಸ್ವಾಗತಿಸಿದರು. ವೀರಣ್ಣ ಒಡ್ಡೀನ ಪ್ರಾಸ್ತಾವಿಕ ಮಾತನಾಡಿದರು. ಶಂಕರ ಕುಂಬಿ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''