ಕನ್ನಡಪ್ರಭ ವಾರ್ತೆ ಚಾಮರಾಜನಗರ
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಸರಳವಾಗಿ ಹಮ್ಮಿಕೊಳ್ಳಲಾಗಿದ್ದ ಜಗದ ಕವಿ, ಯುಗದ ಕವಿ ಕುವೆಂಪು ಅವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಕುವೆಂಪು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಅವರು ಮಾತನಾಡಿದರು.
ಕನ್ನಡದಲ್ಲಿ ಅನೇಕ ಮೌಲ್ಯಯುತ ಕಥೆ, ಕವನ, ಕಾದಂಬರಿಗಳನ್ನು ರಚಿಸುವ ಮೂಲಕ ಕುವೆಂಪು ಅವರು ಕನ್ನಡ ಭಾಷೆ, ಸಂಸ್ಕೃತಿಗೆ ಅಪಾರ ಕೊಡುಗೆ ನೀಡಿದ್ದಾರೆ. ಕುವೆಂಪು ಅವರು ಕಥೆ, ಕವನಗಳಿಗೆ ಸೀಮಿತವಾಗಿರದೇ ಹಲವಾರು ವಿಮರ್ಶಾತ್ಮಕ ಹಾಗೂ ವೈಚಾರಿಕತೆಯ ಲೇಖನಗಳನ್ನು ರಚಿಸಿದ್ದಾರೆ. ಅವರು ನೀಡಿದ ವಿಶ್ವಮಾನವ ಸಂದೇಶ ಇಂದಿಗೂ ಪ್ರಸ್ತುತವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವೆಂಕಟೇಶ್ ಅಭಿಪ್ರಾಯಪಟ್ಟರು.ಶಾಸಕ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ಕನ್ನಡದ ಅತ್ಯಂತ ಶ್ರೇಷ್ಠ ಕವಿಗಳಲ್ಲಿ ಕುವೆಂಪು ಒಬ್ಬರಾಗಿದ್ದಾರೆ. ಕುವೆಂಪು ಅವರ ಅರ್ಥಪೂರ್ಣ ಚಿಂತನೆ, ಆದರ್ಶಗಳನ್ನು ಅನುಸರಿಸಿ ಪಾಲಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು. ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಂಜುನಾಥ ಪ್ರಸನ್ನ ಮಾತನಾಡಿ, ಕುವೆಂಪು ಅವರು ೨೦ನೇ ಶತಮಾನದ ಕನ್ನಡದ ಬಹುದೊಡ್ಡ ಕವಿಯಾಗಿದ್ದಾರೆ. ಆಡು ಮುಟ್ಟದ ಸೊಪ್ಪಿಲ್ಲ, ಕುವೆಂಪು ಅವರು ರಚಿಸದ ಕಥೆ, ಕವನಗಳಿಲ್ಲ ಎಂದರೇ ತಪ್ಪಾಗಲಾರದು. ಕಥೆ, ಕವಿತೆ, ಕಾದಂಬರಿ, ನಾಟಕಕಾರ, ವಿಮರ್ಶಕರು, ಆತ್ಮಕಥನ, ಜೀವನ ಚರಿತ್ರೆ, ವೈಚಾರಿಕ ಲೇಖನಗಳನ್ನು ರಚಿಸಿ ಕನ್ನಡ ಸಾಹಿತ್ಯದಲ್ಲಿ ಕುವೆಂಪು ತಮ್ಮದೇ ಛಾಪು ಮೂಡಿಸಿದ್ದಾರೆ. ಇವೆಲ್ಲವೂ ಈ ದೇಶದ ಸಾಮಾಜಿಕ ಹಿನ್ನೆಲೆಯಲ್ಲಿ ರಚಿತವಾಗಿವೆ ಎಂದು ತಿಳಿಸಿದರು.
ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಮ್ಮದ್ ಅಸ್ಗರ್ ಮುನ್ನಾ, ಜಿಪಂ ಸಿಇಒ ಮೋನಾ ರೋತ್, ಎಸ್ಪಿ ಡಾ.ಬಿ.ಟಿ.ಕವಿತ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಟಿ.ಹೀರಾಲಾಲ್, ಬಿಆರ್‌ಟಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಪತಿ, ಮಲೆಮಹದೇಶ್ವರ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಸಂತೋಷ್ ಕುಮಾರ್, ಕಾವೇರಿ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸುರೇಂದ್ರ, ಎಡಿಸಿ ಗೀತಾ ಹುಡೇದ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಉದಯ್‌ಕುಮಾರ್, ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು, ರೈತ ಮುಖಂಡರು ಇದ್ದರು.