ಕುವೆಂಪು ಮೈಸೂರು ವಿವಿಯ ಅಸ್ಮಿತೆ: ಪ್ರೊ.ಎನ್‌.ಕೆ. ಲೋಕನಾಥ್‌ ಬಣ್ಣನೆ

KannadaprabhaNewsNetwork |  
Published : Jan 04, 2025, 12:30 AM IST
2 | Kannada Prabha

ಸಾರಾಂಶ

ಕುವೆಂಪು ಅವರು ಕನ್ನಡ ಸಾಹಿತ್ಯಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಆ ಮೂಲಕ ಕನ್ನಡವನ್ನು ಎತ್ತರಕ್ಕೆ ಬೆಳೆಸಿದ್ದಾರೆ. ವಿಶ್ವಮಾನವ ಸಂದೇಶವನ್ನು ಕೂಡ ನೀಡಿದ್ದಾರೆ. ಅವರ ತತ್ವಾದರ್ಶಗಳನ್ನು ಪಾಲಿಸುವ ಮೂಲಕ ನಾವು ಗೌರವ ಸಲ್ಲಿಸಬೇಕು.

ಕನ್ನಡಪ್ರಭ ವಾರ್ತೆ ಮೈಸೂರು

ರಾಷ್ಟ್ರಕವಿ ಕುವೆಂಪು ಅವರು ಮೈಸೂರು ವಿಶ್ವವಿದ್ಯಾಲಯದ ಅಸ್ಮಿತೆ ಎಂದು ಕುಲಪತಿ ಪ್ರೊ.ಎನ್‌.ಕೆ. ಲೋಕನಾಥ್‌ ಹೇಳಿದರು.

ವಿಶ್ವಮಾನವ ಮೈಸೂರು ವಿಶ್ವವಿದ್ಯಾನಿಲಯ ನೌಕರರ ವೇದಿಕೆ ಹಾಗೂ ನವ ವಿಶ್ವಮಾನವ ಟ್ರಸ್ಟ್‌ ಶುಕ್ರವಾರ ಮಾನಸ ಗಂಗೋತ್ರಿ ಮಹಾದ್ವಾರದ ಎದುರು ಏರ್ಪಡಿಸಿದ್ದ ಕುವೆಂಪು ಜನ್ಮದಿನ ಕಾರ್ಯಕ್ರಮದಲ್ಲಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ಮಾನಸ ಗಂಗೋತ್ರಿ ಕ್ಯಾಂಪಸ್‌ ಬರಲು ಕುವೆಂಪು ಅವರೇ ಕಾರಣ. ಹೀಗಾಗಿ ಯಾವತ್ತೂ ಅವರನ್ನು ಮರೆಯಲಾಗದು ಎಂದರು.

ಮಾಜಿ ಪ್ರಧಾನಿ ಡಾ.ಮನಮೋಹನ್‌ ಸಿಂಗ್‌ ನಿಧನದ ಹಿನ್ನೆಲೆಯಲ್ಲಿ ಡಿ.29 ರಂದು ಕುವೆಂಪು ಅವರ ಜನ್ಮದಿನವನ್ನು ಆಚರಿಸಲಾಗಲಿಲ್ಲ. ಹೀಗಾಗಿ ಜ.8 ರಂದು ವಿಶ್ವವಿದ್ಯಾನಿಲಯ ವತಿಯಿಂದ ಕುವೆಂಪು ಜನ್ಮದಿನವನ್ನು ಆಯೋಜಿಸಲಾಗಿದೆ ಎಂದರು.

ಕುವೆಂಪು ಅವರು ಕನ್ನಡ ಸಾಹಿತ್ಯಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಆ ಮೂಲಕ ಕನ್ನಡವನ್ನು ಎತ್ತರಕ್ಕೆ ಬೆಳೆಸಿದ್ದಾರೆ. ವಿಶ್ವಮಾನವ ಸಂದೇಶವನ್ನು ಕೂಡ ನೀಡಿದ್ದಾರೆ. ಅವರ ತತ್ವಾದರ್ಶಗಳನ್ನು ಪಾಲಿಸುವ ಮೂಲಕ ನಾವು ಗೌರವ ಸಲ್ಲಿಸಬೇಕು ಎಂದರು.

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್‌ ಮಾತನಾಡಿ, ಕುವೆಂಪು ಅವರು ಕೇವಲ ಕರ್ನಾಟಕ ಅಥವಾ ಭಾರತಕ್ಕೆ ಸೀಮಿತವಲ್ಲ. ಅವರೊಬ್ಬ ವಿಶ್ವ ಕವಿ ಎಂದರು.

ಕುವೆಂಪು ಅವರು ತಮ್ಮ ಸಾಹಿತ್ಯದಲ್ಲಿ ವೈಚಾರಿಕತೆಯನ್ನು ಪ್ರತಿಪಾದಿಸಿದ್ದಾರೆ. ಸ್ವಾತಂತ್ರ್ಯಪೂರ್ವದಲ್ಲಿಯೇ ವೈಚಾರಿಕ ಚಿಂತನೆಗಳನ್ನು ಜನರಲ್ಲಿ ಬಿತ್ತುವ ಕೆಲಸ ಮಾಡಿದ್ದಾರೆ. ಹೀಗಾಗಿ ಅವರ ಸಾಹಿತ್ಯ ಸದಾಕಾಲಕ್ಕೂ ಪ್ರಸ್ತುತವಾಗಿರುತ್ತದೆ ಎಂದರು.

ಕುವೆಂಪು ಅವರ ವಿಚಾರಧಾರೆಗಳು ಇಂದಿನ ಯುವಪೀಳಿಗೆಗೆ ಮಾದರಿಯಾಗಿವೆ ಎಂದು ಅವರು ಹೇಳಿದರು.

ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌ ಮಾತನಾಡಿ, ಹಲವಾರು ಪ್ರಥಮಗಳಿಗೆ ಕುವೆಂಪು ಅವರು ಕಾರಣರಾಗಿದ್ದಾರೆ. ಅವರು ಶ್ರೀರಾಮಯಣದರ್ಶನಂ ಮಹಾಕಾವ್ಯದ ಜೊತೆಗೆ ಕಾನೂರು ಸುಬ್ಬಮ್ಮ ಹೆಗ್ಗಡತಿ, ಮಲೆಗಳಲ್ಲಿ ಮದುಮಗಳು ಬೃಹತ್‌ ಕಾದಂಬರಿಗಳನ್ನು ಬರೆದಿದ್ದಾರೆ. ಈಗಿನ ಕಾಲದಂತೆ ಅವತ್ತು ಅವರ ಸಾಹಿತ್ಯ ಆಂಗ್ಲ ಭಾಷೆಗೆ ಅನುವಾದವಾಗಿದ್ದರೆ

ನೊಬೆಲ್‌ ಪ್ರಶಸ್ತಿ ಖಂಡಿತವಾಗಿಯೂ ಸಿಗುತ್ತಿತ್ತು ಎಂದರು.

ಸಿಂಡಿಕೇಟ್‌ ಸದಸ್ಯ ಡಾ.ಸಿ. ಬಸವರಾಜು ಜಟ್ಟಿಹುಂಡಿ ಮಾತನಾಡಿ, ಕುವೆಂಪು ಅವರು ಇರದಿದ್ದರೆ ಕನ್ನಡ ಸಾಹಿತ್ಯ ಇಷ್ಟೊಂದು ಶ್ರೀಮಂತವಾಗುತ್ತಿರಲಿಲ್ಲ ಎಂದರು.

ಮತ್ತೊರ್ವ ಸಿಂಡಿಕೇಟ್‌ ಸದಸ್ಯೆ ಡಾ.ಜೆ. ಶಿಲ್ಪಾ ಮಾತನಾಡಿ, ಕುವೆಂಪು ಅವರು ಕಥೆ, ಕವನ, ಕಾದಂಬರಿ, ಮಹಾಕಾವ್ಯ, ನಾಟಕ- ಹೀಗೆ ಎಲ್ಲಾ ಪ್ರಕಾರಗಳಲ್ಲಿಯೂ ಸಾಹಿತ್ಯ ಕೃಷಿ ಮಾಡಿದ್ದಾರೆ. ಅವರಿಗೆ ಪದ್ಮವಿಭೂಷಣ, ಜ್ಞಾನಪೀಠ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪಂಪ ಪ್ರಶಸ್ತಿ ಸೇರಿದಂತೆ ಎಲ್ಲಾ ಮೊದಲಿಗರಾಗಿ ಸಂದಿವೆ ಎಂದರು.

ಸಿಂಡಿಕೇಟ್‌ ಸದಸ್ಯ ಕ್ಯಾತನಹಳ್ಳಿ ಸಿ. ನಾಗರಾಜು ಮಾತನಾಡಿ, ಪ್ರತಿ ಮೂರು ತಿಂಗಳಿಗೊಮ್ಮೆ ಮಾನಸ ಗಂಗೋತ್ರಿಯಲ್ಲಿ ಕುವಂಪು ಅವರ ಸಾಹಿತ್ಯ- ವಿಚಾರಧಾರೆ ಕುರಿತು ವಿಚಾರ ಸಂಕಿರಣ ಏರ್ಪಡಿಸಿ, ಯುವಪೀಳಿಗೆಗೆ ತಿಳಿಸಿಕೊಡಬೇಕು ಎಂದು ಕುಲಪತಿಯವರಿಗೆ ಮನವಿ ಮಾಡಿದರು.

ಪರೀಕ್ಷಾಂಗ ಕುಲಸಚಿವ ಪ್ರೊ.ಎನ್. ನಾಗರಾಜ, ಹಣಕಾಸು ಅಧಿಕಾರಿ ಕೆ.ಎಸ್‌. ರೇಖಾ,ಸಿಂಡಿಕೇಟ್‌ ಸದಸ್ಯರಾದ ಪ್ರೊ.ಶಬ್ಬೀರ್‌ ಮುಸ್ತಾಪ, ಕೆ. ಗೋಕುಲ್‌ ಗೋವರ್ಧನ್, ಮಹದೇಶ್‌, ಡಾ. ನಟರಾಜ್‌ ಶಿವಣ್ಣ, ವೇದಿಕೆ ಅಧ್ಯಕ್ಷ ಆರ್‌. ವಾಸುದೇವ, ಭಾಸ್ಕರ್‌, ವಿನೋದ್‌, ಮುಖಂಡರಾದ ಬೀರೇಗೌಡ, ಕೆ.ಜಿ. ಗೌಡ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಎಸ್‌.ಕೆ. ಮುಜಾವರ್‌, ಮೀನಾ ಮೊದಲಾದವರು ಇದ್ದರು. ಡಾ.ಬಿ.ಎಸ್‌. ದಿನಮಣಿ ನಿರೂಪಿಸಿದರು.

PREV

Recommended Stories

ಹೆತ್ತವರ ಕನಸು ನನಸಾಗಿಸುವುದೇ ಮಕ್ಕಳ ಗುರಿಯಾಗಿರಲಿ: ಸಚಿವೆ ಹೆಬ್ಬಾಳ್ಕರ್
ರಾಜ್ಯದ ಅರ್ಥ ವ್ಯವಸ್ಥೆ ಆರೋಗ್ಯವಂತವಾಗಿದೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್