ವೈಚಾರಿಕ ಪ್ರಜ್ಞೆ ಮೂಡಿಸಿದ ಕುವೆಂಪು: ಚಕ್ಕೆರೆ ಶಿವಶಂಕರ್

KannadaprabhaNewsNetwork | Updated : Dec 31 2023, 01:31 AM IST

ಸಾರಾಂಶ

ಚನ್ನಪಟ್ಟಣ: ನಮ್ಮಲ್ಲಿ ಸ್ವಾಭಿಮಾನ ಹಾಗೂ ವೈಚಾರಿಕತೆಯ ಪ್ರಜ್ಞೆ ಮೂಡಿಸಿದ ಮಹಾ ಕವಿ ಕುವೆಂಪು. ಅವರು ತಮ್ಮ ಸಾಹಿತ್ಯದ ಮೂಲಕ ನಮ್ಮಲ್ಲಿನ ಅಜ್ಞಾನ ಅಳಿಸಲು ಪ್ರಯತ್ನಿಸಿದರು. ಅವರ ವಿಚಾರಧಾರೆಗಳು ಎಂದೆಂದಿಗೂ ಪ್ರಸ್ತುತ ಎಂದು ಜಾನಪದ ತಜ್ಞ ಡಾ.ಚಕ್ಕೆರೆ ಶಿವಶಂಕರ್ ಅಭಿಪ್ರಾಯಪಟ್ಟರು.

ಚನ್ನಪಟ್ಟಣ: ನಮ್ಮಲ್ಲಿ ಸ್ವಾಭಿಮಾನ ಹಾಗೂ ವೈಚಾರಿಕತೆಯ ಪ್ರಜ್ಞೆ ಮೂಡಿಸಿದ ಮಹಾ ಕವಿ ಕುವೆಂಪು. ಅವರು ತಮ್ಮ ಸಾಹಿತ್ಯದ ಮೂಲಕ ನಮ್ಮಲ್ಲಿನ ಅಜ್ಞಾನ ಅಳಿಸಲು ಪ್ರಯತ್ನಿಸಿದರು. ಅವರ ವಿಚಾರಧಾರೆಗಳು ಎಂದೆಂದಿಗೂ ಪ್ರಸ್ತುತ ಎಂದು ಜಾನಪದ ತಜ್ಞ ಡಾ.ಚಕ್ಕೆರೆ ಶಿವಶಂಕರ್ ಅಭಿಪ್ರಾಯಪಟ್ಟರು.

ಜಿಲ್ಲಾ ಹಾಗೂ ತಾಲೂಕು ಕಸಾಪ ಮತ್ತು ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ಸಹಯೋಗದಲ್ಲಿ ರಾಷ್ಟ್ರಕವಿ ಕುವೆಂಪು ಜನ್ಮದಿನದ ಪ್ರಯುಕ್ತ ಗಾಂಧಿಭವನದ ಬಳಿಯ ಕುವೆಂಪು ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ಕುವೆಂಪು ಅವರು ಎಲ್ಲ ಧರ್ಮಗಳಿಗಿಂತ ಮನುಷ್ಯ ಧರ್ಮವೇ ಮೇಲು ಎನ್ನುವ ಮೂಲಕ ವಿಶ್ವಮಾನವ ಪರಿಕಲ್ಪನೆಯ ಸಂದೇಶವನ್ನು ತಮ್ಮ ಸಾಹಿತ್ಯ ಮತ್ತು ಬದುಕಿನ ಮೂಲಕ ತೋರಿಸಿಕೊಟ್ಟರು. ಕುವೆಂಪು ಅವರು ದಾರ್ಶನಿಕ, ಸಮಾಜ ಸುಧಾರಕರಾಗಿದ್ದರು. ನಾವು ಕೇವಲ ಆಚರಣೆಯ ದೃಷ್ಟಿಯಿಂದ, ಹಾರ, ತುರಾಯಿಗಳಿಂದ ಅವರನ್ನು ಗೌರವಿಸಬೇಕಾದ ಅಗತ್ಯತೆಯಿಲ್ಲ. ಅವರು ಬೋಧಿಸಿದ ವೈಚಾರಿಕತೆ ಅಳವಡಿಸಿಕೊಳ್ಳುವುದರ ಮೂಲಕ ನಮ್ಮ ಬದುಕನ್ನು ಹಸನಾಗಿಸಿಕೊಳ್ಳಬೇಕು ಎಂದರು.

ಕಸಾಪ ಜಿಲ್ಲಾಧ್ಯಕ್ಷ ಬಿ.ಟಿ.ನಾಗೇಶ್ ಮಾತನಾಡಿ, ಕುವೆಂಪು ಜೀವನವನ್ನು ಓದುವುದರ ಜೊತೆಗೆ ಅವರ ಆದರ್ಶಗಳನ್ನು ಅಳವಡಿಸಿಕೊಂಡಾಗ ಮಾತ್ರ ನಮ್ಮಗಳ ಜೀವನ ಸಾರ್ಥಕವಾಗುತ್ತದೆ. ಯುವ ಸಮುದಾಯಕ್ಕೆ ಕುವೆಂಪು ವಿಚಾರಗಳನ್ನು ತಿಳಿಸಿಕೊಡುವ ನಿಟ್ಟಿನಲ್ಲಿ ನಾವೆಲ್ಲ ಶ್ರಮಿಸಬೇಕಾಗಿದೆ ಎಂದರು.

ಹಿರಿಯ ಪತ್ರಕರ್ತ ಸು.ತ.ರಾಮೇಗೌಡ ಮಾತನಾಡಿ, ಕುವೆಂಪು ವಿಚಾರಧಾರೆಗಳು ಸೂರ್ಯ ಚಂದ್ರ ಇರುವವರೆಗೂ ಪ್ರಸ್ತುತವಾಗಿರುತ್ತವೆ. ಚನ್ನಪಟ್ಟಣದ ನೆಲದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದ ಕುವೆಂಪು ಮೌಢ್ಯಾಚಾರಗಳನ್ನು ಧಿಕ್ಕರಿಸಿದ್ದರು. ಅವರ ಆದರ್ಶಗಳನ್ನು ಪಾಲಿಸಬೇಕಿದೆ ಎಂದರು.

ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್‌ನ ತಾಲೂಕು ಅಧ್ಯಕ್ಷ ಧರಣೀಶ್‌ಕುಮಾರ್, ವಕೀಲರ ಸಂಘದ ಅಧ್ಯಕ್ಷ ಟಿ.ವಿ.ಗಿರೀಶ್ ಬಿಜೆಪಿ ಮುಖಂಡ ಎಂ.ಎನ್.ಆನಂದಸ್ವಾಮಿ, ಜೆಡಿಎಸ್ ಮುಖಂಡ ಗೋವಿಂದಹಳ್ಳಿ ನಾಗರಾಜು, ಅಪ್ಪಗೆರೆ ವೆಂಕಟಯ್ಯ, ಡಾ.ಶಿವಕುಮಾರ್, ಒ.ಸಾ.ವಿ.ನಿಲಯದ ಖಜಾಂಚಿ ಎಸ್.ಟಿ.ನಾರಾಯಣಗೌಡ, ಕಸಾಪ ಜಿಲ್ಲಾ ಕಾರ್ಯದರ್ಶಿ ಸಿ.ರಾಜಶೇಖರ್, ತಾಲೂಕು ಕಾರ್ಯದರ್ಶಿ ರಾಮಕೃಷ್ಣಯ್ಯ ಬ್ರಹ್ಮಣೀಪುರ, ಖಜಾಂಚಿ ಟಿ.ಎಸ್.ಶ್ರೀಕಾಂತ್, ಶಿಕ್ಷಕರಾದ ಬಿ.ಎಸ್.ರಾಮಣ್ಣ, ಎಲೆಕೇರಿ ಡಿ.ರಾಜಶೇಖರ್, ರಂಗ ಕಲಾವಿದ ಡಿ.ಪುಟ್ಟಸ್ವಾಮಿ, ಕವಿ ಮತ್ತೀಕೆರೆ ಬಿ.ಚಲುವರಾಜು, ವಿಜಯ್ ರಾಂಪುರ ಇತರರಿದ್ದರು.

ಪೊಟೋ೨೯ಸಿಪಿಟ೭: ಕುವೆಂಪು ಅವರ ಜನ್ಮದಿನದ ಪ್ರಯುಕ್ತ ಕುವೆಂಪು ಪ್ರತಿಮೆಗೆ ಗಣ್ಯರು ಮಾಲಾರ್ಪಣೆ ಮಾಡಿದರು.

Share this article