ಶೇಷಗಿರಿಯಲ್ಲಿ ಕುವೆಂಪು ಅವರ ಬೆರಳ್ಗೆ ಕೊರಳ್‌ ನಾಟಕ ಪ್ರದರ್ಶನ

KannadaprabhaNewsNetwork |  
Published : Jun 04, 2026, 02:15 AM IST
ಬೆರಳ್ಗೆ ಕೊರಳ ನಾಟಕದ ದೃಶ್ಯಗಳು,., | Kannada Prabha

ಸಾರಾಂಶ

ಯುವ ರಂಗ ನಿರ್ದೇಶಕ ನವೀನ ಸಾಣೆಹಳ್ಳಿ ಅವರ ನಿರ್ದೇಶನದಲ್ಲಿ ಹಾನಗಲ್ಲ ತಾಲೂಕಿನ ಶೇಷಗಿರಿಯ ಸಿ.ಎಂ. ಉದಾಸಿ ಕಲಾಕ್ಷೇತ್ರದಲ್ಲಿ ಶೇಷಗಿರಿಯ ಗಜಾನನ ಯುವಕ ಮಂಡಳದಿಂದ ಕುವೆಂಪು ರಚಿತ ಬೆರಳ್ಗೆ ಕೊರಳ್ ನಾಟಕ ಪ್ರದರ್ಶನಗೊಂಡಿತು.

ಮಾರುತಿ ಶಿಡ್ಲಾಪೂರ

ಹಾನಗಲ್ಲ: ಅರಸು ಮಕ್ಕಳ ಕೀರ್ತಿ ಶನಿಗೆ ಪ್ರಬುದ್ಧ ಪರಾಕ್ರಮಿ ಏಕಲವ್ಯನ ಬೆರಳು ಬಲಿಯಾದದ್ದು ಒಂದಾದರೆ, ಗುರು ದ್ರೋಣಾಚಾರ್ಯರ ತಳಮಳ, ಗೂಢ ಶೋಕ, ಮಾತೃ ಶಾಪ ಸಹೃದಯರ ಹೃದಯಕ್ಕೆ ನಾಟಿಸಿದ ಕುವೆಂಪು ಅವರ ಬೆರಳ್‌ಗೆ ಕೊರಳ್ ಹಳಗನ್ನಡ ನಾಟಕ ಭಾಷೆಯ ಬಿಗುಮಾನವಿಲ್ಲದೆ ಶೇಷಗಿರಿಯಲ್ಲಿ ಪ್ರದರ್ಶನಗೊಂಡು ಮನಸಿನಲ್ಲಿ ಅಚ್ಚೊತ್ತಿತು.

ಯುವ ರಂಗ ನಿರ್ದೇಶಕ ನವೀನ ಸಾಣೆಹಳ್ಳಿ ಅವರ ನಿರ್ದೇಶನದಲ್ಲಿ ಶೇಷಗಿರಿಯ ಸಿ.ಎಂ. ಉದಾಸಿ ಕಲಾಕ್ಷೇತ್ರದಲ್ಲಿ ಸ್ಥಳೀಯ ಗಜಾನನ ಯುವಕ ಮಂಡಳದ ನುರಿತ ಕಲಾವಿದರಿಂದ ಹಳಗನ್ನಡ ಸ್ಪಷ್ಟೋಚ್ಚಾರ ಸಹೃದಯರನ್ನು ಮಂತ್ರಮುಗ್ಧಗೊಳಿಸಿತು.

ಏಕಲವ್ಯ ಅಳುಕಿಲ್ಲದೆ ತನ್ನ ಹೆಬ್ಬೆರಳನ್ನೇ ಗುರುವಿಗೆ ದಾನ ಮಾಡುವ ಸಂದರ್ಭದಲ್ಲಿ, ಶೂದ್ರನಿಗೆ ಬಿಲ್ವಿದ್ದೆ ಕಲಿಸಕೂಡದು ಎಂಬ ಅದಾವುದೋ ನಿಯಮ, ಗುರುವಿನ ನೆನೆಹಿನಲ್ಲಿಯೇ ಬಿಲ್ವಿದ್ದೆ ಪಾರಂಗತನಾದ ಏಕಲವ್ಯ ಏನನ್ನು ಪ್ರಶ್ನಿಸದೇ ಬೆರಳು ದಾನ ಮಾಡಿದ ಪರಿ ಹತ್ತು ಹಲವು ಪ್ರಶ್ನೆಗಳನ್ನು ಸಹೃದಯರಲ್ಲಿ ಹುಟ್ಟು ಹಾಕಿತು.

ಒಂದೆಡೆ ಅರ್ಜುನನ ಮತ್ಸರ, ಇನ್ನೊಂದೆಡೆ ಏಕಲವ್ಯನ ಗುರುಭಕ್ತಿ, ಇವೆರಡರ ನಡುವೆ ಗುರುವಿನ ತಳಮಳ, ಏಕಲವ್ಯನ ವಿನಯ, ನಿಷ್ಠೆ, ಗುರುಭಕ್ತಿ ಕಂಡರೆ, ಇನ್ನೊಂದೆಡೆ ಅರ್ಜುನನ ಅಹಂಕಾರದ ಅಭಿವ್ಯಕ್ತಿ ಸಹೃದಯರ ಕಣ್ಣಿಗೆ ಕಟ್ಟಿ ಹೃದಯಕ್ಕೆ ನಾಟಿತು.

ಒಂದೆಡೆ ಗುರುವಿನ ಧರ್ಮ ಸಂಕಟ, ಮತ್ತೊಂದೆಡೆ ಏಕಲವ್ಯನ ತಾಯಿಯಿಂದ ಮಾತೃ ಶಾಪ, ಬೆರಳು ಕೊಟ್ಟರೂ ಮನ ಅಳುಕುತ್ತಿಲ್ಲ, ಮೈ ಅಳುಕುತ್ತಿದೆ ಎಂಬ ಕರ್ಣನ ಉವಾಚ, ಅರಸು ಮಕ್ಕಳ ಆಳಾಗಿ ದೈವ ನಂಬಿ ಕೆಲಸ ಮಾಡುವ ಅನಿವಾರ್ಯತೆ, ಹಮ್ಮು ಬಿಮ್ಮಿನ ಪಾರ್ಥನ ಕೀರ್ತಿ ಶನಿಗೆ ಕಾಡ ಬೇಡರ ಹುಡುಗನ ಶೌರ್ಯವನ್ನೇ ಹೊಸಗಿ ಹಾಕುವ ಹುನ್ನಾರ, ಅರ್ಜುನ ಬೆರಳಿಂದ ತೃಪ್ತನಾಗುವನೆ ಎಂಬ ಏಕಲವ್ಯನ ಪ್ರಶ್ನೆ.

ಗುರುವಿಗೆ ತಾರತಮ್ಯ ಸಲ್ಲದು, ಇದರ ನಡುವೆಯೂ ಏಕಲವ್ಯ ಎಡಗೈಯಿಂದ ಹೋರಾಟ ಮಾಡುವ ಛಲ, ಇದು ಇಲ್ಲಿ ಹೊಸ ಆಯಾಮ, ಏಕಲವ್ಯ ಇಲ್ಲಿ ಸೋಲುವುದಿಲ್ಲ. ನಿನ್ನ ಬೆರಳ್‌ಗೆ ನನ್ನ ಕೊರಳ ಕಾರಣ ಎಂಬ ಗುರುವಿನ ಉವಾಚ. ಹೀಗೆ ಇಡೀ ನಾಟಕ ಅಧ್ಭುತ ಸಂದೇಶ ರವಾನಿಸಿತು.

ಇಡೀ ನಾಟಕ ಹಳಗನ್ನಡದಲ್ಲಿ ಪ್ರದರ್ಶನಗೊಂಡರೂ ಭಾಷೆಯ ಯಾವುದೇ ಬಿಗಿ ಇಲ್ಲದೆ ಮಕ್ಕಳಾದಿಯಾಗಿ ಹಳ್ಳಿ ಪಟ್ಟಣದ ಸಹೃದಯರಿಗೆ ಸುಲಭ ಗ್ರಹಣವಾಯಿತು.

ಅಕ್ಷತಾ ಮಡದ ಅವರ ಏಕಲವ್ಯನ ತಾಯಿಯ ಪಾತ್ರ, ದ್ರೋಣಾಚಾರ್ಯರ ಪಾತ್ರದಲ್ಲಿ ನಾಗರಾಜ ಕಾಸಂಬಿ, ಸಿದ್ದು ಕೊಂಡೋಜಿ (ಏಕಲವ್ಯ), ಜಮೀರ ಪಠಾಣ (ಅರ್ಜುನ), ಭರತ್ ಹಾವಣಗಿ (ಅಶ್ವತ್ಥಾಮ), ಆತ್ಮಗಳ ಪಾತ್ರದಲ್ಲಿ ಸಣ್ಣಪ್ಪ ಗೊರವರ, ಸಿದ್ದಪ್ಪ ರೊಟ್ಟಿ, ಜಲಗಾರನಾಗಿ ಪ್ರಶಾಂತ ರಟ್ಟಿಹಳ್ಳಿ, ಭರತ ರೊಟ್ಟಿ, ಉದಯ ಬಡೆಮ್ಮಿ ಕಾಡು ಜನಗಳ ಪಾತ್ರದಲ್ಲಿ ಅದ್ಭುತ ಪ್ರದರ್ಶನ ನೀಡಿದರು.

ಬಿಂದು ರಕ್ಷದಿ, ರವಿ ಅಥರ್ವ ಅವರ ಸಂಗೀತ, ಮಹಾಂತೇಶ ಅದಿಮ್ ಅವರ ತಬಲಾ ಸಾಥ್, ಹರೀಶ ಗುರಪ್ಪನವರ ಅವರ ಬೆಳಕು ನಿರ್ವಹಣೆ, ಜಮೀರ ಪಠಾಣ ಅವರ ಪ್ರಸಾಧನದಲ್ಲಿ ನಾಟಕಕ್ಕೆ ಮೆರಗು ನೀಡಿದ್ದವು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಳೆ ನಿರೀಕ್ಷೆಯಲ್ಲಿ ರೈತ: ಬೀಜ, ಗೊಬ್ಬರ ವಿತರಣೆಗೆ ಸಿದ್ಧತೆ
ಜೆ.ಎನ್.ಗಣೇಶ್‌ಗೆ ಸಚಿವ ಸ್ಥಾನ ನೀಡಲು ಒತ್ತಾಯ