ಕೂಡ್ಲಿಗಿ: ಕುವೆಂಪು ತಮ್ಮ ಜೀವನ ಮೌಲ್ಯಗಳು, ಕೃತಿಗಳ ಮೂಲಕ ಇಡೀ ವಿಶ್ವಕ್ಕೆ ವಿಶ್ವಮಾನವ ಸಂದೇಶ ತಲುಪಿಸಿದ್ದಾರೆ. ಅವರ ಹಾದಿಯಲ್ಲಿ ಕನ್ನಡ ಭಾಷೆ, ಸಾಹಿತ್ಯ ಶ್ರೀಮಂತಗೊಂಡಿದೆ ಎಂದು ಸಾಹಿತಿ ಡಾ.ವೃಷಭೇಂದ್ರಾಚಾರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಕುವೆಂಪು ಅವರ ಜೀವನವೇ ಒಂದು ಅಮೂಲ್ಯ ಗ್ರಂಥವಾಗಿದ್ದು ಅವರ ವಿಶ್ವಭ್ರಾತೃತ್ವ, ಸಮಾನತೆ, ಮಾನವೀಯ ಕಳಕಳಿ, ಪರಿಸರ ಅಳಿವು, ಉಳಿವಿನ ಬಗ್ಗೆ ಅವರ ನಡೆ ನುಡಿಗಳು ಇಡೀ ಜಗತ್ತಿಗೆ ಮಾದರಿಯಾಗಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಹೊಸಹಳ್ಳಿ ಹೋಬಳಿ ಘಟಕದ ಅಧ್ಯಕ್ಷ ಎಸ್.ತಿಪ್ಪೇಸ್ವಾಮಿ ಮಾತನಾಡಿ, ಕುವೆಂಪು ಕನ್ನಡನಾಡಿನ ಅಸ್ಮಿತೆಯಾಗಿದೆ. ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದ ಆಧುನಿಕ ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಮೊದಲ ಪಂಕ್ತಿಯಲ್ಲಿ ನಿಲ್ಲುತ್ತಾರೆ. ಅವರ ಪರಿಸರ ಕಾಳಜಿ, ಜೀವನ ಮೌಲ್ಯಗಳು, ಪರಸ್ಪರ ಬಾಂಧವ್ಯ, ಸರಳ ಜೀವನದ ಮೌಲ್ಯಯುತ ಬದುಕು ಬರಹಗಳು ಇಂದಿಗೂ ವಿಶ್ವದ ಉಳಿವಿಗೆ ಕಾರಣವಾಗಿವೆ ಎಂದರು.ನಂತರ ಹೊಸಹಳ್ಳಿ ಹೋಬಳಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ನಡೆದು ಬಂದ ದಾರಿ ಮತ್ತು ಸಾಹಿತ್ಯ ಕಾರ್ಯಕ್ರಮಗಳ ಬಗ್ಗೆ ಸಮಗ್ರವಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ನಡೆದ ಕವಿಗೋಷ್ಠಿಯಲ್ಲಿ ನಾಗರಾಜ ಹಿರೇಕುಂಬಳಗುಂಟೆ, ಕೆ.ಎಂ. ಮಧುಸೂಧನ, ಟಿ.ಎಂ. ಸಿದ್ದಲಿಂಗಮೂರ್ತಿ, ಸಿ.ಮಂಜುನಾಥ, ಟಿ.ಎಚ್.ಎಂ. ಶೇಖರಯ್ಯ, ಜ್ಯೋತಿನಾಯಕ ಸೇರಿದಂತೆ ಹಲವು ಯುವಕವಿಗಳು ಕವಿತೆವಾಚನ ಮಾಡಿದರು.
ಕೂಡ್ಲಿಗಿ ತಾಲೂಕು ಹೊಸಹಳ್ಳಿಯಲ್ಲಿ ಕಸಾಪ ಹೊಸಹಳ್ಳಿ ಹೋಬಳಿ ಘಟಕ ಆಯೋಜಿಸಿದ್ದ ವಿಶ್ವಮಾನವ ದಿನಾಚರಣೆ ಕಾರ್ಯಕ್ರಮದ್ಲಲಿ ಕಸಾಪ ಅಧ್ಯಕ್ಷ ಎಸ್.ತಿಪ್ಪೇಸ್ವಾಮಿ ಮಾತನಾಡಿದರು.