ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಜಿಲ್ಲಾ ಪಂಚಾಯ್ತಿ ಕಾವೇರಿ ಸಭಾಂಗಣದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಮಂಡ್ಯ ಕೆ.ವಿ.ಶಂಕರಗೌಡ ಅಧ್ಯಯನ ಪೀಠ, ಕರ್ನಾಟಕ ಸಂಘ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇವರ ಸಂಯುಕ್ತಾಶ್ರಯದಲ್ಲಿ ನಡೆದ ಕೆ.ವಿ.ಶಂಕರಗೌಡ 109 ಒಂದು ನೆನಪು ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಮತ್ತೆ ಮತ್ತೆ ಶಂಕರಗೌಡ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.
ಕೆ.ವಿ.ಶಂಕರಗೌಡರು ಜಿಲ್ಲೆಗೆ ಮತ್ತು ನಾಡಿಗೆ ಮಾಡಿರುವ ಕೆಲಸ ಅಗಾಧವಾಗಿದೆ. ಗಾಂಧಿಯವರ ಒಡನಾಡಿಯಾಗಿ ಅವರ ಎಲ್ಲಾ ಆಲೋಚನೆಗಳನ್ನು ಅತ್ಯಂತ ಬದ್ಧತೆಯಿಂದ ಅನುಸರಿಸುತ್ತಿದ್ದರು. ಪ್ಯಾರೇಲಾಲ್ ಬರೆದಿರುವ ಗಾಂಧಿಯವರ 1700 ಪುಟಗಳ ಕೃತಿಯನ್ನು ಎರಡು ಸಂಪುಟಗಳಲ್ಲಿ ಗಾಂಧೀಜಿಯ ಅಂತಿಮ ಹಂತ ಎಂಬ ಶೀರ್ಷಿಕೆಯಲ್ಲಿ ಕನ್ನಡಕ್ಕೆ ಅನುವಾದ ಮಾಡಿಕೊಟ್ಟ ಕೀರ್ತಿ ಕೆವಿಎಸ್‌ಗೆ ಸಲ್ಲುತ್ತದೆ. ಈ ಕೃತಿ ಸಾಹಿತ್ಯ ಕ್ಷೇತ್ರಕ್ಕೆ ಅಮೂಲ್ಯ ಕಾಣಿಕೆಯಾಗಿದೆ ಎಂದರು.ಮುಂದೆ ತನ್ನ ಪ್ರತಿಸ್ಪರ್ಧಿಯಾಗಿ ಎಲ್ಲಿ ನಿಲ್ಲುತ್ತಾನೋ ಎಂಬ ಆತಂಕದಿಂದ ಕೆಲ ರಾಜಕಾರಣಿಗಳು ತನ್ನೊಟ್ಟಿಗೆ, ತನ್ನ ಸುತ್ತ ಇರುವವರನ್ನು ಯಾವ ಕಾರಣಕ್ಕೂ ಬೆಳೆಯಲು ಬಿಡುವುದಿಲ್ಲ. ಆದರೆ, ಶಂಕರಗೌಡರು ಆ ರೀತಿ ಯೋಚನೆಯನ್ನು ಯಾವತ್ತೂ ಮಾಡಲಿಲ್ಲ ಎಂದರು.
ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್, ವ್ಯವಸಾಯ ಸೇವಾ ಸಹಕಾರ ಸಂಘ ಹಾಗೂ ಅದರ ಶಾಖೆಗಳನ್ನು ಜಿಲ್ಲಾದ್ಯಂತ ಸ್ಥಾಪಿಸಿ ಆರ್ಥಿಕ ಅಡಿಪಾಯ ಹಾಕಿದವರು ಕೆವಿಎಸ್. ಪೌರಾಣಿಕ ನಾಟಕಗಳ ಪ್ರದರ್ಶನದ ಮೂಲಕ ಹಣ ಸಂಗ್ರಹಿಸಿ ದೇವಾಲಯ ಮತ್ತು ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಒಂದು ಹೊಸ ಪರಂಪರೆಗೆ ನಾಂದಿ ಹಾಡಿದರು. ಅವರ ಹೆಸರಿನಲ್ಲಿ ಕೆ.ವಿ.ಶಂಕರಗೌಡ ಅಧ್ಯಯನ ಪೀಠ ಉತ್ತಮ ಕೆಲಸ ಮಾಡುತ್ತಿದೆ ಎಂದು ಪ್ರಶಂಸಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಎಂ.ಶ್ರೀನಿವಾಸ್ ಮಾತನಾಡಿ, ಶಾಲಾ ಕಾಲೇಜು ದಿನಗಳಲ್ಲಿ ಎಪಿಎಂಸಿ ಆವರಣದಲ್ಲಿ ಕೆ.ವಿ.ಶಂಕರಗೌಡರನ್ನು ನೋಡುತ್ತಾ ಬೆಳೆದ ನಾನು ರಾಜಕೀಯ ರಂಗಕ್ಕೆ ಬರಲು ಮತ್ತು ಶಿಕ್ಷಣ ಸಂಸ್ಥೆ ಕಟ್ಟಲು ಕೆ.ವಿ.ಶಂಕರಗೌಡ ಸ್ಫೂರ್ತಿಯಾಗಿದ್ದಾರೆ ಎಂದರು.
ಕೆ.ವಿ.ಶಂಕರಗೌಡರ ಒಡನಾಟ ಇದ್ದವರು ಮತ್ತು ಅವರ ಬಗ್ಗೆ ತಿಳಿದುಕೊಂಡ 55 ಲೇಖಕರ ಲೇಖನಗಳು ಈ ಪುಸ್ತಕದ 200 ಪುಟಗಳಲ್ಲಿದೆ. ಎಲ್ಲೂ ಕೂಡ ವಿಷಯ ಪುನರಾವರ್ತನೆ ಆಗಿಲ್ಲ. ಲೇಖಕರ ಹೊಸ ಹೊಸ ಅನುಭವ ದಾಖಲಾಗಿದೆ. ಪುಸ್ತಕವನ್ನು ಕೊಂಡು ಓದಿ ಇಂದಿನ ಮತ್ತು ಮುಂದಿನ ತಲೆಮಾರಿಗೆ ತಿಳಿಸಿ ಅವರ ತತ್ವ ಆದರ್ಶವನ್ನು ಸಾಧ್ಯವಾದಷ್ಟು ಉಳಿಸಿ ಬೆಳೆಸುವ ಪ್ರಯತ್ನ ಮಾಡಬೇಕೆಂದು ಮನವಿ ಮಾಡಿದರು.