ಕೆವಿಜಿ ಬ್ಯಾಂಕ್‌ ಇನ್ಮುಂದೆ ಕರ್ನಾಟಕ ಗ್ರಾಮೀಣ ಬ್ಯಾಂಕ್‌!

KannadaprabhaNewsNetwork |  
Published : May 01, 2025, 01:50 AM IST

ಸಾರಾಂಶ

ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕು 9 ಜಿಲ್ಲೆಗಳ ಕಾರ್ಯಕ್ಷೇತ್ರದಲ್ಲಿ 629 ಶಾಖೆಗಳೊಂದಿಗೆ ₹38714 ಕೋಟಿ ವಹಿವಾಟು ನಡೆಸುತ್ತಲಿದ್ದರೆ, ಬಳ್ಳಾರಿಯಲ್ಲಿ ಪ್ರಧಾನ ಕಚೇರಿ ಹೊಂದಿದ್ದ ಕರ್ನಾಟಕ ಗ್ರಾಮೀಣ ಬ್ಯಾಂಕ್ 22 ಜಿಲ್ಲೆಗಳಲ್ಲಿ 1122 ಶಾಖೆಗಳೊಂದಿಗೆ ₹66137 ಕೋಟಿ ವಹಿವಾಟು ನಡೆಸುತ್ತಲಿತ್ತು.

ಧಾರವಾಡ: ಕೆವಿಜಿ ಬ್ಯಾಂಕ್‌, ಗ್ರಾಮೀಣ ಜನರ ಒಡನಾಡಿ ಎಂದೇ ಹೆಸರು ಮಾಡಿದ್ದ ಇಲ್ಲಿಯ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ ಇನ್ನಿಲ್ಲ. ಒಂದು ರಾಜ್ಯ ಒಂದು ಗ್ರಾಮೀಣ ಬ್ಯಾಂಕ್ ಎಂಬ ನೀತಿಯನ್ವಯ ಕೇಂದ್ರ ಸರ್ಕಾರ ಹೊರಡಿಸಿದ ಅಧಿಸೂಚನೆಯ ಮೇರೆಗೆ ಧಾರವಾಡ ಪ್ರಧಾನ ಕಚೇರಿ ಹೊಂದಿದ್ದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ ಹಾಗೂ ಬಳ್ಳಾರಿಯಲ್ಲಿ ಪ್ರಧಾನ ಕಚೇರಿ ಹೊಂದಿರುವ ಕರ್ನಾಟಕ ಗ್ರಾಮೀಣ ಬ್ಯಾಂಕ್‌ ಮೇ 1ರಿಂದ ಪರಸ್ಪರ ಒಗ್ಗೂಡಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ಎಂಬ ಹೊಸ ನಾಮಧೇಯ ಹೊಂದಲಿವೆ.

ನೂತನ ಬ್ಯಾಂಕಿನ ಪ್ರಧಾನ ಕಚೇರಿ ಬಳ್ಳಾರಿಯಲ್ಲಿ ಇರಲಿದೆ. ಉದಯಗೊಂಡ ಈ ಬ್ಯಾಂಕ್ ಸರ್ಕಾರಿ ಸ್ವಾಮಿತ್ವದಲ್ಲಿಯೇ ಮುಂದುವರಿಯಲಿದ್ದು, ಕೇಂದ್ರ ಸರ್ಕಾರ (ಶೇ. 50) ರಾಜ್ಯ ಸರ್ಕಾರ (ಶೇ. 15) ಮತ್ತು ಕೆನರಾ ಬ್ಯಾಂಕ್ (ಶೇ. 35) ತಮ್ಮ ಪಾಲುದಾರಿಕೆಯನ್ನು ಮುಂದುವರೆಸಲಿವೆ. ಉದಯಗೊಳ್ಳುವ ಕರ್ನಾಟಕ ಗ್ರಾಮೀಣ ಬ್ಯಾಂಕಿನ ಸೇವೆ ಇನ್ನು ಮುಂದೆ ಸಮಗ್ರ ಕರ್ನಾಟಕಕ್ಕೆ ದೊರೆಯಲಿದ್ದು ಈ ಬ್ಯಾಂಕು 1751 ಶಾಖೆಗಳೊಂದಿಗೆ ₹104851 ಕೋಟಿ ವಹಿವಾಟು ನಡೆಸುವ ದೇಶದ ಎರಡನೇ ಬೃಹತ್ ಗ್ರಾಮೀಣ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

ನೂತನ ಕರ್ನಾಟಕ ಗ್ರಾಮೀಣ ಬ್ಯಾಂಕಿನ ಸಾರಥ್ಯವನ್ನು ಕೃಷಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ, ಬ್ಯಾಂಕಿಂಗ್ ರಂಗದಲ್ಲಿ 31 ವರ್ಷಗಳ ಅನುಭವ ಹೊಂದಿರುವ ಈ ಹಿಂದಿನ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ಅಧ್ಯಕ್ಷ ಶ್ರೀಕಾಂತ ಎಂ ಭಂಡಿವಾಡ ವಹಿಸಲಿದ್ದಾರೆ. ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕು 9 ಜಿಲ್ಲೆಗಳ ಕಾರ್ಯಕ್ಷೇತ್ರದಲ್ಲಿ 629 ಶಾಖೆಗಳೊಂದಿಗೆ ₹38714 ಕೋಟಿ ವಹಿವಾಟು ನಡೆಸುತ್ತಲಿದ್ದರೆ, ಬಳ್ಳಾರಿಯಲ್ಲಿ ಪ್ರಧಾನ ಕಚೇರಿ ಹೊಂದಿದ್ದ ಕರ್ನಾಟಕ ಗ್ರಾಮೀಣ ಬ್ಯಾಂಕ್ 22 ಜಿಲ್ಲೆಗಳಲ್ಲಿ 1122 ಶಾಖೆಗಳೊಂದಿಗೆ ₹66137 ಕೋಟಿ ವಹಿವಾಟು ನಡೆಸುತ್ತಲಿತ್ತು.

ಜನಸಾಮಾನ್ಯರ ಅಭಿವೃದ್ಧಿ ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ 1975 ರಲ್ಲಿ ಗ್ರಾಮೀಣ ಬ್ಯಾಂಕುಗಳನ್ನು ಸ್ಥಾಪಿಸಿತು. ಆ ಸಮಯದಲ್ಲಿ ದೇಶಾದ್ಯಂತ 196 ಗ್ರಾಮೀಣ ಬ್ಯಾಂಕುಗಳು ಕಾರ್ಯನಿರ್ವಹಿಸುತ್ತಿದ್ದವು ಮತ್ತು ರಾಜ್ಯದಲ್ಲಿ 13 ಗ್ರಾಮೀಣ ಬ್ಯಾಂಕುಗಳಿದ್ದವು. ಗ್ರಾಮೀಣ ಬ್ಯಾಂಕುಗಳನ್ನು ಇನ್ನಷ್ಟು ಬಲಪಡಿಸುವ ದಿಶೆಯಲ್ಲಿ ಕೇಂದ್ರ ಸರ್ಕಾರ 2005ರಲ್ಲಿ ಮೊದಲ ಬಾರಿಗೆ ಗ್ರಾಮೀಣ ಬ್ಯಾಂಕುಗಳನ್ನು ಒಗ್ಗೂಡಿಸುವ ದಿಶೆಯಲ್ಲಿ ವಿಲೀನ ಪ್ರಕ್ರಿಯೆ ಪ್ರಾರಂಭಿಸಿತು. ಇದರ ಅನ್ವಯ ಮತ್ತು ತದನಂತರದ ವಿಲೀನ ಪ್ರಕ್ರಿಯೆಯ ಪರಿಣಾಮವಾಗಿ ರಾಜ್ಯದ ಎರಡು ಗ್ರಾಮೀಣ ಬ್ಯಾಂಕುಗಳನ್ನು ಒಳಗೊಂಡು ಪ್ರಸ್ತುತ ದೇಶದಲ್ಲಿ 43 ಗ್ರಾಮೀಣ ಬ್ಯಾಂಕುಗಳು ಕಾರ್ಯನಿರ್ವಹಿಸುತ್ತಿವೆ.

ಪ್ರಾದೇಶಿಕ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರವಹಿಸಿದ್ದ ಈ ಮೊದಲಿದ್ದ ಈ ಎರಡೂ ಗ್ರಾಮೀಣ ಬ್ಯಾಂಕುಗಳು ಜನಸಾಮಾನ್ಯರ ಅದರಲ್ಲೂ ರೈತರ ಬೆನ್ನೆಲುಬಾಗಿ, ಬಡ- ಕಡು ಬಡವರ ಜೀವನಾಡಿಯಾಗಿ, ಕುಶಲ ಕರ್ಮಿಗಳ ಆಶಾಕಿರಣವಾಗಿ ಕಾರ್ಯ ನಿರ್ವಹಿಸಿವೆ. ಇದೀಗ ವಿಲೀನಗೊಂಡು ಹೊರಹೊಮ್ಮಲಿರುವ ನೂತನ ಬ್ಯಾಂಕು ಕೂಡ ಅದೇ ಸಂಪ್ರದಾಯದಲ್ಲಿ ಇನ್ನೂ ಹೆಚ್ಚಿನ ಭದ್ರತೆ ಮತ್ತು ವಿಶ್ವಾಸದಿಂದ ಮುನ್ನಡೆಯಲಿದೆ ಎಂದು ನೂತನ ಕರ್ನಾಟಕ ಗ್ರಾಮೀಣ ಬ್ಯಾಂಕಿನ ಅಧ್ಯಕ್ಷ ಶ್ರೀಕಾಂತ ಎಂ ಭಂಡಿವಾಡ ಹೇಳಿದರು.

ಈ ಮಹತ್ತರ ಘಟ್ಟದಲ್ಲಿ ಗ್ರಾಹಕರು ಮತ್ತು ಸಾರ್ವಜನಿಕರ ಸಹಕಾರ ಕೋರಿರುವ ಅವರು ಸರ್ಕಾರಿ ಸ್ವಾಮಿತ್ವದ ಅತಿದೊಡ್ಡ ಗ್ರಾಮೀಣ ಬ್ಯಾಂಕು ಇದಾಗಿರುವುದರಿಂದ ಗ್ರಾಹಕ ವರ್ಗ ಇನ್ನಷ್ಟು ಉತ್ತಮ ಸೇವೆ ಪಡೆಯಲಿದೆ ಎಂದೂ ಅವರು ತಿಳಿಸಿರುವರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಯಣ್ಣನ ವೀರಭೂಮಿ ಶೀಘ್ರ ಲೋಕಾರ್ಪಣೆ
ಅಕ್ರಮ ಬಾಂಗ್ಲಾ ವಲಸಿಗರನ್ನು ಹೊರಗಟ್ಟಿ