ಇಂದಿರಾ ಗಾಜಿನ ಮನೆ, ಸರ್ವೋದಯ ವೃತ್ತ ಮತ್ತು ವಿವಿಧೆಡೆ ಬಸವೇಶ್ವರರ ಪುತ್ಥಳಿಗೆ ರಾಜಕೀಯ ಮುಖಂಡರು, ಅಧಿಕಾರಿಗಳು, ವಿವಿಧ ಸಮಾಜದ ಮುಖಂಡರು ಮಾಲಾರ್ಪಣೆ, ಪುಷ್ಪಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
ಹುಬ್ಬಳ್ಳಿ: ನಗರದಲ್ಲಿ ಬುಧವಾರ ವಿಶ್ವಗುರು ಶ್ರೀ ಬಸವೇಶ್ವರ ಜಯಂತಿಯನ್ನು ಸಡಗರ, ಸಂಭ್ರಮದಿಂದ ಆಚರಿಸಲಾಯಿತು. ಇಂದಿರಾ ಗಾಜಿನ ಮನೆ, ಸರ್ವೋದಯ ವೃತ್ತ ಮತ್ತು ವಿವಿಧೆಡೆ ಬಸವೇಶ್ವರರ ಪುತ್ಥಳಿಗೆ ರಾಜಕೀಯ ಮುಖಂಡರು, ಅಧಿಕಾರಿಗಳು, ವಿವಿಧ ಸಮಾಜದ ಮುಖಂಡರು ಮಾಲಾರ್ಪಣೆ, ಪುಷ್ಪಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ನಗರದ ವಿವಿಧೆಡೆ, ಎತ್ತುಗಳ ಮೆರವಣಿಗೆ, ಬೈಕ್ ರ್‍ಯಾಲಿ, ಅಲ್ಲಲ್ಲಿ ಪ್ರಸಾದ ಸೇವೆ ನಡೆಯಿತು.
ಈ ವೇಳೆ ಮಾತನಾಡಿದ ಮುಖಂಡರು, ಕಾಯಕ ತತ್ವ ಹಾಗೂ ಸಮಾನತೆಗೆ ಒತ್ತು ನೀಡಿದವರು ಬಸವಣ್ಣನವರು. ಜಾತಿ-ಮತ, ಪಂಥ ಧರ್ಮ ಎನ್ನದೇ ಸಮಾನತೆಯ ಸಂದೇಶ ಸಾರಿದವರು. ಅವರ ಆದರ್ಶ ಎಲ್ಲರಿಗೂ ಅನುಕರಣೀಯ. ಬಸವಣ್ಣನವರ ತತ್ವಗಳು, ವಚನಗಳು ಸಮಾಜಕ್ಕೆ ದಾರಿದೀಪ ಆಗಿದ್ದು ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ನಡೆಯಬೇಕು ಎಂದು ಬಸವೇಶ್ವರರ ಗುಣಗಾನ ಮಾಡಿದರು.
ಇಲ್ಲಿನ ಗಾಜಿನಮನೆಯಲ್ಲಿರುವ ಬಸವೇಶ್ವರರ ಮೂರ್ತಿಗೆ ವಿಧಾನಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಈ ವೇಳೆ, ಎಐಸಿಸಿ ಕಾರ್ಯದರ್ಶಿ ಮಯೂರ ಜಯಕುಮಾರ್, ಅಲ್ತಾಫ್ ಹಳ್ಳೂರ, ಸದಾನಂದ ಡಂಗನವರ ಸೇರಿದಂತೆ ಅನೇಕರಿದ್ದರು.
ಬಿಜೆಪಿ ಕಾರ್ಯಾಲಯ: ನಗರದ ಬಿಜೆಪಿ ಕಾರ್ಯಾಲಯದಲ್ಲಿ ಬುಧವಾರ ಶಾಸಕ ಮಹೇಶ ಟೆಂಗಿನಕಾಯಿ ಬಸವಣ್ಣನ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಇದೇವೇಳೆ ಛತ್ರಪತಿ ಶಿವಾಜಿ ಮಹಾರಾಜ ಹಾಗೂ ಶಂಕರಾಚಾರ್ಯರ ಜಯಂತಿ ಆಚರಿಸಲಾಯಿತು. ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ ಅಧ್ಯಕ್ಷತೆ ವಹಿಸಿದ್ದರು. ದತ್ತಮೂರ್ತಿ ಕುಲಕರ್ಣಿ, ರವಿ ನಾಯ್ಕ, ತೋಟಪ್ಪ ನಿಡಗುಂದಿ, ಪ್ರಶಾಂತ ಹಾವಣಗಿ, ಮಂಜುನಾಥ್ ಬಿಜವಾಡ, ಪ್ರವೀಣ ಕುಬಸದ ಮೊದಲಾದವರು ಉಪಸ್ಥಿತರಿದ್ದರು. ಇದೇ ವೇಳೆ, ಸರ್ವೋದಯ ಸರ್ಕಲ್ ಮತ್ತು ಇಂದಿರಾ ಗಾಜಿನ ಮನೆ ಆವರಣದಲ್ಲಿರುವ ಪ್ರತಿಮೆಗೆ ಶಾಸಕ ಮಹೇಶ ಟೆಂಗಿನಕಾಯಿ ಮಾಲಾರ್ಪಣೆ ಮಾಡಿದರು. ಈ ವೇಳೆ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
ಜೆಡಿಎಸ್: ಜನತಾದಳ (ಜಾತ್ಯತೀತ) ಪಕ್ಷದ ವತಿಯಿಂದ ಗ್ರಾಮಾಂತರ ಜಿಲ್ಲೆಯ ಅದ್ಯಕ್ಷ ಬಿ.ಬಿ. ಗಂಗಾಧರಮಠ ನೇತೃತ್ವದಲ್ಲಿ ಕೇಶ್ವಾಪುರದಲ್ಲಿರುವ ಶ್ರೀ ಬಸವೇಶ್ವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಲಾಯಿತು. ಪಕ್ಷದ ಮುಖಂಡರಾದ ಶ್ರೀಶೈಲ ಗಡದಿನ್ನಿ, ನವೀನಕುಮಾರ, ವಿನಾಯಕ ಗಾಡಿವಡ್ಡರ, ಶಂಕರ ಪವಾರ, ಶ್ರೀಕಾಂತ್ ತೆಲಗರ, ಪುನಿತ್ ಅಡಗಲ್, ಸಿದ್ದು ಮಹಾಂತಒಡೆಯರ, ಗೋಪಾಲ ನಿರಣಕಿ, ಹುಲಗಪ್ಪ ಬ್ಯಾಡಗಿ, ಈಶ್ವರ ತೆಗ್ಗಿ, ನಾಗಭೂಷಣ ಕಾಳೆ ಮುಂತಾದವರು ಉಪಸ್ಥಿತರಿದ್ದರು.
ಸಾರಿಗೆ ಸಂಸ್ಥೆ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿಯ ಕೇಂದ್ರ ಕಚೇರಿಯಲ್ಲಿ ಶ್ರೀ ಬಸವೇಶ್ವರ ಜಯಂತಿ ನಿಮಿತ್ತ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಸಾರಿಗೆ ಸಂಸ್ಥೆ ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಪಿ.ಆರ್. ಕಿರಣಗಿ, ಕಾರ್ಮಿಕ ಮತ್ತು ಕಲ್ಯಾಣಾಧಿಕಾರಿ ಪಿ.ವೈ. ನಾಯಕ ಮಾತನಾಡಿದರು. ಎಂ.ಬಿ. ಕಪಲಿ, ನವೀನಕುಮಾರ ತಿಪ್ಪಾ, ಬಿ.ಎ. ಪಾಟೀಲ್, ಆರ್.ಎಫ್. ಕವಳಿಕಾಯಿ ಹಾಗೂ ವಿವಿಧ ಸಂಘಗಳ ಕಾರ್ಮಿಕ ಮುಖಂಡರುಗಳು ಕೇಂದ್ರ ಕಚೇರಿ ಅಧಿಕಾರಿ ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಮೇಯರ್ ಮಾಲಾರ್ಪಣೆ: ವಿಶ್ವಗುರು ಶ್ರೀ ಬಸವೇಶ್ವರ ಜಯಂತಿ ಪಾಲಿಕೆಯಿಂದ ಇಂದಿರಾ ಗಾಜಿನ ಮನೆ ಆವರಣದಲ್ಲಿರುವ ಜಗಜ್ಯೋತಿ ಬಸವೇಶ್ವರ ಪ್ರತಿಮೆಗೆ ಮೇಯರ್ ರಾಮಪ್ಪ ಬಡಿಗೇರ ಮಾಲಾರ್ಪಣೆ ಮಾಡಿದರು. ಕೇಶ್ವಾಪುರ ಸರ್ಕಲ್‌ನಲ್ಲಿರುವ ಪ್ರತಿಮೆಗೆ ಪಾಲಿಕೆ ಆಯುಕ್ತ ರುದ್ರೇಶ ಘಾಳಿ ಮಾಲಾರ್ಪಣೆ ಮಾಡಿದರು.
ಬೈಕ್ ರ್‍ಯಾಲಿ: ಮಂಗಳವಾರ ಪೇಟಯ ಶ್ರೀ ರುದ್ರಾಕ್ಷಿ ಮಠದ ಬಸವ ಉತ್ಸವ ಸಮಿತಿಯಿಂದ ಬಸವೇಶ್ವರ ಜಯಂತಿ ಪ್ರಯುಕ್ತ ಬೆಳಗ್ಗೆ ಬಸವೇಶ್ವರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಬಳಿಕ ಬೈಕ್ ರ್‍ಯಾಲಿ ನಡೆಯಿತು. ಸಂಜೆ ಸಕಲ ವಾದ್ಯವೈಭವಗಳೊಂದಿಗೆ ವಿಶ್ವಗುರು ಬಸವೇಶ್ವರರ ಭಾವಚಿತ್ರ ಹಾಗೂ ಜೋಡೆತ್ತಿನ ಮೆರವಣಿಗೆ ಮಂಗಳವಾರ ಪೇಟೆಯಿಂದ ಆರಂಭವಾಗಿ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ರುದ್ರಾಕ್ಷಿಮಠ ತಲುಪಿತು. ನಂತರ ಪ್ರಸಾದ ಸೇವೆ ನಡೆಯಿತು.
ಇಂದಿರಾ ಗಾಜಿನ ಮನೆ ಆವರಣದಲ್ಲಿನ ಶ್ರೀ ಬಸವಣ್ಣನವರ ಪುತ್ತಳಿಗೆ ಬಿಜೆಪಿ ಮುಖಂಡರಾದ ಡಾ. ಕ್ರಾಂತಿಕಿರಣ್ ಮಾಲಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಪೂರ್ವ ಕ್ಷೇತ್ರದ ಮಾಜಿ ಮಂಡಲ ಅಧ್ಯಕ್ಷ ಪ್ರಭು ನವಲಗುಂದಮಠ, ಎಸ್ಸಿ ಮೋರ್ಚಾ ಅಧ್ಯಕ್ಷ ಡಾ. ವಿಜಯ್ ಗುಂಟ್ರಾಳ್, ಒಬಿಸಿ ಮೋರ್ಚಾ ಅಧ್ಯಕ್ಷ ಮಂಜುನಾಥ್ ಚಿಂತಗಿಂಜಲ್, ವಿನಾಯಕ್ ಲದ್ವಾ, ಡಾ. ಮಹಾಂತೇಶ್ ಸಜ್ಜನವರ, ಶಿವು ಅಂಬಿಗೇರ ಇನ್ನಿತರರು ಇದ್ದರು.
ಲಿಂಗಾಯತ ಪಂಚಮಸಾಲಿ: ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜ ಟ್ರಸ್ಟ್ ವತಿಯಿಂದ ಗ್ಲಾಸ್ ಹೌಸ್ ಆವರಣದ ಜಗಜ್ಯೋತಿ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು. ಮೂರು ಸಾವಿರ ಮಠದ ಡಾ. ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮಿಗಳು, ಟ್ರಸ್ಟ್‌ನ ಕಾರ್ಯಾಧ್ಯಕ್ಷ ರಾಜಶೇಖರ ಮೆಣಸಿನಕಾಯಿ, ಕಾರ್ಯದರ್ಶಿ ನಂದಕುಮಾರ ಪಾಟೀಲ, ಮುಖಂಡರಾದ ರವಿ ಹೊಸೂರ, ಪಿ.ಸಿ. ಕಮ್ಮಾರ, ಕುಮಾರ ಕುಂದನಹಳ್ಳಿ, ಗಿರೀಶ ಸುಂಕದ, ಮುತ್ತಣ್ಣ ಬಾಡಿನ ಮುಂತಾದವರು ಉಪಸ್ಥಿತರಿದ್ದರು.
ವಿಶ್ವದಲ್ಲಿಯೇ ದೊಡ್ಡ ವಿಚಾರವಾದಿ ಎಂದು ಬಸವಣ್ಣನವರನ್ನು ಗುರುತಿಸಲಾಗುತ್ತದೆ. ಸಮಾಜವಾದ, ಸಮತಾವಾದಕ್ಕೆ ಅವರು ಬುನಾದಿ ಹಾಕಿದವರು. ಜನ ಸಾಮಾನ್ಯರಿಗೂ ಅರ್ಥವಾಗುವ ಅವರ ವಚನ ಸಾಹಿತ್ಯ ಪ್ರಜಾ ಸಾಹಿತ್ಯವಾಗಿತ್ತು ಎಂದು ವಿಧಾನ ಪರಿಷತ್‌ನ ಮುಖ್ಯ ಸಚೇತಕ ಸಲೀಂ ಅಹ್ಮದ್ ಹೇಳಿದರು.
ವಚನಗಳ ಮೂಲಕ ಜಗತ್ತಿಗೆ ಏಕತೆಯ ಸಂದೇಶ ಸಾರಿದವರು. ಅವರ ವಚನಗಳು ಎಂದೆಂದಿಗೂ ಪ್ರಸ್ತುತ. ಅವರ ನಡೆ-ನುಡಿಗಳು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.