ಜನರ ಸಮಸ್ಯೆಗಳಿಗೆ ಸ್ಪಂದಿಸಿ ಶ್ರಮಿಸಿದರೆ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯಲು ಸಾಧ್ಯಕನ್ನಡಪ್ರಭ ವಾರ್ತೆ ಹೊಸದುರ್ಗ
ರಾಜಕೀಯ ಸ್ಥಾನಮಾನ ಶಾಶ್ವತವಲ್ಲ ಜನರ ಸಮಸ್ಯೆ ಗಳಿಗೆ ಸ್ಪಂದಿಸಿ ತಮ್ಮ ಕ್ಷೇತ್ರದ ಅಭಿವೃದ್ಧಿ ಶ್ರಮಿಸಿದರೆ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯಲು ಸಾಧ್ಯ ಎಂದು ಶಾಸಕ ಬಿ.ಜಿ.ಗೋವಿಂದಪ್ಪ ಹೇಳಿದರು.ಪಟ್ಟಣದ ಗುರು ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ತಾಲೂಕಿನ 33 ಗ್ರಾಮ ಪಂಚಾಯತಿಗಳ ಅಧ್ಯಕ್ಷರು, ಉಪಾಧ್ಯಕ್ಷರು ಸರ್ವ ಸದಸ್ಯರಿಗೆ ಬೀಳ್ಕೊಡುಗೆ ಆದ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಾಜಕೀಯಕ್ಕೆ ಕೊನೆಯಿಲ್ಲ ರಾಜಕಾರಣದಲ್ಲಿ ಮುಂದುವರೆಯಬೇಕು ಎನ್ನುವವರು ಜನರಲ್ಲಿ ನಂಬಿಕೆ ಮೂಡಿಸಬೇಕು ನನಗೆ ಯಾವುದೇ ರಾಜಕೀಯ ಗುರುಗಳಿಲ್ಲ ನಾನೇನು ದೊಡ್ಡ ರಾಜಕೀಯ ಕುಟುಂಬದಿಂದ ಬಂದವನಲ್ಲ ಸೇವೆಯ ಮೂಲಕವೇ ಈ ಮಟ್ಟಕ್ಕೆ ಬೆಳೆದಿದ್ದೇನೆ. ನನ್ನನ್ನೇ ಆದರ್ಶ ವಾಗಿಟ್ಟುಕೊಳ್ಳಿ ಎಂದರು.ಈಗ ಗ್ರಾಪಂಗಳಿಗೆ ಆಡಳಿತ ಅಧಿಕಾರಿಗಳನ್ನು ನೇಮಿಸಲಾಗಿದೆ, ಇವರಿಂದ ಗ್ರಾಮಗಳ ಸಮಸ್ಯೆ ಬಗೆಹರಿಸಲು ಸಾಧ್ಯವಿಲ್ಲ. ನಿಮ್ಮ ಅಧಿಕಾರದ ಅವಧಿ ಮುಗಿದಿದ್ದರೂ ಮುಂದಿನ ಚುನಾಯಿತ ಸದಸ್ಯರ ಆಡಳಿತ ಬರುವವರೆಗೂ ಪಿಡಿಒಗಳ ಜೊತೆ ಸೇರಿ ಗ್ರಾಮಗಳ ಸಮಸ್ಯೆ ಬಗೆಹರಿಸಿ ತಮ್ಮ ರಾಜಕೀಯ ಭವಿಷ್ಯವನ್ನು ರೂಪಿಸಿಕೊಳ್ಳಿ ಎಂದರು.
ಕಾರ್ಯಕ್ರಮದಲ್ಲಿ ಪ್ರೊಫೆಸರ್ ಆರ್‌ಜಿ ಚಿದಾನಂದ ದಿಕ್ಸೂಚಿ ನುಡಿಗಳನ್ನಾಡಿ ರಾಜಕಾರಣ ಒಂದು ಉದ್ಯೋಗವಲ್ಲ ಅದೊಂದು ಸೇವೆ. ರಾಜಕಾರಣಿಗಳಿಗೆ ಸೇವೆ ಆದರ್ಶ ವಾಗಬೇಕು, ಶಾಸಕರ ಅಂತರ್ ಜಲ ಹೆಚ್ಚಿಸುವ ದೂರಾಲೋಚನೆ ಫಲವಾಗಿ ಇಂದು ತಾಲೂಕಿನಲ್ಲಿ ಅಂತರ್ಜಲ ಮಟ್ಟ ಹೆಚ್ಚಿದೆ. ಎಲ್ಲಿ ಶ್ರಮ ಇರುತ್ತೆ ಅಲ್ಲಿ ಅಭಿವೃದ್ಧಿ ಇರುತ್ತೆ . ಶ್ರೀಮಂತಿಕೆ ಎಂಬುದು ಹಣ ಆಸ್ತಿ ಒಡವೆಯಲ್ಲ ಎಂದರು.
ಶ್ರಮವಿಲ್ಲದ ದುಡಿಮೆ, ತತ್ವವಿಲ್ಲದ ರಾಜಕಾರಿಣಿ, ಶೀಲ ವಿಲ್ಲದ ಶಿಕ್ಷಣ ಅವನತಿಗೆ ಕಾರಣ, ಕೇವಲ ರೈತ ಮಾತ್ರ ಶ್ರೀಮಂತನಾಗಲು ಸಾಧ್ಯ. ಟೀಕೆ ಟಿಪ್ಪಣಿ ಗಳಿಗೆ ಜಾಣ ಕುರುಡನಾದಾಗ ಮಾತ್ರ ರಾಜಕಾರಣಿಗಳು ಯಶಸ್ಸು ಕಾಣಲು ಸಾಧ್ಯ ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಬಿಜಿ ಅರುಣ್ ಗೋವಿಂದಪ್ಪ, ಕಾರೇಹಳ್ಳಿ ಬಸವರಾಜ್, ಆಗ್ರೋ ಶಿವಣ್ಣ, ಗೋ ತಿಪ್ಪೇಶ್, ಇಸ್ಮಾಯಿಲ್, ಅಲ್ತಾಪ್ ಪಾಷ, ಎಂ.ಪಿ.ಶಂಕರ್, ಅರಳಿಹಳ್ಳಿ ಲೋಕೇಶಪ್ಪ, ಇಲ್ಕಲ್ ಅಜ್ಜಪ್ಪ, ಲೋಕೇಶಪ್ಪ, ಪದ್ಮನಾಭ, ವಿಶಾಲಾಕ್ಷಿ ಸೇರಿದಂತೆ ವಿವಿಧ ಘಟಕಗಳ ಪದಾಧಿಕಾರಿಗಳು ತಾಲೂಕಿನ 33 ಗ್ರಾಪಂ ಗಳ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರಿಗೆ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ತಾಲೂಕಿನ 33 ಗ್ರಾಮ ಪಂಚಾಯಿತಿಗಳ ಸದಸ್ಯರಿಗೆ ಅಭಿನಂದನೆ ಸಲ್ಲಿಸಲಾಯಿತು.