ಕನ್ನಡಪ್ರಭ ವಾರ್ತೆ ನಾಪೋಕ್ಲು
ಬೆಟ್ಟಗೇರಿ ಬಕ್ಕ ಕ್ರೀಡಾ ಸಂಘ, ಶ್ರೀ ಕೃಷ್ಣ ಸಂಕ್ರಾಂತಿ ಸಂಘ, ಸಾಗರ ಸ್ವಸಹಾಯ ಸಂಘ , ಅಂಬಿಕಾ ಸ್ತ್ರೀ ಶಕ್ತಿ , ಗಜಾನನ ಭಕ್ತ ಮಂಡಳಿ ಹಾಗೂ ಸಾರ್ವಜನಿಕರ ಸಹಯೋಗದಲ್ಲಿ ಆಯೋಜಿಸಿದ 19ನೇ ವರ್ಷದ ಕೈಲ್ ಮುಹೂರ್ತ ಕ್ರೀಡಾಕೂಟ ಹಾಗೂ ಸನ್ಮಾನ ಸಮಾರಂಭ ಬಕ್ಕದಲ್ಲಿ ಅರ್ಥಪೂರ್ಣವಾಗಿ ಜರುಗಿತು.ಕ್ರೀಡಾ ಸಂಘದ ಅಧ್ಯಕ್ಷ ಬೈತಡ್ಕ ದೇವಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಚೇರಂಬಾಣೆ ಗೌಡ ಸಮಾಜದ ಅಧ್ಯಕ್ಷರಾದ ಕೊಡಪಾಲು ಗಣಪತಿ ದೀಪ ಬೆಳಗಿಸಿ ಉದ್ಘಾಟಿಸಿದರು. ನಂತರ ಪುಟಾಣಿ ಮಕ್ಕಳಿಗೆ ಕಾಳು ಹೆಕ್ಕುವುದು, ತೆಂಗಿನಕಾಯಿಗೆ ಗುಂಡು ಹೊಡೆಯುವುದು, ಸಾರ್ವಜನಿಕರಿಗೆ ಮ್ಯಾರಥಾನ್ ಓಟ, ಮಹಿಳೆಯರಿಗೆ ನಿಂಬೆಹಣ್ಣು ಚಮಚದ ಓಟ, ಮೂರು ಕಾಲಿನ ಓಟ, ಗೋಣಿಚೀಲದ ಓಟ, ಬಾಟಲಿಗೆ ನೀರು ತುಂಬಿಸುವುದು, ಭಾರದ ಗುಂಡು ಎಸೆತ ಹಗ್ಗ ಜಗ್ಗಾಟ, ವಯಸ್ಕರ ನಡಿಗೆ, ವಾದ್ಯ ಕುಣಿತ, ಹೀಗೆ ಮಕ್ಕಳಿಂದ ವಯಸ್ಕರ ವರೆಗೆ ವಿವಿಧ ಮನೋರಂಜನಾ ಆಟೋಟ ಸ್ಪರ್ಧೆಗಳು ಮನೋಲ್ಲಾಸ ನೀಡಿದವು.ಸಮಾರೋಪ: ಸಂಜೆ ಸಮಾರೋಪ ಸಮಾರಂಭದಲ್ಲಿ ಸೇನಾ ಕ್ಷೇತ್ರದಲ್ಲಿ ಬೈತಡ್ಕ ಲೀಲಾ ವೇಣಿ ಜಗದೀಶ್, ಶಿಕ್ಷಣ ಕ್ಷೇತ್ರದಲ್ಲಿ ಸೂದನ ಎಸ್ ಗೋಪಾಲ, ಅಂಚೆ
ಇಲಾಖೆಯ ನಿವೃತ್ತ ಪೋಸ್ಟ್ ಮಾಸ್ಟರ್ ರಾಜಮ್ಮ ರಾಣಿ, ಚಾಮುಂಡೇಶ್ವರಿ ವಿದ್ಯುತ್ ಛಕ್ತಿ ನಿಗಮದ ಯಂತ್ರಕರ್ಮಿ ಅಲ್ಲಪ್ಪ ಇವರ ಗಣನೀಯ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು. 2024 25 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ತೃತೀಯ ಹಾಗೂ ಮಡಿಕೇರಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿ ನಿಸರ್ಗ ರೈ ಹಾಗೂ ಅಬಾಕಸ್ ಬ್ರೈನೋ ಬ್ರೈನ್ ಸ್ಪರ್ಧೆಯಲ್ಲಿ ಅಂತರಾಷ್ಟ್ರಮಟ್ಟದ ಚಾಂಪಿಯನ್ ಶಿಪ್ ಪಡೆದ ಕಡ್ಲೇರ ಲಿಖಿತ್ ಸೋಮಣ್ಣ ಇವರಿಗೆಪ್ರತಿಭಾ ಪುರಸ್ಕಾರ ನೀಡಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸಿ ಆರ್ ಪಿ ಎಫ್ ನ ನಿವೃತ್ತ ಎ ಎಸ್ ಐ ಲೀಲವೇಣಿ ಜಗದೀಶ್ ಅವರು, ಗ್ರಾಮೀಣ ಭಾಗದಲ್ಲಿ ನಡೆಯುವ ಇಂತಹ ಕ್ರೀಡಾಕೂಟಗಳಿಂದ ಒಗ್ಗಟ್ಟು ಸಾಮರಸ್ಯ, ಮನರಂಜನೆ ಹಾಗೂ ಕ್ರೀಡೆಗೆ ಸ್ಪೂರ್ತಿ ಸಿಗುತ್ತದೆ. ಇದರಿಂದ ಭವಿಷ್ಯದಲ್ಲಿ ವಿದ್ಯಾರ್ಥಿಗಳಿಗೆ ಸೇನೆಗೆ ಸೇರಲು ಒಳ್ಳೆಯ ಅವಕಾಶ ಸಿಗುತ್ತದೆ ಎಂದರು.ಆಟೋಟ ಸ್ಪರ್ಧೆಗಳು ಪ್ರಯೋಜನಕಾರಿ:
ನಿವೃತ್ತ ಪ್ರಾಂಶುಪಾಲರಾದ ಸೂದನ ಎಸ್ ಗೋಪಾಲ್ ಅವರು ಮಾತನಾಡಿ, ಮನಸ್ಸಿನ ಜಂಜಾಟವನ್ನು ದೂರಸರಿಸಲು ಇಂತಹ ಆಟೋಟ ಸ್ಪರ್ಧೆಗಳು ಬಹಳ ಪ್ರಯೋಜನಕಾರಿಯಾಗುತ್ತವೆ. ನಾವು ಮಣ್ಣಿನ ಮಕ್ಕಳು ಮಣ್ಣಿನಲ್ಲಿ ಆಡಿ ಬೆಳೆಯುವುದು ಒಂದು ಶಿಕ್ಷಣವೇ ಸರಿ. ಮಕ್ಕಳಿಗೆ ಪುಸ್ತಕದ ಶಿಕ್ಷಣದೊಂದಿಗೆ ಬದುಕಿನ ಮೌಲ್ಯಯುತ ಶಿಕ್ಷಣ ಅಗತ್ಯವಿದೆ. ಸಂಸ್ಕಾರದ ಪಾಠ ಮನುಷ್ಯನ ಜೀವನವನ್ನು ಸದೃಢಗೊಳಿಸುತ್ತದೆ. ಹಾಗೆಯೇ ಅವರು ಮಾತನಾಡಿ ನಮ್ಮ ಸಂಪ್ರದಾಯದಲ್ಲಿ ಬಹುತೇಕ ಮೂಡ ನಂಬಿಕೆಗಳು ಇನ್ನೂ ಉಳಿದುಕೊಂಡಿದ್ದು ಅವುಗಳನ್ನು ಕೈಬಿಡಬೇಕು. ಈ ವಿಚಾರದಲ್ಲಿ ಸಮಾಜ ಮುಂದೆ ಬರಬೇಕು ಎಂದು ಕರೆ ನೀಡಿದರು.ಆಟೋಟ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಈ ಸಂದರ್ಭ ಮಾಜಿ ಸೈನಿಕರಾದ ಹೊಸೋಕ್ಲು ಮೊಣ್ಣಪ್ಪ, ಪುದಿಯನೆರವನ ವೀಣಾ, ಕುಂಜಿಲನ ಲೋಕನಾಥ್, ಬಾಡನ ಸತೀಶ್, ಪಂಚಾಯತ್ ಸದಸ್ಯರಾದ ಗೋಪಾಲ, ಲಿಖಿತಾ ಬಾಡನ ಸೇರಿದಂತೆ ಕ್ರೀಡಾಭಿಮಾನಿಗಳು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ತೇನನ ರಜನಿ ಪ್ರಾರ್ಥಿಸಿ ನೆಯ್ಯಣಿ ಹೇಮ ಕುಮಾರ್ ಮತ್ತು ಕಡ್ಲೇರ ತುಳಸಿ ಮೋಹನ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.