ಬಾಲಕಾರ್ಮಿಕರ ರಕ್ಷಣೆಯಲ್ಲಿ ಕಾರ್ಮಿಕ ಇಲಾಖೆ ವಿಫಲ

KannadaprabhaNewsNetwork |  
Published : Jun 10, 2025, 06:14 AM IST
9ಡಿಡಬ್ಲೂಡಿ5ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಜರುಗಿದ ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ದಿವ್ಯಪ್ರಭು ಮಾತನಾಡಿದರು.   | Kannada Prabha

ಸಾರಾಂಶ

ಮಕ್ಕಳು ಶಾಲೆಗಳಿಗೆ ಗೈರು ಉಳಿಯುತ್ತಿರುವುದು ಬಾಲಕಾರ್ಮಿಕರ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗುತ್ತಿದೆ. ಕಾರ್ಮಿಕ ಇಲಾಖೆ ಅಧಿಕಾರಿಗಳು ಆಯಾ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ನಿರಂತರ ಶಾಲೆಗೆ ಗೈರು ಆಗಿರುವ ಮಕ್ಕಳ ಮಾಹಿತಿ ಪಡೆದುಕೊಂಡು ಗೈರು ಮಕ್ಕಳ ಮನೆಗಳಿಗೆ ಭೇಟಿ ಮಾಡಿ, ಸಮೀಕ್ಷಾ ವರದಿ ಸಲ್ಲಿಸಬೇಕು.

ಧಾರವಾಡ: ಜಿಲ್ಲೆಯಲ್ಲಿ ಕಾರ್ಮಿಕ ಇಲಾಖೆ ಹಾಗೂ ತಾಲೂಕು ಟಾಸ್ಕ್‌ಫೋರ್ಸ್‌ ಸಮಿತಿಗಳು ಬಾಲ ಹಾಗೂ ಕಿಶೋರ ಕಾರ್ಮಿಕರ ರಕ್ಷಣೆ ಹಾಗೂ ಪುನರ್ವಸತಿ ಕಾರ್ಯ ಮಾಡಲು ವಿಫಲವಾಗಿವೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಅಸಮಧಾನ ವ್ಯಕ್ತಪಡಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಜರುಗಿದ ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸಂಘದ ಕಾರ್ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಕ್ಕಳ ರಕ್ಷಣೆಗೆ ಕಾರ್ಮಿಕ ಇಲಾಖೆ, ಶಾಲಾ ಶಿಕ್ಷಣ ಇಲಾಖೆ ಮತ್ತು ತಾಲೂಕು ಟಾಸ್ಕ್‌ಫೋರ್ಸ್‌ ಸಮಿತಿ ಸದಸ್ಯರು ಸಮನ್ವಯದಿಂದ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ತಹಸೀಲ್ದಾರ್‌ ಅಧ್ಯಕ್ಷತೆಯಲ್ಲಿ ತಾಲೂಕು ಟಾಸ್ಕ್‌ಫೋರ್ಸ್‌ ಸಮಿತಿಗಳ ಸಭೆಗಳು ಪ್ರತಿ ಮೂರು ತಿಂಗಳಿಗೊಮ್ಮೆ ಕಡ್ಡಾಯವಾಗಿ ಜರುಗಬೇಕು ಎಂದು ನಿರ್ದೇಶಿಸಿದರು.

ಬಾಲ ಕಾರ್ಮಿಕರು ಇರಬಹುದಾದ ಕೈಗಾರಿಕೆ, ಇಟ್ಟಂಗಿ ಭಟ್ಟಿ, ಹೊಟೇಲ್ ಹಾಗೂ ಇತರ ಸ್ಥಳಗಳಲ್ಲಿ ಕಾರ್ಮಿಕ ಇಲಾಖೆ ಅಧಿಕಾರಿಗಳು ಇತರ ಇಲಾಖೆಗಳ ಅನಿರೀಕ್ಷಿತ ಭೇಟಿ, ದಾಳಿಗಳ ಸಂಖ್ಯೆ ಹೆಚ್ಚಾಗಬೇಕು. ಬಾಲ ಮತ್ತು ಕಿಶೋರ ಕಾರ್ಮಿಕರನ್ನು ಕಳುಹಿಸುವ ಪಾಲಕರಿಗೆ ಮತ್ತು ದುಡಿಸಿಕೊಳ್ಳುವ ಮಾಲೀಕರಿಗೆ ತಕ್ಕ ಕಾನೂನು ಶಾಸ್ತಿ ಆಗಬೇಕು. ತಾಲೂಕು ಮಟ್ಟದಲ್ಲಿ ನಿಯಮಿತವಾಗಿ ಸಭೆಗಳು ಜರುಗಿಸುವುದು ಹಿರಿಯ ಕಾರ್ಮಿಕ ಅಧಿಕಾರಿಗಳ ಜವಾಬ್ದಾರಿ. ಸಭೆಗಳು ಆಗದೇ, ತಾಲೂಕಿನಲ್ಲಿ ಬಾಲ ಕಾರ್ಮಿಕರು ಪತ್ತೆ ಆದರೆ ಜಿಲ್ಲಾ ಮಟ್ಟದ ಕಾರ್ಮಿಕ ಅಧಿಕಾರಿಗಳನ್ನು ಜವಾಬ್ದಾರರನ್ನಾಗಿಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಮಕ್ಕಳ ಗೈರು ಏಕೆ?: ಮಕ್ಕಳು ಶಾಲೆಗಳಿಗೆ ಗೈರು ಉಳಿಯುತ್ತಿರುವುದು ಬಾಲಕಾರ್ಮಿಕರ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗುತ್ತಿದೆ. ಕಾರ್ಮಿಕ ಇಲಾಖೆ ಅಧಿಕಾರಿಗಳು ಆಯಾ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ನಿರಂತರ ಶಾಲೆಗೆ ಗೈರು ಆಗಿರುವ ಮಕ್ಕಳ ಮಾಹಿತಿ ಪಡೆದುಕೊಂಡು ಗೈರು ಮಕ್ಕಳ ಮನೆಗಳಿಗೆ ಭೇಟಿ ಮಾಡಿ, ಸಮೀಕ್ಷಾ ವರದಿ ಸಲ್ಲಿಸಬೇಕು. ಮಕ್ಕಳು ಶಾಲೆಯಲ್ಲಿ ಇರುವುದು ಹೆಚ್ಚು ಸುರಕ್ಷಿತ. ಆದ್ದರಿಂದ ಪ್ರತಿ ಮಗು ಶಾಲೆಗೆ ಬರುವಂತೆ ಮಾಡಬೇಕು. ಈ ನಿಟ್ಟಿನಲ್ಲಿ ಕಾರ್ಮಿಕ ಇಲಾಖೆಯಿಂದ ಶಾಲೆಗೆ ನಿರಂತರ ಗೈರಾದ ಮಕ್ಕಳ ಮನೆಗಳಿಗೆ ಭೇಟಿ ನೀಡಿ, ಪ್ರತಿ ತಿಂಗಳು 5ನೇ ದಿನಾಂಕದೊಳಗೆ ವರದಿ ಸಲ್ಲಿಸಬೇಕು ಎಂದರು.

ಜೂ. 12ರಂದು ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಅರ್ಥಪೂರ್ಣವಾಗಿ ನಡೆಯಬೇಕು. ಬಾಲ ಕಾರ್ಮಿಕ ಮುಕ್ತ ಜಿಲ್ಲೆ ಮಾಡಲು ಕ್ರಿಯಾಯೋಜನೆ ರೂಪಿಸಿ, ಪರಿಣಾಮಕಾರಿಯಾಗಿ ಜಾರಿ ಮಾಡಬೇಕು. ಈ ದಿನದಾಚರಣೆ ಅಂಗವಾಗಿ ಸ್ಲಂ ಮತ್ತು ಜನಸಂದಣಿ ಇರುವ ಸ್ಥಳಗಳಲ್ಲಿ ಜನಜಾಗೃತಿ ಕಾರ್ಯಕ್ರಮಗಳನ್ನು, ಬೀದಿ ನಾಟಕಗಳನ್ನು ಪ್ರದರ್ಶಿಸಬೇಕು. ಶಾಲಾ- ಕಾಲೇಜುಗಳಲ್ಲಿ ಚಿತ್ರಕಲೆ, ಪ್ರಬಂಧ, ಭಾಷಣ ಸ್ಪರ್ಧೆಗಳನ್ನು ಆಯೋಜಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು. ಕಾರ್ಮಿಕ ಅಧಿಕಾರಿ ಅಕ್ಬರ್ ಮುಲ್ಲಾ ಸಭೆ ನಿರ್ವಹಿಸಿದರು.

ವಿವಿಧ ಇಲಾಖಾಧಿಕಾರಿಗಳಾದ ಡಾ. ಎಚ್.ಎಚ್. ಕುಕನೂರ, ಅಜೀಜ್ ದೇಸಾಯಿ, ನರೇಂದ್ರ ಗದಗಕರ, ಸಚಿನ್ ಹಳೆಮನಿ, ಮಾರಿಕಾಂಬಾ ಹುಲಕೋಟಿ, ಅಕ್ರಮ ಅಲ್ಲಾಪುರ, ಭುವನೇಶ್ವರಿ ಕೋಟಿಮಠ, ರಜನಿ ಹಿರೇಮಠ, ಸಂಗೀತಾ ಬೆನಕೊಪ್ಪ, ಮೀನಾಕ್ಷಿ ಸಿಂದಿಹಟ್ಟಿ, ಲತಾ ಟಿ.ಎಸ್., ಡಾ. ರೇಣುಕಾ ಅಮಲಜೇರಿ ಇದ್ದರು. ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ ಯೋಜನಾ ನಿರ್ದೇಶಕ ಬಸವರಾಜ ಪಂಚಾಕ್ಷರಿಮಠ ಸ್ವಾಗತಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವೋಟ್ ಚೋರಿ ವಿರುದ್ಧ ಉಡುಪಿ ಕಾಂಗ್ರೆಸ್‌ ಮಾನವ ಸರಪಣಿ
ವೈದ್ಯಕೀಯ ವಿಜ್ಞಾನ ಸಂಸ್ಥೆಯಿಂದ ಉಪನ್ಯಾಸ ಕಾರ್ಯಕ್ರಮ