-ಆನಂದ್ ಎಂ. ಸೌದಿ
ಬದುಕು ಅರಸಿ ಮುಂಬೈ, ಬೆಂಗಳೂರು, ಚೆನ್ನೈ, ಗೋವಾ, ಹೈದರಾಬಾದ್‌ನಂತಹ ಮಹಾನಗರಗಳಿಗೆ ಗುಳೇ ಹೋಗುತ್ತಿರುವ ಜಿಲ್ಲೆಯ ಗ್ರಾಮೀಣ ಭಾಗದ ಕಾರ್ಮಿಕರ ನಂತರ, ಇದೀಗ ಗುಣಮಟ್ಟದ ಶಿಕ್ಷಣಕ್ಕಾಗಿ ಜಿಲ್ಲೆಯ ಪ್ರತಿಭಾವಂತ ಮಕ್ಕಳ ಮಹಾನಗರಗಳಿಗೆ "ಗುಳೇ " ಆರಂಭವಾಗಿದೆ.
ಹೌದು, ಉದ್ಯೋಗ ಅರಸಿ ಜಿಲ್ಲೆಯ ಸಾವಿರಾರು ಕೃಷಿ ಕಾರ್ಮಿಕರು ಇಲ್ಲಿಂದ ವಲಸೆ ಹೋದಂತೆ, ಗುಣಮಟ್ಟದ ಶಿಕ್ಷಣ ಅರಸಿ ಇಲ್ಲಿನ ಸಾವಿರಾರು ಮಕ್ಕಳು ಉಡುಪಿ, ಮಂಗಳೂರು, ಬೀದರ್, ಬೆಂಗಳೂjg ಕಡೆ ಮುಖ ಮಾಡಿದ್ದಾರೆ.ಮೂಲಸೌಲಭ್ಯ ಹಾಗೂ ಶಿಕ್ಷಕರ ಕೊರತೆಯಿಂದ ಕುಸಿದಿರುವ ಯಾದಗಿರಿ ಜಿಲ್ಲೆ ಶೈಕ್ಷಣಿಕ ಗುಣಮಟ್ಟದಿಂದಾಗಿ, ಸ್ಥಳೀಯವಾಗಿ ಮಕ್ಕಳ ಶಿಕ್ಷಣ ಮುಂದುವರಿಸಲು ಹಿಂಜರಿಯುತ್ತಿರುವ ಪಾಲಕರು, ಮಕ್ಕಳ ಭವಿಷ್ಯ ರೂಪಿಸಲು ನಗರದ ಶಿಕ್ಷಣ ಸಂಸ್ಥೆಗಳ ಎಡತಾಕುತ್ತಿದ್ದಾರೆ.
ಮೂಡಬಿದಿರೆ, ಬೀದರ್, ಮಂಗಳೂರು, ಉಡುಪಿ, ಬೆಂಗಳೂರು, ಗಂಗಾವತಿ, ಧಾರವಾಡ, ವಿಜಯಪುರ, ಬೆಳಗಾವಿ, ಮೈಸೂರು ಮುಂತಾದ ಕಡೆಗಳ ಶಿಕ್ಷಣ ಸಂಸ್ಥೆಗಳು ತಮ್ಮ ತಮ್ಮ "ಸಾಧನೆ-ಸಾಧಕ "ರ ಫೋಟೋ ವಿವರಗಳ ಸಮೇತ ಜಿಲ್ಲೆಯ ಮಕ್ಕಳ ಗಮನ ಸೆಳೆಯುತ್ತಿವೆ.
ಎಸ್ಸೆಸ್ಸೆಲ್ಸಿ ನಂತರ ಶೇ.30-35 ರಷ್ಟು ಮಕ್ಕಳ ವಲಸೆ:
ಕಾಯಂ ಪ್ರಾಂಶುಪಾಲರು, ಉಪನ್ಯಾಸಕರೇ ಇಲ್ಲ: ಯಾದಗಿರಿ: ಕಾಲೇಜು ಶಿಕ್ಷಣದ ಇಲಾಖೆ ಅಧಿಕಾರಿಗಳ ಮಾಹಿತಿಯಂತೆ, ಯಾದಗಿರಿ ಜಿಲ್ಲೆಯಲ್ಲಿ 23 ಸರ್ಕಾರಿ ಪಿಯು, 6 ಅನುದಾನಿತ ಹಾಗೂ 61 ಅನುದಾನ ರಹಿತ ಕಾಲೇಜುಗಳಿವೆ. 23 ಸರ್ಕಾರಿ ಪಿಯು ಕಾಲೇಜುಗಳ ಪೈಕಿ ಕಾಯಂ ಪ್ರಾಂಶುಪಾಲುರು ಇರುವುದೇ 2 ಕಾಲೇಜುಗಳಲ್ಲಿ ಮಾತ್ರ. ಉಳಿದ 21 ಸರ್ಕಾರಿ ಪಿಯು ಕಾಲೇಜುಗಳಲ್ಲಿ ಪ್ರಭಾರಿಗಳು. ನಮ್ಮ ಸರ್ಕಾರಿ ಕಾಲೇಜುಗಳಲ್ಲಿ ಮೂಲಸೌಕರ್ಯಗಳ ವ್ಯವಸ್ಥೆ ಖಾಸಗಿ ಕಾಲೇಜುಗಳನ್ನೂ ಮೀರಿಸುವಂತಿವೆ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಹಾಗೂ ಇನ್ನಿತರ ಸರ್ಕಾರಿ ಅನುದಾನದಡಿಯಲ್ಲಿ ತಾಂತ್ರಿಕ-ವಿಜ್ಞಾನದ ಅನೇಕ ಸೌಕರ್ಯಗಳಿವೆ. ಆದರೆ, 21 ಕಾಲೇಜುಗಳಲ್ಲಿ ಕಾಯಂ ಪ್ರಾಂಶುಪಾಲರು ಹಾಗೂ ಶೇ.40 ರಷ್ಟು ಕಾಯಂ ಉಪನ್ಯಾಸಕರ ಕೊರತೆಯಿಂದ ಮಕ್ಕಳು ಬೇರೆಡೆ ಮುಖ ಮಾಡುವಂತಾಗಿದೆ ಎಂದು ಡಿಡಿಪಿಯು ಚೆನ್ನಬಸಪ್ಪ ಕುಳಗೇರಿ "ಕನ್ನಡಪ್ರಭ "ಕ್ಕೆ ತಿಳಿಸಿದರು. ಜಿಲ್ಲೆಯಲ್ಲಿ ಶಿಕ್ಷಕರ ಕೊರತೆ ಎಸ್ಸೆಸ್ಸೆಲ್ಸಿ ಫಲಿತಾಂಶದ ಕುಸಿತಕ್ಕೆ ಕಾರಣವಾದಂತೆ, ಪದವಿ ಪೂರ್ವ ಕಾಲೇಜುಗಳಲ್ಲಿಯೂ ಇದೇ ಸಮಸ್ಯೆ ಪ್ರತಿಭಾವಂತ ಮಕ್ಕಳ ಗುಳೇ ಗೆ ಕಾರಣವಾಗುತ್ತಿದೆ. ಹೀಗೆ ವಲಸೆ ಹೋಗಿರುವ ನಮ್ಮದೇ ಜಿಲ್ಲೆಯ ಪ್ರತಿಭಾವಂತ ಮಕ್ಕಳು ರ್‍ಯಾಂಕ್ ಬಂದಿರುವುದು ಹೆಮ್ಮೆ ಮೂಡಿಸುತ್ತಾದರೂ, ನಮ್ಮದೇ ಜಿಲ್ಲೆಗೆ ಬರಬೇಕಾಗಿದ್ದ ಗರಿಯನ್ನು ಬೇರೆಡೆ ಇಟ್ಟು ಬಂದಂತೆ ಅಂತಾರೆ ಇಲ್ಲಿನ ಶಿಕ್ಷಣ ತಜ್ಞರು.
ಉಡುಪಿ, ಮಂಗಳೂರು, ಬೀದರ್, ಬೆಂಗಳೂರು ಕಡೆಗಳತ್ತ ಮುಂದಿನ ಶಿಕ್ಷಣದ ಚಿತ್ತ
*ಎಸ್ಸೆಸ್ಸೆಲ್ಸಿ ನಂತರ ಶೇ.30-35 ರಷ್ಟು ಮಕ್ಕಳು ಜಿಲ್ಲೆಯಿಂದ ಹೊರ ಜಿಲ್ಲೆಗಳಿಗೆ ವಲಸೆ