ಕಾರ್ಮಿಕ ದೇಶದ ಆರ್ಥಿಕ ವ್ಯವಸ್ಥೆಯ ಬೆನ್ನೆಲುಬು: ದೇಶಪಾಂಡೆ

KannadaprabhaNewsNetwork |  
Published : Jul 27, 2026, 02:45 AM IST
ಎಚ್೨೬.೭-ಡಿಎನ್‌ಡಿ೩:ಅಂಬೇಡ್ಕರ ಕಾರ್ಮಿಕ ಸೇವಾ ಕೇಂದ್ರದ ಮೂಲಕ ವಿವಿಧ ಸುರಕ್ಷತಾ ಕಿಟ್‌ಗಳ ವಿತರಣಾ ಕಾರ್ಯಕ್ರಮ | Kannada Prabha

ಸಾರಾಂಶ

ಕಾರ್ಮಿಕರು ದೇಶದ ಆರ್ಥಿಕ ವ್ಯವಸ್ಥೆಯ ಬೆನ್ನೆಲುಬು. ಅವರ ದುಡಿಮೆ ಮತ್ತು ಶ್ರಮದಿಂದಲೇ ನಾಡು, ದೇಶದ ಅಭಿವೃದ್ಧಿಯತ್ತ ಸಾಗುತ್ತಿದೆ. ಕಾರ್ಮಿಕರ ಕಲ್ಯಾಣವೇ ಸರ್ಕಾರದ ಆದ್ಯತೆಯಾಗಿದೆ.

ನೋಂದಾಯಿತ ಫಲಾನುಭವಿಗಳಿಗೆ ವಿವಿಧ ಸುರಕ್ಷತಾ ಕಿಟ್‌ಗಳ ವಿತರಣಾ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ದಾಂಡೇಲಿ

ಕಾರ್ಮಿಕರು ದೇಶದ ಆರ್ಥಿಕ ವ್ಯವಸ್ಥೆಯ ಬೆನ್ನೆಲುಬು. ಅವರ ದುಡಿಮೆ ಮತ್ತು ಶ್ರಮದಿಂದಲೇ ನಾಡು, ದೇಶದ ಅಭಿವೃದ್ಧಿಯತ್ತ ಸಾಗುತ್ತಿದೆ. ಕಾರ್ಮಿಕರ ಕಲ್ಯಾಣವೇ ಸರ್ಕಾರದ ಆದ್ಯತೆಯಾಗಿದೆ ಎಂದು ಶಾಸಕ ಆರ್.ವಿ. ದೇಶಪಾಂಡೆ ನುಡಿದರು.

ನಗರದ ಸೋಮಾನಿ ಸರ್ಕಲ್‌ನಲ್ಲಿರುವ ಕಾರ್ಮಿಕ ಭವನದಲ್ಲಿ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ನಡೆದ ನೋಂದಾಯಿತ ಫಲಾನುಭವಿಗಳಿಗೆ ಅಂಬೇಡ್ಕರ್‌ ಕಾರ್ಮಿಕ ಸೇವಾ ಕೇಂದ್ರದ ಮೂಲಕ ವಿವಿಧ ಸುರಕ್ಷತಾ ಕಿಟ್‌ಗಳ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.ನಿರ್ಮಾಣ ಕಾರ್ಮಿಕರ ಶ್ರಮದಿಂದಲೇ ನಗರಗಳು, ರಸ್ತೆಗಳು, ಕಟ್ಟಡಗಳು ನಿರ್ಮಾಣವಾಗುತ್ತಿವೆ. ಬಿಸಿಲು, ಮಳೆ ಎನ್ನದೆ ದುಡಿಯುವ ಕಾರ್ಮಿಕರ ಸುರಕ್ಷತೆ ನಮ್ಮೆಲ್ಲರ ಜವಾಬ್ದಾರಿ. ಸರ್ಕಾರವು ಕಾರ್ಮಿಕರಿಗಾಗಿ ಹಲವು ಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಸುರಕ್ಷತಾ ಕಿಟ್ ವಿತರಣೆಯು ಕಾರ್ಮಿಕರ ರಕ್ಷಣೆಯ ದಿಸೆಯಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದ ಅವರು, ಇಂದು ವಿತರಣೆ ಮಾಡಿದ ಈ ಕಿಟ್‌ಗಳು ಕಾರ್ಮಿಕರು ಕೆಲಸದ ಸ್ಥಳದಲ್ಲಿ ಎದುರಿಸುವ ಅಪಾಯಗಳನ್ನು ಕಡಿಮೆ ಮಾಡಲು ಸಹಕರಿಯಾಗಲಿವೆ ಎಂದರು.

ಕಾರ್ಯಕ್ರಮದಲ್ಲಿ ತಹಶೀಲ್ದಾರ ಶೈಲೇಶ ಪರಮಾನಂದ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಟಿ.ಸಿ. ಹಾದಿಮನಿ, ನಗರಸಭೆಯ ಪೌರಾಯುಕ್ತ ವಿವೇಕ ಬನ್ನೆ, ಯಲ್ಲಾಪುರ ಉಪವಿಭಾಗದ ಜಿಲ್ಲಾ ಕಾರ್ಮಿಕ ಅಧಿಕಾರಿ ವೀಣಾ ಮಾಸ್ತಿ, ಹೆಸ್ಕಾಂ ಸ.ಕಾ. ಅಭಿಯಂತರ ದೀಪಕ ನಾಯಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ ಹಲವಾಯಿ, ಪಂಚಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ರಿಯಾಜ್ ಬಾಬು ಸಯ್ಯದ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ೩೭೪ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ, ೪೪ ಎಲೆಕ್ಟ್ರಿಷಿಯನ್‌ಗಳಿಗೆ, ೩೭ ವೆಲ್ಡರ್ ವೃತ್ತಿ ನಿರತರಿಗೆ, ಕಾರ್ಪೇಂಟರ್ ವೃತ್ತಿ ನಿರತ ೮೫ ಕಾರ್ಮಿಕರಿಗೆ, ಪೇಂಟಿಂಗ್ ವೃತ್ತಿಯ ೨೩ ಕಾರ್ಮಿಕರಿಗೆ ಮತ್ತು ಪ್ಲಂಬರ್ ವೃತ್ತಿಯ ಓರ್ವ ಕಾರ್ಮಿಕನಿಗೆ ಸುರಕ್ಷತಾ ಕಿಟ್‌ ವಿತರಿಸಲಾಯಿತು. ಇದೇ ಸಂದರ್ಭ ವಿದ್ಯುತ್‌ ಅವಘಡದಿಂದ ಮೃತಪಟ್ಟ ಜಾನುವಾರುಗಳ ಮಾಲೀಕರಿಗೆ ಹೆಸ್ಕಾಂನಿಂದ ಪರಿಹಾರಧನದ ಚೆಕ್ ವಿತರಿಸಲಾಯಿತು.

ಕಾರ್ಮಿಕ ನಿರೀಕ್ಷಕ ಚೇತನಕುಮಾರ ಎಸ್. ಹುಕುಮನವರ ಸ್ವಾಗತಿಸಿದರು. ಜಿಲ್ಲಾ ಕಾರ್ಮಿಕ ಅಧಿಕಾರಿ ವೀಣಾ ಮಾಸ್ತಿ ಪ್ರಾಸ್ತಾವಿಕ ಮಾತನಾಡಿದರು. ಪ್ರವೀಣ ಈರಪ್ಪನವರ ವಂದಿಸಿದರು. ಸಿಆರ್‌ಪಿ ಲಲಿತಾ ಪುಟ್ಟೇಗೌಡ ನಿರೂಪಿಸಿದರು. ನೋಂದಾಯಿತ ಕಾರ್ಮಿಕರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲು ಯೋಜನೆ, ಸೇವೆಗಳ ಅನುಷ್ಠಾನಕ್ಕೆ ಒತ್ತಾಯ
೮೦ನೇ ಸ್ವಾತಂತ್ರೋತ್ಸವದ ಅರ್ಥಪೂರ್ಣ ಆಚರಣೆ: ಜಿಲ್ಲಾಧಿಕಾರಿ ಸ್ನೇಹಲ್ ಆರ್.