ಸತ್ಯ, ಧರ್ಮ, ಸದಾಚಾರದಿಂದ ಆತ್ಮಜ್ಞಾನ: ಡಾ. ಎಸ್.ಬಿ. ಶೆಟ್ಟರ್

KannadaprabhaNewsNetwork |  
Published : Jul 27, 2026, 02:45 AM IST
ಕಾರ್ಯಕ್ರಮದಲ್ಲಿ ಡಾ. ಎಸ್.ಬಿ.ಶೆಟ್ಟರ್ ಮಾತನಾಡಿದರು. | Kannada Prabha

ಸಾರಾಂಶ

ಮನುಷ್ಯನು ಹೊರಜಗತ್ತನ್ನು ಗೆಲ್ಲುವ ಪ್ರಯತ್ನಕ್ಕಿಂತ ಮೊದಲು ತನ್ನ ಮನಸ್ಸು, ಅಹಂಕಾರ ಮತ್ತು ಇಂದ್ರಿಯಗಳನ್ನು ಗೆಲ್ಲಬೇಕು.

ಗದಗ: ವೈರಾಗ್ಯ, ಅಂರ್ತಮುಖತೆ, ಪಾಪ ವಿಮುಕ್ತಿ, ಸದಾಚಾರ, ಸತ್ಯನಿಷ್ಠೆ, ಇಂದ್ರಿಯ ನಿಗ್ರಹ ಹಾಗೂ ಶುದ್ಧ ಮನಸ್ಸು ಬ್ರಹ್ಮಜ್ಞಾನಕ್ಕೆ ಅಗತ್ಯ ಅರ್ಹತೆಗಳಾಗಿವೆ. ಜಪ- ತಪಗಳಿಗಿಂತ ಮನಸ್ಸಿನ ಪರಿಶುದ್ಧತೆ ಮುಖ್ಯವಾಗಿದ್ದು, ದುಷ್ಟಗುಣಗಳನ್ನು ತ್ಯಜಿಸಿ ಸತ್ಯ, ಧರ್ಮ ಮತ್ತು ಸದಾಚಾರವನ್ನು ಪಾಲಿಸಿದಾಗ ಮಾತ್ರ ಆತ್ಮಜ್ಞಾನದ ದಾರಿ ತೆರೆದುಕೊಳ್ಳುತ್ತದೆ ಎಂದು ಚಿಂತಕ ಡಾ. ಎಸ್.ಬಿ. ಶೆಟ್ಟರ್ ಹೇಳಿದರು.

ನಗರದ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಶ್ರೀ ಶಿರಡಿ ಸಾಯಿಬಾಬಾ ಸತ್ಸಂಗದ ವತಿಯಿಂದ ಗುರುಪೂರ್ಣಿಮೆ ಅಂಗವಾಗಿ ಆಯೋಜಿಸಿದ ಶ್ರೀ ಸಾಯಿ ಸಚ್ಚರಿತ್ರೆ ಪ್ರವಚನ ಮಾಲಿಕೆಯಲ್ಲಿ ಪ್ರವಚನ ನೀಡಿದ ಅವರು, ಮನುಷ್ಯನು ಹೊರಜಗತ್ತನ್ನು ಗೆಲ್ಲುವ ಪ್ರಯತ್ನಕ್ಕಿಂತ ಮೊದಲು ತನ್ನ ಮನಸ್ಸು, ಅಹಂಕಾರ ಮತ್ತು ಇಂದ್ರಿಯಗಳನ್ನು ಗೆಲ್ಲಬೇಕು. ಸದ್ಗುರುವಿನ ಮಾರ್ಗದರ್ಶನ, ಅಂರ್ತಮುಖತೆ, ವೈರಾಗ್ಯ, ಶ್ರದ್ಧೆ ಹಾಗೂ ಮನಸ್ಸಿನ ಶುದ್ಧತೆಯ ಮೂಲಕವೇ ಆತ್ಮಜ್ಞಾನ ಮತ್ತು ಬ್ರಹ್ಮಜ್ಞಾನವನ್ನು ಪಡೆಯಲು ಸಾಧ್ಯ ಎಂದರು.

ಬಾಬಾ ಅವರು ಭಕ್ತರು ಪ್ರೀತಿ, ಶ್ರದ್ಧೆ ಹಾಗೂ ನಿಷ್ಕಾಮ ಭಾವದಿಂದ ಸಮರ್ಪಿಸಿದ ಕಾಣಿಕೆಯನ್ನು ಮಾತ್ರ ಸ್ವೀಕರಿಸುತ್ತಿದ್ದರು. ಅಹಂಕಾರ ಮತ್ತು ಆಡಂಬರದಿಂದ ಸಲ್ಲಿಸುವ ಅರ್ಪಣೆಗೆ ಮನ್ನಣೆ ನೀಡುತ್ತಿರಲಿಲ್ಲ. ಬ್ರಹ್ಮಜ್ಞಾನಕ್ಕಾಗಿ ಬಂದ ಶ್ರೀಮಂತ ವ್ಯಕ್ತಿಗೆ ಬಾಬಾ ಕೇಳಿದ ಐದು ರುಪಾಯಿಗಳು ಹಣವಲ್ಲ, ಐದು ಇಂದ್ರಿಯಗಳನ್ನು ಸಮರ್ಪಿಸುವ ಸಂಕೇತವಾಗಿತ್ತು. ಬ್ರಹ್ಮಜ್ಞಾನ ಪಡೆಯಲು ಪಂಚೇಂದ್ರಿಯಗಳು, ಮನಸ್ಸು, ಬುದ್ಧಿ ಹಾಗೂ ಅಹಂಕಾರವನ್ನು ಪರಮಾತ್ಮನಿಗೆ ಅರ್ಪಿಸುವ ಮನೋಭಾವ ಅಗತ್ಯವಾಗಿದೆ ಎಂದರು.

ಗುರು ಮೊದಲು ಶಿಷ್ಯನಿಗೆ ನಾನು ಯಾರು? ಎಂಬ ಆತ್ಮಜ್ಞಾನವನ್ನು ನೀಡುತ್ತಾನೆ. ಬಳಿಕ ಬ್ರಹ್ಮಜ್ಞಾನದತ್ತ ಕೊಂಡೊಯ್ಯುತ್ತಾನೆ. ಸ್ವಾನುಭವ ಹೊಂದಿರುವ ಸದ್ಗುರು ಮಾತ್ರ ಶಿಷ್ಯನನ್ನು ಆತ್ಮಸಾಕ್ಷಾತ್ಕಾರದ ಹಾದಿಯಲ್ಲಿ ನಡೆಸಬಲ್ಲನು. ಧ್ಯಾನದಿಂದ ಸಿಟ್ಟು, ಅಹಂಕಾರ, ಅಸೂಯೆಯಂತಹ ದುರ್ಗುಣಗಳು ದೂರವಾಗುತ್ತವೆ. ಗುರುಕೃಪೆ, ತ್ಯಾಗ, ವೈರಾಗ್ಯ ಮತ್ತು ಆತ್ಮಶೋಧನೆಯ ಮಹತ್ವವನ್ನು ವಿವರಿಸಿದರು.

ಶಿರಡಿ ಸಾಯಿಬಾಬಾ ಸತ್ಸಂಗದ ಮಹೇಶಗೌಡ ತಲೇಗೌಡ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಸತ್ಸಂಗ ಸಮಿತಿಯ ಪದಾಧಿಕಾರಿಗಳು ಸೇರಿದಂತೆ ಭಕ್ತಾದಿಗಳು ಇದ್ದರು. ಅಮೃತ ವಾಲಿ ನಿರೂಪಿಸಿ, ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲು ಯೋಜನೆ, ಸೇವೆಗಳ ಅನುಷ್ಠಾನಕ್ಕೆ ಒತ್ತಾಯ
೮೦ನೇ ಸ್ವಾತಂತ್ರೋತ್ಸವದ ಅರ್ಥಪೂರ್ಣ ಆಚರಣೆ: ಜಿಲ್ಲಾಧಿಕಾರಿ ಸ್ನೇಹಲ್ ಆರ್.