ಜಾಗತಿಕವಾಗಿ ಕಿವಿ ಮತ್ತು ಶ್ರವಣ ಆರೈಕೆಯ ಅಗತ್ಯವಿರುವ ಶೇ.80ರಷ್ಟು ಜನ ಸಮಸ್ಯೆಗಳಿಗೆ ಪರಿಹಾರ ಪಡೆಯುತ್ತಿಲ್ಲ ಎಂದು ವಿಶ್ವ ಸಂಸ್ಥೆ ಗುರುತಿಸಿದೆ. ನ್ಯೂನತೆಯ ಬಗ್ಗೆ ಸಾಮಾಜಿಕ ತಪ್ಪು ಗ್ರಹಿಕೆಗಳಿವೆ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಶ್ರವಣ ದೋಷ ಸಮಸ್ಯೆ ವಿಶ್ವದ ಪ್ರಮುಖ ಆರೋಗ್ಯ ಸಮಸ್ಯೆಗಳಲ್ಲಿ ಒಂದು. ವಿಶ್ವ ಆರೋಗ್ಯ ಸಂಸ್ಥೆಯ ಆಧ್ಯಯನ ವರದಿಯ ಪ್ರಕಾರ ಜಗತ್ತಿನಲ್ಲಿ 150 ಕೋಟಿ ಮಂದಿ ಕಿವುಡುತನ ಸಹಿತ ನಾನಾ ರೀತಿಯ ಶ್ರವಣ ದೋಷ ಸಮಸ್ಯೆಯಿಂದ ಬಳಲುತ್ತಿದ್ದಾರೆ. 2050ರಲ್ಲಿ ಈ ಸಮಸ್ಯೆಯಿಂದ ಬಳಲುವವರ ಸಂಖ್ಯೆ 250 ಕೋಟಿಗೆ ತಲುಪಲಿದೆ ಮತ್ತು ಪ್ರತಿ ಹತ್ತು ಜನರಲ್ಲಿ ಒಬ್ಬರು ಶ್ರವಣ ಶಕ್ತಿಯನ್ನು ಕಳೆದು ಕೊಳ್ಳುವ ಸಾಧ್ಯತೆ ಇದೆ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದರು.ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ. ನಂದಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿಶ್ವ ಶ್ರವಣ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಶ್ರವಣ ಆರೈಕೆ ಕುರಿತು ಜಾಗೃತಿ
ಮಾ. 3 ರಂದು ಪ್ರಪಂಚದಾದ್ಯಂತ ವಿಶ್ವ ಶ್ರವಣ ದಿನವನ್ನು ಆಚರಿಸಲಾಗುತ್ತಿದೆ. ಶ್ರವಣ ನ್ಯೂನ್ಯತೆಯನ್ನು ತಡೆಗಟ್ಟಲು ಮತ್ತು ಕಿವಿ ಹಾಗೂ ಶ್ರವಣ ಆರೈಕೆಯ ಬಗ್ಗೆ ಜಾಗೃತಿ ಮೂಡಿಸಲು ವಿಶ್ವ ಆರೋಗ್ಯಸಂಸ್ಥೆ ವಿಶ್ವ ಶ್ರವಣ ದಿನವನ್ನು ಆಚರಿಸುತ್ತದೆ. 2024ರ ವಿಷಯ ಮನಸ್ಥಿತಿಗಳನ್ನು ಬದಲಾಯಿಸಿ, ಸರ್ವರಿಗೂ ಕಿವಿ ಮತ್ತು ಶ್ರವಣ ಆರೈಕೆಯನ್ನು ನಿಜವಾಗಿಸೋಣ, ಭವಿಷ್ಯವನ್ನು ಆಲಿಸಿರಿ ಮತ್ತು ಅದಕ್ಕೆ ತಯಾರಾಗಿರಿ ಎಂಭ ಥೀಮ್ ನೊಂದಿಗೆ ಆಚರಿಸೋಣ ಎಂದು ಹೇಳಿದರು. ಜಿಲ್ಲಾ ಶಸ್ತ್ರ ಚಿಕಿತ್ಸಕಿ ಡಾ.ಮಂಜುಳಾ ದೇವಿ ಮಾತನಾಡಿ, ಜಾಗತಿಕವಾಗಿ ಕಿವಿ ಮತ್ತು ಶ್ರವಣ ಆರೈಕೆಯ ಅಗತ್ಯವಿರುವ ಶೇ.80ರಷ್ಟು ಜನ ಸಮಸ್ಯೆಗಳಿಗೆ ಪರಿಹಾರ ಪಡೆಯುತ್ತಿಲ್ಲ ಎಂದು ವಿಶ್ವ ಸಂಸ್ಥೆ ಗುರುತಿಸಿದೆ. ನ್ಯೂನ್ಯತೆಯ ಬಗ್ಗೆ ಸಾಮಾಜಿಕ ತಪ್ಪುಗ್ರಹಿಕೆಗಳು ಮತ್ತು ಕಳಂಕಿತ ಮನಸ್ಥಿತಿಗಳು ಶ್ರವಣ ನ್ಯೂನ್ಯತೆಯನ್ನು ತಡೆಗಟ್ಟುವ ಮತ್ತು ಪರಿಹರಿಸುವ ಪ್ರಯತ್ನಗಳಿಗೆ ಅಡ್ಡಿಯಾಗುವ ಅಂಶಗಳಾಗಿವೆ. ಹೀಗಾಗಿ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಬೇಕು ಎಂದರು.
ಶ್ರವಣ ಪರೀಕ್ಷೆ ಮಾಡಿಸಿಕೊಳ್ಳಿ
ಸಾರ್ವಜನಿಕರಿಗೆ ಸತ್ಯಾಧಾರಿತ ಮಾಹಿತಿ ನೀಡಬೇಕು. ಕಿವಿ ಮತ್ತು ಶ್ರವಣ ಆರೈಕೆಗೆ ಅಗತ್ಯವಿರುವ ಎಲ್ಲರಿಗೂ ಅತ್ಯಗತ್ಯವಾದ ಆರೋಗ್ಯ ಸೇವೆ ಪಡೆಯುವಂತಾಗಲು ಅವಕಾಶ ದೊರಕಿಸಿಕೊಡಲು ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಶ್ರವಣ ಪರೀಕ್ಷೆಗಾಗಿ ಈ ಮುಂಚೆ ಬೆರ್ರಾ ಯಂತ್ರದಲ್ಲಿನ ಪರೀಕ್ಷೆಗಾಗಿ ಬೆಂಗಳೂರಿನ ನಿಮ್ಮಾನ್ಸ್ ಗೆ ತೆರಳ ಬೇಕಿತ್ತು ಆದರೆ ಈಗ ಜಿಲ್ಲಾಸ್ಪತ್ರೆಯಲ್ಲಿ ಬೆರ್ರಾ ಯಂತ್ರವನ್ನು ಸ್ಥಾಪಿಸಲಾಗಿದೆ. ಇದರ ಸದುಪಯೋಗವನ್ನು ಜನತೆ ಪಡೆಯ ಬೇಕೇಂದು ಮನವಿ ಮಾಡಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಮಹೇಶ್ ಕುಮಾರ್ ಮಾತನಾಡಿ, ಶ್ರವಣ ದೋಷವಿರುವ ಮಕ್ಕಳು ಪಠ್ಯ ಕಲಿಕೆಯಲ್ಲಿ ಹಿಂದೆ ಬೀಳುತ್ತಾರೆ, ಹೆಚ್ಚಿನ ವಯಸ್ಕರು ನಿರುದ್ಯೋಗದ ಸಮಸ್ಯೆ ಎದುರಿಸುತ್ತಾರೆ. ನ್ಯೂನತೆಯು ಖಿನ್ನತೆ ಮತ್ತು ಆತಂಕ ಸೇರಿದಂತೆ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದರು.
ಅರಿವು ಮೂಡಿಸುವ ಉದ್ದೇಶ
ಆದುದರಿಂದ ಈ ವರ್ಷ ವಿಶ್ವ ಶ್ರವಣ ದಿನ ಸಾರ್ವಜನಿಕರು ಮತ್ತು ವೈದ್ಯಕೀಯ ಸೇವೆ ಒದಗಿಸುವವರಲ್ಲಿ ಅರಿವು ಮೂಡಿಸುವುದು ಹಾಗೂ ಸವಾಲುಗಳನ್ನು ನಿವಾರಿಸುವ ಉದ್ದೇಶ ಹೊಂದಿರುವುದಾಗಿ ತಿಳಿಸಿದರು.ಈ ವೇಳೆ ನಿವಾಸಿ ವೈದ್ಯಾಧಿಕಾರಿ ಡಾ. ರಮೇಶ್ , ಕುಟುಂಬ ಕಲ್ಯಾಣಾಧಿಕಾರಿ ಡಾ. ಚಂದ್ರಶೇಖರ್, ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ. ಉಮಾ,ಜಿಲ್ಲಾ ಸಾಂಕಿಕ ಅಧಿಕಾರಿ ಡಾ.ಕೃಷ್ಣಪ್ರಸಾದ್, ತಾಲೂಕು ಆರೋಗ್ಯಾಧಿಕಾರಿ ಡಾ ಮಂಜುಳಾ, ವೈದ್ಯರಾದ ಡಾ. ಪ್ರಕಾಶ್,ಡಾ. ಅನಿಲ್, ಜಿಲ್ಲಾ ನರ್ಸಿಂಗ್ ಆಫೀಸರ್ ಮೀನಾ, ಸರ್ಕಾರಿ ನೌಕರ ಸಂಘದ ಜಿಲ್ಲಾಧ್ಯಕ್ಷ ಹರೀಶ್ ಜಿ, ಮತ್ತಿತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.