ಇಲಾಖೆಗಳ ಮಧ್ಯೆ ಸಮನ್ವಯದ ಕೊರತೆ ಮೀನು ಕೃಷಿಗೆ ಹಿನ್ನಡೆ

KannadaprabhaNewsNetwork |  
Published : Apr 15, 2026, 02:00 AM IST
ಮೀನುಗಾರಿಕೆ ಮಾಡುತ್ತಿರುವ ರೈತರ ಕೆರೆ | Kannada Prabha

ಸಾರಾಂಶ

2024- 25ನೇ ಸಾಲಿನಲ್ಲಿ 10200 ಟನ್ ಮೀನು ಉತ್ಪಾದಿಸಿದ್ದ ಗದಗ ಜಿಲ್ಲೆಯಲ್ಲಿ, ಪ್ರಸಕ್ತ 2025- 26ನೇ ಸಾಲಿನಲ್ಲಿ ಕೇವಲ 7397 ಟನ್‌ ಉತ್ಪಾದನೆ ಮಾಡಿದ್ದು, 2803 ಟನ್‌ನಷ್ಟು ಉತ್ಪಾದನೆಯಲ್ಲಿ ಕುಸಿದಿರುವುದು ಮೀನುಗಾರಿಕೆ ವಲಯದ ಆತಂಕಕ್ಕೆ ಕಾರಣವಾಗಿದೆ.

ಶಿವಕುಮಾರ ಕುಷ್ಟಗಿ

ಗದಗ: ಸಣ್ಣ ನೀರಾವರಿ ಇಲಾಖೆ ಹಾಗೂ ಮೀನುಗಾರಿಕೆ ಇಲಾಖೆಗಳ ನಡುವಿನ ಅಧಿಕಾರ ವ್ಯಾಪ್ತಿಯ ಕಾನೂನು ಹೋರಾಟ ಮತ್ತು ಸಮನ್ವಯದ ಕೊರತೆಯಿಂದಾಗಿ ರಾಜ್ಯಾದ್ಯಂತ ಒಳನಾಡು ಮೀನು ಕೃಷಿಗೆ ಭಾರಿ ಹಿನ್ನಡೆಯುಂಟಾಗಿದೆ.

ಏತ ನೀರಾವರಿ ಕೆರೆಗಳಲ್ಲಿ ಮೀನುಗಾರಿಕೆ ನಡೆಸಲು ಸಣ್ಣ ನೀರಾವರಿ ಇಲಾಖೆಯೇ ಇ- ಟೆಂಡರ್ ಪ್ರಕ್ರಿಯೆ ನಡೆಸಲು ಅನುಮತಿ ಕೋರಿ ಕೋರ್ಟ್ ಮೆಟ್ಟಿಲೇರಿರುವುದರಿಂದ ಜಿಲ್ಲೆ ಹಾಗೂ ರಾಜ್ಯದ ಒಳನಾಡು ಮೀನುಗಾರಿಕೆಯಲ್ಲಿ ಇಳುವರಿ ಗಣನೀಯವಾಗಿ ಕುಸಿಯುವಂತೆ ಮಾಡಿದೆ.2024- 25ನೇ ಸಾಲಿನಲ್ಲಿ 10200 ಟನ್ ಮೀನು ಉತ್ಪಾದಿಸಿದ್ದ ಗದಗ ಜಿಲ್ಲೆಯಲ್ಲಿ, ಪ್ರಸಕ್ತ 2025- 26ನೇ ಸಾಲಿನಲ್ಲಿ ಕೇವಲ 7397 ಟನ್‌ ಉತ್ಪಾದನೆ ಮಾಡಿದ್ದು, 2803 ಟನ್‌ನಷ್ಟು ಉತ್ಪಾದನೆಯಲ್ಲಿ ಕುಸಿದಿರುವುದು ಮೀನುಗಾರಿಕೆ ವಲಯದ ಆತಂಕಕ್ಕೆ ಕಾರಣವಾಗಿದೆ.

ಏನಿದು ಸಮಸ್ಯೆ?: ಈ ಹಿಂದೆ ಪ್ರತಿಯೊಂದು ಜಿಲ್ಲೆಗಳ ವ್ಯಾಪ್ತಿಯಲ್ಲಿರುವ ಎಲ್ಲ ಕೆರೆಗಳಲ್ಲಿ ಮೀನುಗಾರಿಕೆ ನಡೆಸಲು ಮೀನುಗಾರಿಕೆ ಇಲಾಖೆಯ ಅನುಮತಿಯಷ್ಟೇ ಸಾಕಾಗಿತ್ತು. ಜಿಲ್ಲಾ ಮಟ್ಟದಲ್ಲಿ ಖಾಸಗಿ ವ್ಯಕ್ತಿಗಳು ಹಾಗೂ ಸ್ವ- ಸಹಾಯ ಸಂಘಗಳು ಇಲಾಖೆಯಿಂದ ಅನುಮತಿ ಪಡೆದು ಕೆರೆಗಳನ್ನು ಬಳಸಿಕೊಳ್ಳುತ್ತಿದ್ದವು. ಆದರೆ, ಪ್ರಸಕ್ತ ಸಾಲಿನಲ್ಲಿ ಏತ ನೀರಾವರಿ ಕೆರೆಗಳಲ್ಲಿ ಮೀನುಗಾರಿಕೆ ನಡೆಸಲು ಸಣ್ಣ ನೀರಾವರಿ ಇಲಾಖೆಯ ಅನುಮತಿ ಕಡ್ಡಾಯಗೊಳಿಸಲಾಗಿದೆ. ಇದು ಮೀನುಗಾರರಿಗೆ, ಸ್ವ ಸಹಾಯ ಸಂಘಗಳಿಗೆ ಈ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ತೀವ್ರ ಸಮಸ್ಯೆಗೆ ಕಾರಣವಾಗಿದೆ.ಜಿಲ್ಲೆಯ ವಿವರ: ಜಿಲ್ಲೆಯ ಜಂತ್ಲಿಶಿರೂರು, ಬರದೂರು, ಹಿರೇವಡ್ಡಟ್ಟಿ, ಬಟ್ಟೂರು, ಛಬ್ಬಿ ಹಾಗೂ ಗದಗ ಭೀಷ್ಮ ಕೆರೆ ಸೇರಿದಂತೆ 1044 ಹೆಕ್ಟೇರ್ ವ್ಯಾಪ್ತಿಯ 15 ಏತ ನೀರಾವರಿ ಕೆರೆಗಳು ಈಗ ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಗೆ ಸೇರುತ್ತಿವೆ. ಈ ಕೆರೆಗಳಿಗೆ ನದಿ ಪಾತ್ರದಿಂದ ನೀರು ತುಂಬಿಸಲು ನೀರಾವರಿ ಇಲಾಖೆ ಪ್ರತಿವರ್ಷ ಕೋಟ್ಯಂತರ ರುಪಾಯಿ ಅನುದಾನ ವ್ಯಯಿಸುತ್ತಿದೆ. ಹೀಗಾಗಿ ಮೀನುಗಾರಿಕೆಯಿಂದ ಬರುವ ಲಾಭವು ಸಣ್ಣ ನೀರಾವರಿ ಇಲಾಖೆಗೆ ಬರಬೇಕು ಎಂಬ ಉದ್ದೇಶದಿಂದ ನೀರಾವರಿ ಇಲಾಖೆಯು ಮೀನುಗಾರಿಕೆ ಇಲಾಖೆಯ ವಿರುದ್ಧ ನ್ಯಾಯಾಲಯದಲ್ಲಿ ನಿರ್ಬಂಧ ಹೇರಿದೆ. ಇದರಿಂದಾಗಿ ಏತ ನೀರಾವರಿ ಕೆರೆಗಳಲ್ಲಿ ಮೀನು ಕೃಷಿ ಚಟುವಟಿಕೆಗಳು ಸ್ಥಗಿತಗೊಂಡಿದ್ದು, ಕೇವಲ ಗ್ರಾಪಂ ಮತ್ತು ಜಿಪಂ ವ್ಯಾಪ್ತಿಯ ಕೆರೆಗಳಲ್ಲಿ ಮಾತ್ರ ಕೃಷಿ ಮುಂದುವರಿಯುತ್ತಿದೆ.

ನಿಯಮ ಏನು ಹೇಳುತ್ತದೆ?: 2014ರ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಅಧಿನಿಯಮ 2018ರ ಸೆಕ್ಷನ್ 5/1ರ ಅನ್ವಯ ನೀರಾವರಿ ಇಲಾಖೆಯು ತನ್ನ ಹಕ್ಕನ್ನು ಪ್ರತಿಪಾದಿಸುತ್ತಿದೆ. ಆದರೆ ಇದರ ಪರಿಣಾಮ ರಾಜ್ಯದ ಪ್ರತಿಯೊಂದು ಜಿಲ್ಲೆಯಂತೆ ಗದಗ ಜಿಲ್ಲೆಗೂ ತಟ್ಟಿದ್ದು, ಜಿಲ್ಲೆಯಲ್ಲಿ ಮೀನುಗಾರಿಕೆಗೆ ಉತ್ತಮ ಪರಿಸರ ಇದ್ದರೂ ಇಲಾಖೆಗಳ ನಡುವಿನ ಗೊಂದಲದಿಂದಾಗಿ ಏತ ನೀರಾವರಿ ಕೆರೆಗಳಲ್ಲಿ ಕೃಷಿ ಮಾಡಲು ಸಾಧ್ಯವಾಗುತ್ತಿಲ್ಲ. ಸರ್ಕಾರದ ಮಟ್ಟದಲ್ಲಿ ಈ ಸಮಸ್ಯೆ ಬಗೆಹರಿದು ಹೆಚ್ಚಿನ ಅನುದಾನ ದೊರೆತರೆ ಮಾತ್ರ ಜಿಲ್ಲೆಯಲ್ಲಿ ಮೀನುಗಾರಿಕೆ ಮತ್ತೆ ಚೇತರಿಸಿಕೊಳ್ಳಲು ಸಾಧ್ಯ ಎಂಬ ಮಾತುಗಳು ಮೀನುಗಾರಿಕೆ ಮಾಡುವವರು ಮತ್ತು ಸ್ವಸಹಾಯ ಸಂಘಗಳಿಂದ ಕೇಳಿ ಬರುತ್ತಿವೆ.ಜಿಲ್ಲೆಯಲ್ಲಿ ಮೀನುಗಾರಿಕೆ ಕೃಷಿಗೆ ಉತ್ತಮ ವಾತಾವರಣವಿದೆ. ಆದರೆ ನೀರಾವರಿ ಇಲಾಖೆಯ ನಿಯಮಗಳಿಂದ ಏತ ನೀರಾವರಿ ಕೆರೆಗಳಲ್ಲಿ ಕೃಷಿ ನಡೆಸಲು ಸಾಧ್ಯವಾಗುತ್ತಿಲ್ಲ. ಇ- ಟೆಂಡರ್ ಮೂಲಕ ನಾವೇ ನಿರ್ವಹಣೆ ಮಾಡುತ್ತೇವೆ ಎಂದು ಅವರು ಕೋರ್ಟ್ ಮೆಟ್ಟಿಲೇರಿದ್ದಾರೆ. ಸರ್ಕಾರ ಹೆಚ್ಚಿನ ಅನುದಾನ ನೀಡಿ ಈ ಗೊಂದಲ ಬಗೆಹರಿಸಿದರೆ ಮೀನುಗಾರಿಕೆಗೆ ಅನುಕೂಲವಾಗುತ್ತದೆ ಎಂದು ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕ ನಾಗರಾಜ ಸಿ. ತಿಳಿಸಿದರು.ಪುನಶ್ಚೇತನ ನೀಡಲಿ: ಸರ್ಕಾರದ ಎರಡು ಪ್ರಮುಖ ಇಲಾಖೆಗಳ ನಡುವಿನ ಸಮನ್ವಯದ ಕೊರತೆಯಿಂದಾಗಿ ಬಯಲುಸೀಮೆಯ ಭಾಗದಲ್ಲಿ ಅದರಲ್ಲಿಯೂ ಗ್ರಾಮೀಣ ಭಾಗದ ಮೀನುಗಾರರಿಗೆ ತೀವ್ರ ತೊಂದರೆಯಾಗಿದೆ. ಸರ್ಕಾರಗಳು ಕೇವಲ ಮೀನುಗಾರಿಕೆ ಬಗ್ಗೆ ಮಾತನಾಡುತ್ತದೆ. ಆದರೆ ಇಲಾಖೆಗಳ ನಡುವಿನ ಈ ಕಾನೂನು ತೊಡಕನ್ನು ನಿವಾರಿಸಿ, ಗ್ರಾಮೀಣ ಭಾಗದಲ್ಲಿನ ಮೀನು ಕೃಷಿಗೆ ಪುನಶ್ಚೇತನ ನೀಡುವತ್ತ ಗಮನ ನೀಡಬೇಕಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೋಷಿತರ ಏಳ್ಗೆಗೆ ಶ್ರಮಿಸಿದ ಅಂಬೇಡ್ಕರ್-ಶಾಸಕ ಬಣಕಾರ
ಅಂಬೇಡ್ಕರ್‌ ಹೆಸರಿನಲ್ಲಿ ಸುಸಜ್ಜಿತ ಗ್ರಂಥಾಲಯ ಸ್ಥಾಪನೆ: ನಾರಾ ಭರತ್ ರೆಡ್ಡಿ