ಬಸರಾಳು ನಾಡಕಚೇರಿಯಲ್ಲಿ ಸೌಲಭ್ಯಗಳ ಕೊರತೆ..!

KannadaprabhaNewsNetwork |  
Published : Apr 21, 2026, 01:30 AM IST
೨೦ಕೆಎಂಎನ್‌ಡಿ-೩ಮಂಡ್ಯ ತಾಲೂಕು ಬಸರಾಳು ನಾಡಕಚೇರಿ ಸಮೀಪ ಬಿಸಿಲಿನಲ್ಲೇ ನಿಂತು ಜಮೀನಿಗೆ ಸಂಬಂಧಿಸಿದ ದಾಖಲೆಗಳನ್ನು ಪಡೆಯುತ್ತಿರುವ ಜನರು. | Kannada Prabha

ಸಾರಾಂಶ

ಬೇಸಿಗೆಯ ಬಿಸಿಲು ಬೆಂಕಿ ಕೆಂಡದಂತೆ ಸುಡುತ್ತಿದೆ. ಬಿಸಿಲಿನಲ್ಲೂ ಸ್ವಲ್ಪ ಹೊತ್ತು ನಿಲ್ಲುವುದಕ್ಕೂ ಭಯಪಡುವಂತಹ ಸ್ಥಿತಿ ಇದೆ. ಆದರೂ ತಾಲೂಕಿನ ಬಸರಾಳು ಒಂದನೇ ವೃತ್ತದ ನಾಡಕಚೇರಿ ಬಳಿ ನೆರಳಿನ ಕೊರತೆಯಿಂದ ಸಾರ್ವಜನಿಕರು ಬಿಸಿಲಿನಲ್ಲೇ ನಿಂತು ಜಮೀನಿಗೆ ಸಂಬಂಧಿಸಿದ ದಾಖಲೆಗಳನ್ನು ಪಡೆಯುವುದು ಅನಿವಾರ್ಯವಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಬೇಸಿಗೆಯ ಬಿಸಿಲು ಬೆಂಕಿ ಕೆಂಡದಂತೆ ಸುಡುತ್ತಿದೆ. ಬಿಸಿಲಿನಲ್ಲೂ ಸ್ವಲ್ಪ ಹೊತ್ತು ನಿಲ್ಲುವುದಕ್ಕೂ ಭಯಪಡುವಂತಹ ಸ್ಥಿತಿ ಇದೆ. ಆದರೂ ತಾಲೂಕಿನ ಬಸರಾಳು ಒಂದನೇ ವೃತ್ತದ ನಾಡಕಚೇರಿ ಬಳಿ ನೆರಳಿನ ಕೊರತೆಯಿಂದ ಸಾರ್ವಜನಿಕರು ಬಿಸಿಲಿನಲ್ಲೇ ನಿಂತು ಜಮೀನಿಗೆ ಸಂಬಂಧಿಸಿದ ದಾಖಲೆಗಳನ್ನು ಪಡೆಯುವುದು ಅನಿವಾರ್ಯವಾಗಿದೆ.

ಈ ನಾಡ ಕಚೇರಿಗೆ ನಿತ್ಯ ೩೧ ಹಳ್ಳಿಗಳಿಂದ ತಮ್ಮ ಜಮೀನುಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಪಡೆದುಕೊಳ್ಳುವುದಕ್ಕೆ ರೈತರು ಬರುತ್ತಾರೆ. ದಾಖಲೆಗಳನ್ನು ನೀಡುವ ಸ್ಥಳದಲ್ಲಿ ಕಬ್ಬಿಣದ ಕಂಬಿಗಳನ್ನು ಹಾಕಿ ಮೇಲ್ಛಾವಣಿಗೆ ಕಬ್ಬಿಣದ ಶೀಟುಗಳನ್ನು ಅಳವಡಿಸಿ ನೆರಳಿನ ವ್ಯವಸ್ಥೆ ಕಲ್ಪಿಸುವುದಕ್ಕೆ ಪಂಚಾಯ್ತಿಯವರು ಆಸಕ್ತಿ ತೋರಿಲ್ಲ.

ಆರ್‌ಟಿಸಿ, ಎಂಆರ್, ಸ್ಕೆಚ್, ವಂಶವೃಕ್ಷ, ವ್ಯವಸಾಯ ದೃಢೀಕರಣ ಪತ್ರ, ಆದಾಯ ಪ್ರಮಾಣಪತ್ರ, ವೃದ್ಧಾಪ್ಯ, ಅಂಗವಿಕಲ, ವಿಧವಾ ವೇತನ ಸೇರಿದಂತೆ ಭೂಮಿಗೆ ಸಂಬಂಧಿಸಿದ ಹಲವು ದಾಖಲೆಗಳಿಗಾಗಿ ಜನರು ನಾಡಕಚೇರಿಗೆ ಬರುತ್ತಿದ್ದಾರೆ. ನೆರಳಿನ ವ್ಯವಸ್ಥೆ ಇಲ್ಲದ ಕಾರಣ ಬಿಸಿಲಿನಲ್ಲೇ ನಿಂತು ದಾಖಲೆಗಳನ್ನು ಪಡೆದುಕೊಳ್ಳುತ್ತಿದ್ದಾರೆ. ನಾಡಕಚೇರಿಯಲ್ಲಿ ಇಂಟರ್‌ನೆಟ್ ವ್ಯವಸ್ಥೆಯಿಲ್ಲ. ಸಿಬ್ಬಂದಿ ಮೊಬೈಲ್‌ನಲ್ಲೇ ಸಂಪರ್ಕ ಪಡೆದುಕೊಂಡು ಕಾರ್ಯನಿರ್ವಹಿಸುತ್ತಿದ್ದಾರೆ. ಯುಪಿಎಸ್ ಸೌಲಭ್ಯವಿಲ್ಲದ ಕಾರಣ ವಿದ್ಯುತ್ ಅಡಚಣೆಯಾದಾಗಲೆಲ್ಲಾ ದಾಖಲೆಗಳನ್ನು ಪಡೆಯಲು ಜನರು ಕಾದುಕೂರುವುದು ಸಾಮಾನ್ಯವಾಗಿದೆ.

ಹಳೇ ಕಟ್ಟಡದಲ್ಲಿದ್ದ ನಾಡ ಕಚೇರಿ ಹೊಸ ಕಟ್ಟಡಕ್ಕೆ ವರ್ಗಾವಣೆಗೊಂಡರೂ ಸೂಕ್ತ ಸೌಲಭ್ಯಗಳಿಲ್ಲ. ಸೌಲಭ್ಯಗಳಿಲ್ಲದ ಕಾರಣ ಸಾರ್ವಜನಿಕ ಕೆಲಸಗಳು ವಿಳಂಬವಾಗಿ ಸಾಗುತ್ತಿವೆ. ವೃದ್ಧಾಪ್ಯ ವೇತನ ಪಡೆಯುವವರು ಬಯೋಮೆಟ್ರಿಕ್ ನೀಡುವುದು ಅನಿವಾರ್ಯವಾಗಿದೆ. ಆದರೆ, ಅಂತರ್ಜಾಲ ವ್ಯವಸ್ಥೆಯೇ ಇಲ್ಲದಿರುವುದರಿಂದ ಸುಗಮವಾಗಿ ಕೆಲಸಗಳು ಸಾಗದಂತಾಗಿದೆ. ಇದರಿಂದ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಸಾರ್ವಜನಿಕರು ದಾಖಲೆಗಳನ್ನು ಪಡೆಯುವ ಸ್ಥಳದಲ್ಲಿ ಜಾಗ ಇಲ್ಲ ಎಂದೇನಲ್ಲ. ಸಾಕಷ್ಟು ವಿಶಾಲವಾದ ಜಾಗವಿದ್ದು ನೆರಳಿನ ವ್ಯವಸ್ಥೆ ಕಲ್ಪಿಸುವುದಕ್ಕೆ ಯಾವ ಅಡಚಣೆಯೂ ಇಲ್ಲ. ಕಚೇರಿ ಪ್ರವೇಶದ್ವಾರದಲ್ಲಿ ನೆರಳಿದ್ದರೂ ದಾಖಲೆಗಳನ್ನು ನೀಡುವ ಜಾಗದಲ್ಲಿ ಇಲ್ಲದಿರುವುದರಿಂದ ಜನರಿಗೆ ತೊಂದರೆಯಾಗಿದೆ. ನಾಡ ಕಚೇರಿಗೆ ಬರುವ ಜನರು ಕುಳಿತುಕೊಳ್ಳಲು ಒಂದು ಕುರ್ಚಿ ಹಾಕಲಾಗಿದೆ. ಕುಡಿಯುವ ನೀರನ್ನು ಜನರಿಗಾಗಿ ಕ್ಯಾನ್‌ಗಳಲ್ಲಿ ಇಡಲಾಗಿದೆ. ಅದೇ ರೀತಿ ನೆರಳಿನ ವ್ಯವಸ್ಥೆ ಕಲ್ಪಿಸಿಕೊಟ್ಟರೆ ಜನರು ಬಿಸಿಲಿನಲ್ಲಿ ಒಣಗುವುದು ತಪ್ಪಲಿದೆ.

ನಾಡ ಕಚೇರಿಗೆ ವಿವಿಧ ದಾಖಲೆಗಳನ್ನು ಪಡೆಯಲು ಯಾವಾಗಲೂ ಜನರು ಇರುವುದರಿಂದ ಅಂತರ್ಜಾಲ ವ್ಯವಸ್ಥೆ, ಯುಪಿಎಸ್ ಸೌಲಭ್ಯಗಳನ್ನು ಕಲ್ಪಿಸಿಕೊಡುವುದರ ಜೊತೆಗೆ ನೆರಳಿಗಾಗಿ ಗಿಡ-ಮರಗಳನ್ನು ಬೆಳೆಸುವುದು, ಕಬ್ಬಿಣದ ಶೀಟುಗಳನ್ನು ಅಳವಡಿಸಿ ಅನುಕೂಲ ಕಲ್ಪಿಸಿಕೊಡಬೇಕು ಎನ್ನುವುದು ಬಸರಾಳು ಗ್ರಾಮದ ಜನರ ಆಗ್ರಹವಾಗಿದೆ.

ಇದು ಬೇಸಿಗೆ ಸಮಯ. ಬಿಸಿಲಿನ ಝಳ ಜೋರಾಗಿದೆ. ನಾಡಕಚೇರಿ ಬಳಿ ನೆರಳಿಲ್ಲದೆ ವಯಸ್ಸಾದವರು ಸೇರಿದಂತೆ ಎಲ್ಲರೂ ಬಿಸಿಲಿನಲ್ಲೇ ನಿಂತು ದಾಖಲೆ ಪಡೆಯುತ್ತಿದ್ದಾರೆ. ಬಿಸಿಲ ಝಳದಿಂದ ಯಾರಿಗಾದರೂ ಹೆಚ್ಚು-ಕಡಿಮೆಯಾದರೆ ಯಾರು ಹೊಣೆ. ಜೊತೆಗೆ ನಾಡಕಚೇರಿಯಲ್ಲಿ ಇಂಟರ್‌ನೆಟ್, ಯುಪಿಎಸ್ ವ್ಯವಸ್ಥೆ ಇಲ್ಲ. ವಿದ್ಯುತ್ ಯಾವಾಗಲೂ ಇರುವುದಿಲ್ಲ. ಹೀಗಾಗಿ ಹೊಸ ಕಟ್ಟಡಕ್ಕೆ ಬಂದರೂ ಜನರ ಬವಣೆ ತೀರದಾಗಿದೆ. ಶಾಸಕರು ಶೀಘ್ರವೇ ಇತ್ತ ಗಮನಹರಿಸಲಿ.

- ಪಟೇಲ್ ಆನಂದ್, ಮಾಜಿ ಅಧ್ಯಕ್ಷರು, ಕೃಷಿ ಪತ್ತಿನ ಸಹಕಾರ ಸಂಘ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಸವಣ್ಣನವರ ವಚನಗಳು ವಿಶ್ವದ ಸಮಸ್ಯೆಗಳಿಗೆ ಪರಿಹಾರ: ಡಾ.ಕುಮಾರ
ಬಸವಣ್ಣನವರ ತತ್ವಗಳು ಸಮಾನತೆಗೆ ದಾರಿದೀಪ