ಮಂಜುನಾಥ ಕೆ.ಎಂ.
ಬಳ್ಳಾರಿ : ಆಯುರ್ವೇದ ಚಿಕಿತ್ಸಾ ಪದ್ಧತಿಯಲ್ಲಿ ಉನ್ನತ ಶಿಕ್ಷಣ ಪಡೆಯುವ ಆಸ್ಥೆ ಹೊಂದಿರುವ ವಿದ್ಯಾರ್ಥಿಗಳಿಗೆ ಇದು ಆತಂಕ ತರುವ ಸುದ್ದಿ!
ಕಲ್ಯಾಣ ಕರ್ನಾಟಕದ ಏಕೈಕ ಸರ್ಕಾರಿ ಆಯುರ್ವೇದ ಕಾಲೇಜು ಎಂಬ ಹೆಗ್ಗಳಿಕೆ ಹೊಂದಿರುವ ನಗರದ ತಾರಾನಾಥ ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಹೆಚ್ಚಿದ ಬೋಧಕ-ಬೋಧಕೇತರ ಸಿಬ್ಬಂದಿ ಕೊರತೆಯಿಂದಾಗಿ ವಿದ್ಯಾರ್ಥಿಗಳ ಪ್ರವೇಶಾತಿ ಸಂಖ್ಯೆಯನ್ನು ಕಡಿತಗೊಳಿಸಿ ಭಾರತೀಯ ವೈದ್ಯಪದ್ಧತಿಗಳ ರಾಷ್ಟ್ರೀಯ ಆಯೋಗ (ಎನ್‌ಸಿಐಎಂ) ಜೂ.30ರಂದು ಆದೇಶ ಹೊರಡಿಸಿದ್ದು ಇದರಿಂದ ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳ ಆಯುರ್ವೇದ ಶಿಕ್ಷಣ ಪಡೆಯುವ ಆಶಯಕ್ಕೆ ಕೊಡಲಿ ಪೆಟ್ಟು ಬಿದ್ದಿದೆ.
ದಿನದಿನಕ್ಕೆ ಆಯುರ್ವೇದ ವೈದ್ಯ ಪದ್ಧತಿಗೆ ಹೆಚ್ಚಿನ ಬೇಡಿಕೆ ಬರುತ್ತಿರುವುದರಿಂದ ಕಲ್ಯಾಣ ಕರ್ನಾಟಕದ ಭಾಗದ ವಿದ್ಯಾರ್ಥಿಗಳು ಪಾರಂಪರಿಕ ವೈದ್ಯ ಪದ್ಧತಿಗೆ ಆಸಕ್ತಿ ವಹಿಸುತ್ತಿರುವ ನಡುವೆ ತಾರಾನಾಥ ಸರ್ಕಾರಿ ಆಯುರ್ವೇದ ಕಾಲೇಜಿನಲ್ಲಿ ಬಿಎಎಂಎಸ್ ಪ್ರವೇಶ ಸಂಖ್ಯೆಯನ್ನು ಮಿತಿಗೊಳಿಸಿರುವುದು ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ನುಂಗದ ತುತ್ತಾಗಿ ಪರಿಣಮಿಸಿದೆ.
ವಿಪರ್ಯಾಸ ಸಂಗತಿ ಎಂದರೆ ಈ ಭಾಗದ ಸಚಿವರು, ಸಂಸದರು ಹಾಗೂ ಶಾಸಕರು ಆಯುರ್ವೇದ ಚಿಕಿತ್ಸೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಸೇವೆ ನೀಡುತ್ತಿರುವ ತಾರಾನಾಥ ಆಯುರ್ವೇದ ಕಾಲೇಜಿನ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸುತ್ತಿಲ್ಲ. ಹೀಗಾಗಿ ಈ ಭಾಗದ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಿಮುಖಗೊಳ್ಳುವಂತಾಗಿದೆ.
ಪ್ರವೇಶಾತಿ ಕಡಿತ ಎಷ್ಟು?:
ತಾರಾನಾಥ ಸರ್ಕಾರಿ ಆಯುರ್ವೇದ ಕಾಲೇಜಿನಲ್ಲಿ ಪ್ರತಿವರ್ಷ ಬಿಎಎಂಎಸ್ ಕೋರ್ಸ್‌ಗೆ 60 ಜನರಿಗೆ ಪ್ರವೇಶಾತಿ ಇತ್ತು. ಭಾರತೀಯ ವೈದ್ಯಪದ್ಧತಿಗಳ ರಾಷ್ಟ್ರೀಯ ಆಯೋಗದ ನಿಯಮ ಪ್ರಕಾರ 60 ಬಿಎಎಂಎಸ್ ಹಾಗೂ 31 ಪಿಜಿ ಕೋರ್ಸ್‌ಗೆ ವಿದ್ಯಾರ್ಥಿಗಳಿಗೆ ಪ್ರವೇಶಾತಿ ನೀಡಲು ಕನಿಷ್ಠ 36 ಜನ ಬೋಧಕ ಸಿಬ್ಬಂದಿ ಇರಲೇಬೇಕು. ಬೋಧಕೇತರ ಸಿಬ್ಬಂದಿ ಇಂತಿಷ್ಟೆಂದು ಕಡ್ಡಾಯವಾಗಿ ಇರಬೇಕು. ಆದರೆ, ಕಾಲೇಜಿನಲ್ಲಿ ಸದ್ಯ 27 ಜನ ಬೋಧಕ ಸಿಬ್ಬಂದಿ ಮಾತ್ರ ಇದ್ದು, ಈ ಪೈಕಿ ಐವರು ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ನರ್ಸ್, ಲ್ಯಾಬ್ ಟೆಕ್ನಿಷಿನ್, ಲ್ಯಾಬ್ ಅಸಿಸ್ಟೆಂಟ್, ಎಕ್ಸರೇ ಟೆಕ್ನಿಷನ್ ಸೇರಿದಂತೆ ವಿವಿಧ ಹುದ್ದೆಗಳು ಭರ್ತಿಯಾಗದೆ ಉಳಿದಿವೆ. ಬಿಎಎಂಎಸ್ ಕೋರ್ಸ್‌ಗೆ ವಿದ್ಯಾರ್ಥಿಗಳ ಪ್ರವೇಶಾತಿ ಕಡಿತಕ್ಕೆ ಬೋಧಕ ಸೇರಿದಂತೆ ಬೋಧಕೇತರ ಸಿಬ್ಬಂದಿ ಭರ್ತಿ ಮಾಡಿಕೊಳ್ಳದಿರುವುದನ್ನು ಪರಿಗಣಿಸಿ, ಭಾರತೀಯ ವೈದ್ಯ ಪದ್ಧತಿಗಳ ರಾಷ್ಟ್ರೀಯ ಆಯೋಗ ವಿದ್ಯಾರ್ಥಿ ಪ್ರವೇಶಾತಿಗೆ ಕೊಕ್ಕೆ ಹಾಕಿದೆ. ಬಿಎಎಂಎಸ್‌ಗೆ 24 ಪ್ರವೇಶಾತಿ ಕಡಿತಗೊಳಿಸಿದೆ.
ವರ್ಷದಿಂದ ವರ್ಷಕ್ಕೆ ಬೋಧಕರ ಕೊರತೆ ಪ್ರಮಾಣ ಹೆಚ್ಚುತ್ತಲೇ ಇದ್ದರೂ ಈ ಭಾಗದ ಜನಪ್ರತಿನಿಧಿಗಳ ನಿರಾಸಕ್ತಿಯಿಂದ ಕಾಲೇಜಿಗೆ ಪೂರ್ಣ ಪ್ರಮಾಣದಲ್ಲಿ ಬೋಧಕ ಸಿಬ್ಬಂದಿ ಈವರೆಗೆ ನೇಮಕವಾಗಿಲ್ಲ ಎಂಬ ಕೂಗಿಗೆ ಈ ಭಾಗದ ಜನಪ್ರತಿನಿಧಿಗಳು ಗಮನ ಹರಿಸದಿರುವುದು ಉನ್ನತ ಶಿಕ್ಷಣ ಪಡೆಯುವ ಆಸೆ ಹೊತ್ತ ವಿದ್ಯಾರ್ಥಿಗಳಿಗೆ ಮಾರಕವಾಗಿ ಪರಿಣಮಿಸಿದೆ.
ಗುಣಮಟ್ಟದ ಚಿಕಿತ್ಸೆಗೆ ಹೆಸರುವಾಸಿ ಬಳ್ಳಾರಿ ತಾರಾನಾಥ ಕಾಲೇಜು
ಬಳ್ಳಾರಿಯ ತಾರಾನಾಥ ಸರ್ಕಾರಿ ಆಯುರ್ವೇದ ಕಾಲೇಜು ಗುಣಮಟ್ಟದ ಚಿಕಿತ್ಸೆಗೆ ಹೆಸರಾಗಿದೆ. ನಿತ್ಯ 350ರಿಂದ 400 ಜನ ಹೊರ ರೋಗಿಗಳು ಬರುತ್ತಾರೆ. 100 ಹಾಸಿಗಳ ಆಸ್ಪತ್ರೆಯಿದ್ದು 85ರಿಂದ 90 ಹಾಸಿಗೆಗಳು ಸದಾ ಭರ್ತಿಯಾಗಿರುತ್ತದೆ.
ಬಳ್ಳಾರಿ, ರಾಯಚೂರು, ಕೊಪ್ಪಳ ಸೇರಿದಂತೆ ಆಂಧ್ರಪ್ರದೇಶ ಹಾಗೂ ತೆಲಂಗಾಣದ ಶ್ರೀಕಾಕುಳಂ, ಭದ್ರಾಚಲಂ, ದ್ರೋಣಾಚಲಂ, ರಾಯಲಸೀಮೆಯ ಜಿಲ್ಲೆಗಳ ಜನರು ಬರುತ್ತಾರೆ. ಪೈಲ್ಸ್, ಸಂಧಿವಾತ, ಪಾರ್ಶ್ವವಾಯು ಕಾಯಿಲೆಗೆ ಇಲ್ಲಿ ಗುಣಮಟ್ಟದ ಚಿಕಿತ್ಸೆ ಸಿಗುವುದರಿಂದ ಕರ್ನಾಟಕ ಹಾಗೂ ಆಂಧ್ರ, ತೆಲಂಗಾಣ ರಾಜ್ಯಗಳ ರೋಗಿಗಳು ಬಳ್ಳಾರಿಯತ್ತ ಮುಖವೊಡ್ಡುತ್ತಾರೆ. ಜಿಲ್ಲಾ ಖನಿಜ ನಿಧಿ (ಡಿಎಂಎಫ್), ಕರ್ನಾಟಕ ಗಣಿಪರಿಸರ ಪುನಶ್ಚೇತನ ನಿಗಮ (ಕೆಎಂಇಆರ್‌ಸಿ), ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ನೀಡುವ ಅನುದಾನದಿಂದ ಕಾಲೇಜು ಭೌತಿಕವಾಗಿ ಪ್ರಗತಿ ಕಂಡುಕೊಂಡಿದೆಯಾದರೂ ಬೋಧಕ ಸಿಬ್ಬಂದಿ ಕೊರತೆ ನೀಗಿಸಿಕೊಳ್ಳಲು ಈವರೆಗೆ ಸಾಧ್ಯವಾಗಿಲ್ಲ.