ಸರ್ಕಾರ ಎಲ್ಲರನ್ನೂ ಸಮಾನವಾಗಿ ಕಾಣಬೇಕು: ಕೆಪಿಸಿಸಿ ನಿಯೋಗಕ್ಕೆ ಪುತ್ತಿಗೆ ಸ್ವಾಮೀಜಿ ಸಲಹೆ

KannadaprabhaNewsNetwork |  
Published : Jul 02, 2025, 11:48 PM IST
32 | Kannada Prabha

ಸಾರಾಂಶ

ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಕೋಮು ಸೌಹಾರ್ದದ ಬಗ್ಗೆ ಅಧ್ಯಯನಕ್ಕೆ ಬಂದಿರುವ ಕೆಪಿಸಿಸಿ ಸತ್ಯಶೋಧನಾ ನಿಯೋಗವು ಉಡುಪಿ ಕೃಷ್ಣಮಠದಲ್ಲಿ ಪರ್ಯಾಯ ಶ್ರೀಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿತು.

ಕನ್ನಡಪ್ರಭ ವಾರ್ತೆ ಉಡುಪಿರಾಜ್ಯದ ಎಲ್ಲಾ ಜನತೆಯನ್ನೂ ಸರ್ಕಾರ ಸಮಾನವಾಗಿ ಕಾಣಬೇಕು, ರಾಜಕೀಯ ಮತ್ತು ಧರ್ಮವನ್ನು ಪ್ರತ್ಯೇಕವಾಗಿ ನೋಡಬೇಕು, ರಾಜಕೀಯದಲ್ಲಿ ಧರ್ಮವನ್ನು ಬೆರೆಸಬಾರದು, ಧರ್ಮದಲ್ಲಿ ರಾಜಕೀಯ ಹಸ್ತಕ್ಷೇಪ ಮಾಡಬಾರದು ಎಂದು ಉಡುಪಿ ಕೃಷ್ಣಮಠದಲ್ಲಿ ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಕೆಪಿಸಿಸಿ ನಿಯೋಗಕ್ಕೆ ಸಲಹೆ ಮಾಡಿದ್ದಾರೆ.

ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಕೋಮು ಸೌಹಾರ್ದದ ಬಗ್ಗೆ ಅಧ್ಯಯನಕ್ಕೆ ಬಂದಿರುವ ಕೆಪಿಸಿಸಿ ಸತ್ಯಶೋಧನಾ ನಿಯೋಗವು ಉಡುಪಿ ಕೃಷ್ಣಮಠದಲ್ಲಿ ಪರ್ಯಾಯ ಶ್ರೀಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿತು.

ಈ ಸಂದರ್ಭ ಮಾತನಾಡಿದ ಶ್ರೀಗಳು, ಯಾವುದೇ ಧರ್ಮ ಜಾತಿಯನ್ನು ಪ್ರಚೋದನೆ ಮಾಡುವಂತಹ ಯಾವುದೇ ಘಟನೆಗಳು ಸಮಾಜದಲ್ಲಿ ನಡೆಯಬಾರದು, ಸುಳ್ಳು ಸುಳ್ಳು ಮಾಹಿತಿ ಹಬ್ಬಿಸಿ ಜನರನ್ನು ತಪ್ಪು ದಾರಿಗೆ ಎಳೆಯುವ ಕೆಲಸ ಆಗಬಾರದು ಎಂದರು.

ಕೋಮು ವಿಚಾರದ ಘಟನೆಗಳು ಪ್ರತ್ಯೇಕ ನ್ಯಾಯಾಲಯದಲ್ಲಿ ವಿಚಾರಣೆ ಆಗಬೇಕು, ಇದರಿಂದ ಶೀಘ್ರ ನ್ಯಾಯ ವಿತರಣೆ ಸಾಧ್ಯವಾಗುತ್ತದೆ, ಶೀಘ್ರ ನ್ಯಾಯ ಸಿಕ್ಕರೆ ಇಂತಹ ದುರ್ಘಟನೆಗಳು ನಡೆಯುವುದಿಲ್ಲ ಎಂದಭಿಪ್ರಾಯಪಟ್ಟರು.ಕೃಷ್ಣಮಠದ ಈ ಬಾರಿಯ ಅಷ್ಟಮಿಯ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಿದ್ದೇವೆ. ಅವರು ಬಂದರೆ ಸಮಾಜಕ್ಕೆ ಉತ್ತಮ ಸಂದೇಶ ಹೋಗುತ್ತದೆ ಎಂದೂ ಶ್ರೀಗಳು ನಿಯೋಗಕ್ಕೆ ತಿಳಿಸಿದರು.

ನಿಯೋಗದ ವತಿಯಿಂದ ಶ್ರೀಗಳನ್ನು ಗೌರವಿಸಲಾಯಿತು, ಶ್ರೀಗಳು ನಿಯೋಗದ ಸದಸ್ಯರನ್ನು ಸನ್ಮಾನಿಸಿದರು. ಎಐಸಿಸಿ ಪ್ರಧಾನ ಕಾರ್ಯದರ್ಶಿ ಡಾ.ನಾಸಿರ್ ಹುಸೇನ್ ನಿಯೋಗದ ನೇತೃತ್ವ ವಹಿಸಿದ್ದರು, ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ, ಪಕ್ಷದ ಪ್ರಮುಖರಾದ ವಿ. ಆರ್ .ಸುದರ್ಶನ್, ಎನ್.ಎ.ಹ್ಯಾರಿಸ್, ಜಯಪ್ರಕಾಶ್ ಹೆಗ್ಡೆ, ಕಿಮ್ಮನೆ ರತ್ನಾಕರ್ ತಂಡದಲ್ಲಿದ್ದರು.

ನಿಯೋಗವು ಉಡುಪಿ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಜೊತೆ ಸಭೆ ನಡೆಸಿತು. ಉಡುಪಿ ಕ್ರೈಸ್ತ ಧರ್ಮ ಪ್ರಾಂತ್ಯದ ಬಿಷಪ್ ಡಾ. ಜೆರಾಲ್ಡ್ ಲೋಬೋ ಹಾಗೂ ಕ್ರೈಸ್ತ ಸಮುದಾಯದ ಮುಖಂಡರ, ಉಡುಪಿ ಜಾಮೀಯ ಮಸೀದಿಯಲ್ಲಿ ಮುಸ್ಲಿಂ ಧರ್ಮಗುರುಗಳು ಹಾಗೂ ನಾಯಕರ ಸಲಹೆಗಳನ್ನು ಪಡೆದುಕೊಂಡಿತು.

ಆಟೋ ಚಾಲಕರ ಜೊತೆ ಸಭೆ, ಪರಿಶಿಷ್ಟ ಜಾತಿ ಪಂಗಡದ ಮುಖಂಡರು, ವಾಣಿಜ್ಯ ಕೈಗಾರಿಕಾ ಮಂಡಳಿಯ ಸದಸ್ಯರು, ಸಹಬಾಳ್ವೆ, ಮಾನವ ಬಂದುತ್ವ ಸಂಘಟನೆಗಳೊಂದಿಗೆ ಚರ್ಚೆ ನಡೆಸಿತು. ಜಿಲ್ಲೆಯ ಪ್ರಮುಖ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಮೀನುಗಾರ ಮುಖಂಡರು, ಕಾಂಗ್ರೆಸ್ ಕಾರ್ಯಕರ್ತರ ಜೊತೆ ಸಮಾಲೋಚನೆ ನಡೆಸಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ