)
- ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳದ ಅಧ್ಯಕ್ಷೀಯ ಭಾಷಣ । ಗ್ರಾಮೀಣ ಸೊಗಡಿನಲ್ಲಿ ಆಕರ್ಷಕ ಮೆರವಣಿಗೆ
ಎಲ್ಲಾ ಕಾಲದ ಕನ್ನಡಿಗರ ಸಮಸ್ಯೆ ಎಂದರೆ ಕನ್ನಡಿಗರ ಅಭಿಮಾನದ ಕೊರತೆ ಹಾಗೂ ಕನ್ನಡಿಗರ ಮಿತಿ ಮೀರಿದ ಸಹನೆಯಾಗಿದೆ ಎಂದು 10 ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಸಾಹಿತಿ ಬೆಮ್ಮನೆ ದಯಾನಂದ್ ತಿಳಿಸಿದರು.
ಶನಿವಾರ ಬೆಳ್ಳೂರಿನ ಪ್ರೌಢ ಶಾಲೆಯಲ್ಲಿ 10 ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿ ಕನ್ನಡಿಗರು ಹಲವು ರೀತಿಯಲ್ಲಿ ಆತಂಕಕ್ಕೆ ಒಳಗಾಗುತ್ತಲೇ ಇರುತ್ತಾರೆ. ಅವುಗಳಲ್ಲಿ ಹೆಚ್ಚು ಬೇಸರದ ಸಂಗತಿ ಸರ್ಕಾರಿ ಕನ್ನಡ ಶಾಲೆಗಳು ಮುಚ್ಚುತ್ತಿವೆ. ಜನ ಸಂದಣಿ ಕಡಿಮೆ ಇರುವ ಮಲೆನಾಡಿನಲ್ಲಿ ಈಗಾಗಲೇ ಹಲವು ಸರ್ಕಾರಿ ಶಾಲೆಗಳು ಮುಚ್ಚಿದೆ. ನರಸಿಂಹರಾಜಪುರ ತಾಲೂಕಿನಲ್ಲೇ 98 ಸರ್ಕಾರಿ ಶಾಲೆ ಪೈಕಿ 26 ಶಾಲೆಗಳು ಮುಚ್ಚಿದೆ ಎಂದು ಆತಂಕ ವ್ಯಕ್ತಪಡಿಸಿದರು.ಬೆಳಗಾಂ ಗಡಿ ಸಮಸ್ಯೆ ಸದಾ ಜೀವಂತ ಇಡಲಾಗಿದೆ. ಪ್ರತಿ ವರ್ಷ ಕನ್ನಡ ರಾಜ್ಯೋತ್ಸವವನ್ನು ಪೊಲೀಸ್ ರಕ್ಷಣೆಯಲ್ಲಿ ಆಚರಿಸಬೇಕಾಗಿರುವುದನ್ನು ಕಂಡಾಗ ಕರ್ನಾಟಕ ಏಕೀಕರಣ ಪೂರ್ಣವಾಗಿಲ್ಲವೇನೋ ಎಂಬ ಭಾವ ಮೂಡುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.
ಕನ್ನಡ ಗಮಕ ಪ್ರವಚನಕಾರ ಮುನಿರಾಜ್ ರೆಂಜಾಳ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, 110 ವರ್ಷದ ಹಿಂದೆ ಕನ್ನಡ ಸಾಹಿತ್ಯ ಪರಿಷತ್ ಹುಟ್ಟಿಕೊಂಡ ನಂತರದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಪ್ರಾರಂಭವಾಯಿತು. ಹರಿಕೃಷ್ಣ ಪುನರೂರು ರಾಜ್ಯ ಕಸಾಪ ಅಧ್ಯಕ್ಷರಾದಾಗ ತಾಲೂಕು ಹೋಬಳಿ ಸಮ್ಮೇಳನ ಪ್ರಾರಂಭಿಸಿದ್ದರು. ಕಸಾಪ ಎಲ್ಲಾ ಕನ್ನಡಿಗರನ್ನು ಒಟ್ಟುಗೂಡಿಸುತ್ತದೆ ಎಂದರು.
9 ಸಾಹಿತಿಗಳ ಪುಸ್ತಕಗಳನ್ನು ಬಿಡುಗಡೆ ಮಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಾವ್ಯ, ಕಥಾ ಕಮ್ಮಟ, ವಿಚಾರ ಸಂಕಿರಣದಂತಹ ಹಲವಾರು ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. ತಾಲೂಕು ಸಾಹಿತ್ಯ ಸಮ್ಮೇಳನದಿಂದ ಸಮ್ಮೇನಾಧ್ಯಕ್ಷರ ಪ್ರತಿಭೆ ಅನಾವರಣಗೊಳ್ಳುತ್ತಿದೆ. ಜಿಲ್ಲಾ ಕಸಾಪದಿಂದ ಪ್ರಥಮ ವಾಗಿ ಜೈನ ಸಾಹಿತ್ಯ ಸಮ್ಮೇಳನ, ಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನ ನಡೆಸಿದ್ದೇವೆ. ಮಕ್ಕಳ ಸಮ್ಮೇಳನ ಶೀಘ್ರದಲ್ಲೇ ನಡೆಯಲಿದೆ .ಜಿಲ್ಲೆಯ ಕನ್ನಡ ಭವನಕ್ಕೆ ಶಾಸಕ ರಾಜೇಗೌಡರು ₹10 ಲಕ್ಷ ನೀಡಿದ್ದಾರೆ ಎಂದರು.
ಬೆಳ್ಳೂರಿನ ರಾಜಬೀದಿಯಲ್ಲಿ ಸಮ್ಮೇಳಾಧ್ಯಕ್ಷರನ್ನು ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಕರೆ ತರಲಾಯಿತು. ಗ್ರಾಮೀಣ ಸೊಗಡಿನ ಅಂಟಿಕೆ-ಪಿಂಟಿಕೆ, ಎತ್ತಿನ ಗಾಡಿ, ವಿವಿಧ ಸ್ಥಭ್ದ ಚಿತ್ರಗಳು,110 ಅಡಿಯ ಕನ್ನಡ ಬಾವುಟ, ಮಹಿಳೆಯರ ಪೂರ್ಣ ಕುಂಭ ಸ್ವಾಗತ ಮೆರವಣಿಗೆಯ ಸೊಬಗು ಹೆಚ್ಚಿಸಿತು.
ಸಮ್ಮೇಳನದಲ್ಲಿ 9 ಸಾಹಿತಿಗಳ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು. ಗಣೇಶ ಕೊನೋಡಿ ಅವರ ಜಿನುಗಿದ ಹನಿಗಳು, ಬಾಳೆಹೊನ್ನೂರು ಲತಾ ಅವರ ಮನದಾಳದ ಮೌನ, ಎಂ.ಜಯಮ್ಮ ಒಗಟು ನೂರೆಂಟು, ನಾಗರತ್ನ ಅವರ ಪಾರಿಜಾತ, ಸುಧಾ ವಸಂತ್ ಬರೆದ ನೆನಪಿನಂಗಳ, ಸೌಜನ್ಯ ಆದರ್ಶ ಅವರ ಗಗನ ಗಂಭೀರ ಮನೋ ಮಂದಿರ, ದೀಪಕ್ ನಿಡಘಟ್ಟ ಅವರ ಮಾಯಾ ಗಿರಿ ನೆರಳು, ಎನ್.ಕೆ.ಶಿವಕುಮಾರ್ ಅವರ ಸ್ವರ್ಣ ಕನ್ನಡಿ, ಶ್ರೀಮತಿ ನಿತ್ಯ ಅವರ ನಿತ್ಯಮಲ್ಲಿಗೆ ಕೃತಿಯನ್ನು ಜಿಲ್ಲಾ ಕ.ಸಾ.ಪ ಅಧ್ಯಕ್ಷ ಸೂರಿ ಶ್ರೀನಿವಾಸ್ ಬಿಡುಗಡೆಗೊಳಿಸಿದರು. 12 ಹೆಚ್ಚು ಮಳಿಗೆಗಳು, ಪುಸ್ತಕ ಮಳಿಗೆ, ಗ್ರಾಮೀಣ ವಸ್ತುಗಳ ಮಳಿಗೆಗಳು ಸಾಹಿತ್ಯ ಸಮ್ಮೇಳನದ ಆಕರ್ಷಣೆಯಾಗಿದ್ದವು.