ಹನುಮಸಾಗರದಲ್ಲಿ ಸಾರ್ವಜನಿಕ ಶೌಚಾಲಯಗಳ ಕೊರತೆ

KannadaprabhaNewsNetwork |  
Published : Oct 21, 2025, 01:00 AM IST
ಹನುಮಸಾಗರದ ಸಂತೆಬಜಾರಿನಲ್ಲಿರುವ ಮಹಿಳೆಯರ ಶೌಚಾಲಯ ಕಂಪೌಂಡ್ ಬಿದ್ದು ಗಿಡಗಳು ಬೆಳೆದಿವೆ. | Kannada Prabha

ಸಾರಾಂಶ

ಪ್ರತಿ ಸೋಮವಾರ ನಡೆಯುವ ಸಂತೆಗೆ 35ರಿಂದ 40 ಹಳ್ಳಿಗಳ ಜನರು ಆಗಮಿಸುತ್ತಾರೆ.

ಕನಾಥ ಜಿ. ಮೆದಿಕೇರಿ ಹನುಮಸಾಗರ

ಹನುಮಸಾಗರದಲ್ಲಿ ಸಾರ್ವಜನಿಕ ಶೌಚಗೃಹ ಹಾಗೂ ಮೂತ್ರಖಾನೆ ಕೊರತೆ ಕಾಡುತ್ತಿದೆ. ಪಟ್ಟಣದಲ್ಲಿ ಸುಮಾರು 3,600 ಮನೆಗಳು ಮತ್ತು 12ರಿಂದ 15 ಸಾವಿರ ಮತದಾರರು ಇದ್ದಾರೆ. ವಾರಕ್ಕೆ ಸಾವಿರಾರು ಜನರು ಹೊರಗಿನಿಂದ ಬಂದು ಹೋಗುತ್ತಾರೆ.

ಪ್ರತಿ ಸೋಮವಾರ ನಡೆಯುವ ಸಂತೆಗೆ 35ರಿಂದ 40 ಹಳ್ಳಿಗಳ ಜನರು ಆಗಮಿಸುತ್ತಾರೆ. ಆದರೆ ಇಷ್ಟೊಂದು ಜನಸಂದಣಿಯ ನಡುವೆಯೂ ಶೌಚಗೃಹ ಇಲ್ಲದಿರುವ ಕೊರತೆ ಜನರನ್ನು ತೊಂದರೆಗೀಡು ಮಾಡುತ್ತಿದೆ.

ಸಂತೆಯ ದಿನ ವ್ಯಾಪಾರಕ್ಕೆ ಬಂದ ಮಹಿಳೆಯರು ಪರದಾಡುವಂತಾಗುತ್ತದೆ. ಸಂತೆಯಲ್ಲೇ ದಿನವಿಡೀ ಕಾಲ ಕಾಳೆಯಬೇಕು, ಶೌಚಕ್ಕೆ ಹೋಗಲು ಸ್ಥಳವಿಲ್ಲ. ಯಾರದಾದರೂ ಮನೆಗೆ ಹೋಗಿ ಮನವಿ ಮಾಡಬೇಕು ಎಂದು ಅನೇಕ ಮಹಿಳೆಯರು ಬೇಸರ ವ್ಯಕ್ತಪಡಿಸುತ್ತಾರೆ.

ಬಯಲು ಆಶ್ರಯ:ಗ್ರಾಮದಲ್ಲಿ ಅನುಕೂಲ ಉಳ್ಳವರು ತಮ್ಮ ಮನೆಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಿಕೊಂಡಿದ್ದಾರೆ. ಆದರೆ ದಿನಗೂಲಿ ಮಾಡಿ ದುಡಿಯುವ ಬಡ ಕುಟುಂಬಗಳು ಶೌಚಗೃಹ ಹೊಂದಿಲ್ಲ. ಅವರು ಬಯಲು ಆಶ್ರಯಿಸುವುದು ಅನಿವಾರ್ಯ.

ಬಳಕೆಗೆ ಅಯೋಗ್ಯ:ಹಲವಾರು ವರ್ಷಗಳ ಹಿಂದೆ ಮಹಿಳೆಯರಿಗಾಗಿ ನಿರ್ಮಿಸಲಾದ ಶೌಚಾಲಯಗಳು ಈಗ ಸಂಪೂರ್ಣವಾಗಿ ಶಿಥಿಲವಾಗಿದೆ. ಗಿಡ-ಗಂಟಿಗಳು ಬೆಳೆದು, ವಿಷಜಂತುಗಳು ನೆಲೆಸಿರುವ ಈ ಸ್ಥಳಗಳಿಗೆ ಹೋಗಲು ಯಾರೂ ಧೈರ್ಯ ಮಾಡುವುದಿಲ್ಲ. "ಅಲ್ಲಿ ಯಾವುದೇ ವ್ಯವಸ್ಥೆ ಇಲ್ಲ, ನೀರಿನ ಸೌಲಭ್ಯ ಇಲ್ಲ. ಹೀಗಾಗಿ ನಾವು ಹೋಗುವುದೇ ಇಲ್ಲ " ಎಂದು ಸ್ಥಳೀಯ ಮಹಿಳೆಯರು ಹೇಳಿದ್ದಾರೆ.

ಗ್ರಾಮಸ್ಥರು ಹಲವು ಬಾರಿ ಗ್ರಾಪಂ ಅಧಿಕಾರಿಗಳಿಗೆ ಮನವಿ ಸಲ್ಲಿಸಿ, ಹೈಟೆಕ್ ಸಾರ್ವಜನಿಕ ಶೌಚಗೃಹ, ಮೂತ್ರಖಾನೆ ನಿರ್ಮಾಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಸರ್ಕಾರದಿಂದ ಹಣ ಬರುತ್ತಿದೆ, ಆದರೆ ಕೆಲಸಗಳು ನಡೆಯುತ್ತಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಜನರು ನರಳುತ್ತಿದ್ದಾರೆ ಎಂದು ಹನುಮಸಾಗರದ ಯುವಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ವಚ್ಛ ಭಾರತ್ ಘೋಷಣೆ?: ಸರ್ಕಾರ ಶೌಚಾಲಯ ನಿರ್ಮಾಣಕ್ಕೆ ಕೋಟ್ಯಂತರ ವೆಚ್ಚ ಮಾಡುತ್ತಿದೆ. ಹನುಮಸಾಗರದಂತಹ ಪ್ರಮುಖ ಗ್ರಾಮಗಳು ಶೌಚಗೃಹ ಹೊಂದಲು ಸಾಧ್ಯವಾಗುತ್ತಿಲ್ಲ. ಸ್ವಚ್ಛ ಭಾರತ್ ಘೋಷಣೆ ಚೆನ್ನಾಗಿದೆ. ಆದರೆ ನಮ್ಮ ಸ್ಥಿತಿ ನೋಡಿ ಯಾರಾದರೂ ಅರ್ಥ ಮಾಡಿಕೊಳ್ಳಲಿ ಎಂದು ಹಿರಿಯ ನಾಗರಿಕರು ವಿಷಾದಿಸಿದರು.

ಹೈಟೆಕ್ ಶೌಚಾಲಯ ನಿರ್ಮಾಣಕ್ಕಾಗಿ ಗ್ರಾಪಂಗೆ ಯಾವುದೇ ಹಣ ಲಭ್ಯವಾಗಿಲ್ಲ. ಈ ಕುರಿತು ಜಿಪಂ ಹಾಗೂ ತಾಪಂಗೆ ಎಸ್ಟಿಮೇಟ್ ಕಳುಹಿಸಲಾಗಿದೆ. ಆದರೆ ಈವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ, ಹಣವೂ ಬಿಡುಗಡೆ ಆಗಿಲ್ಲ ಎಂದು ಗ್ರಾಪಂ ಅಧ್ಯಕ್ಷ ರುದ್ರಗೌಡ ಗೌಡಪ್ಪನವರ ತಿಳಿಸಿದ್ದಾರೆ.

ಸಂತೆಗೆ ಬರುವವರು, ಪಕ್ಕದಲ್ಲಿನ ದೇವಾಲಯಗಳಿಗೆ ಬರುವ ಭಕ್ತಾದಿಗಳು ಶೌಚಾಲಯದ ಕೊರತೆ ಎದುರಿಸುತ್ತಿದ್ದಾರೆ. ಗ್ರಾಪಂ ಸಾಮಾನ್ಯ ಸಭೆಯಲ್ಲಿ ಈ ಕುರಿತು ಚರ್ಚಿಸಿ, ಆದಷ್ಟು ಬೇಗ ಶೌಚಾಲಯ ನಿರ್ಮಿಸಲಾಗುವದು ಎಂದು ಹನುಮಸಾಗರ ಪಿಡಿಓ ನಿಂಗಪ್ಪ ಮೂಲಿಮನಿ ತಿಳಿಸಿದ್ದಾರೆ.

PREV

Recommended Stories

ಮಲೆನಾಡು, ಕರಾವಳಿಯಲ್ಲಿ ಮಳೆ : ಜನಜೀವನ ಅಸ್ತವ್ಯಸ್ತ
ಚಿತ್ತಾಪುರದಲ್ಲಿ ನ.2ರಂದು ಪಥ ಸಂಚಲನ: ಅನುಮತಿ ಕೋರಿ ಹೊಸದಾಗಿ ಅರ್ಜಿ