ಕನ್ನಡಪ್ರಭ ವಾರ್ತೆ ಜೋಯಿಡಾ
ತಾಲೂಕಿನ ಗಣೇಶಗುಡಿಯ ಅವೇಡಾ ಗ್ರಾಪಂ ವ್ಯಾಪ್ತಿಯ ಅವೇಡಾ, ಬಾಡಗುಂದ, ಗಣೇಶಗುಡಿ, ಇಳವಾದಲ್ಲಿ ಪ್ರವಾಸೋದ್ಯಮ ವಾಹನಗಳ ಬಾಡಿಗೆ ದರ ಹೆಚ್ಚಿಸಬೇಕೆಂದು ಆಗ್ರಹಿಸಿ ಕಳೆದ 15 ದಿನಗಳಿಂದ ಮಾಲೀಕರು ಕೆಲಸ ಸ್ಥಗಿತಗೊಳಿಸಿದ್ದಾರೆ.ಈ ಕುರಿತು ವಾಹನ ಮಾಲೀಕರು ಮಾಧ್ಯಮದವರಿಗೆ ಹೇಳಿಕೆ ನೀಡಿದ್ದು, ನಾವು ಕಳೆದ ಎಂಟು ವರ್ಷಗಳಿಂದ ಇಲ್ಲಿ ಪ್ರವಾಸೋದ್ಯಮವನ್ನು ನಂಬಿ ರಾಪ್ಟಿಂಗ್‌ಗಾಗಿ ಗಾಡಿ ಬಾಡಿಗೆ ನೀಡುತ್ತಿದ್ದೇವೆ. ಜನರನ್ನು ನೀರಿನ ಜೆಟ್ಟಿಗೆ ತರಲು ಗಾಡಿ ಬಾಡಿಗೆ ದರ ಪ್ರತಿ ಟ್ರಿಪ್‌ಗೆ ₹300ರಂತೆ ನಿಗದಿ ಪಡಿಸಲಾಗಿತ್ತು. ಈಗ ಬಾಡಿಗೆ ಹೆಚ್ಚಳ ಮಾಡಿ ಎಂದು ನಾವು ಮನವಿ ಮಾಡಿದ್ದೆವು. ಆದರೆ ನಮ್ಮ ಮನವಿಗೆ ಸ್ಪಂದಿಸದೇ ₹250 ಮಾತ್ರ ಕೊಡುತ್ತೇವೆ ಬೇಕಾದರೆ ಮಾಡಿ ಎಂದು ಹೇಳಿ ಗಾಡಿ ಬಾಡಿಗೆ ನಿಲ್ಲಿಸಲಾಗಿದೆ. ಈ ಹಿಂದೆ ಸಭೆಯಲ್ಲಿ ಒಂದು ಜಟ್ಟಿಗೇ ಒಂದು ಗಾಡಿ ಓನರ್ ಅಥವಾ ಆಪರೇಟರ್ ಇರಬೇಕು ಎಂದು ಗ್ರಾಪಂ ಸಭೆಯಲ್ಲಿ ಮತ್ತು ಇಳವಾ ಗ್ರಾಮದಲ್ಲಿ ಸಭೆ ನಡೆಸಿದಾಗ ಹೇಳಲಾಗಿತ್ತು. ಆದರೆ ಈಗ ಕೆಲವು ಜಟ್ಟಿಗಳು ಮಾತ್ರ ಈ ಮಾತು ಪಾಲಿಸುತ್ತಿದ್ದಾರೆ. ಕೆಲವು ಜಟ್ಟಿಗಳಲ್ಲಿ ಮೂರು, ನಾಲ್ಕು ಗಾಡಿಗಳು ಇದ್ದು ಹೊರ ಊರಿನ ಗಾಡಿಗಳನ್ನು ತಂದು ಕೆಲಸ ನಡೆಸುತ್ತಿದ್ದಾರೆ. ಈಗ ನಾವು ಗಾಡಿ ನಿಲ್ಲಿಸಿ ಶಾಂತಿಯುತ ಹೋರಾಟ ಮಾಡುತ್ತಿದ್ದೇವೆ. ಒಂದು ವೇಳೆ ನ್ಯಾಯ ಸಿಗದೇ ಇದ್ದರೆ ಮುಂದಿನ ದಿನಗಳಲ್ಲಿ ಅವೇಡಾ ಗ್ರಾಪಂ ಮುಂದೆ ಧರಣಿ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ವಾಹನ ಮಾಲೀಕರಾದ ಗೋವಿಂದ ಅರುಣ್, ಪರಶುರಾಮ್, ದಶರಥ್, ನೀಲಕಂಠ, ಸಂತೋಷ್ ನಾಯಕ್, ಕಿರಣ್, ರಮೇಶ್, ಅವಿನಾಶ್, ಸಾಗರ್, ಕಿರಣ್ ಶ್ರೀನಾಥ್, ಜಾವೇದ್ ಇತರರಿದ್ದರು.