ಮುಂಡರಗಿ ಮಾರುಕಟ್ಟೆಯಲ್ಲಿ ಖರೀದಿ ಭರಾಟೆ

KannadaprabhaNewsNetwork |  
Published : Oct 21, 2025, 01:00 AM IST
20ಎಂಡಿಜಿ2, ಪಟ್ಟಣದಲ್ಲಿನ ಮಾರುಕಟ್ಟೆಯಲ್ಲಿ ಹಬ್ಬಕ್ಕಾಗಿ ಹಣ್ಣು ಖರೀದಿದ ಜನತೆ.20ಎಂಡಿಜಿ2ಎ,ಪಟ್ಟಣದಲ್ಲಿನ ಮಾರುಕಟ್ಟೆಯಲ್ಲಿ ಹಬ್ಬಕ್ಕಾಗಿ ಕಬ್ಬು, ಬಾಳಿದಿಂಡು ಖರೀದಿದ ಜನತೆ. | Kannada Prabha

ಸಾರಾಂಶ

ಇದು ದೀಪಗಳ ಹಬ್ಬವಾಗಿರುವುದರಿಂದ ವಿವಿಧ ಬಗೆಯ ಮಣ್ಣಿನ ಹಾಗೂ ಎಲೆಕ್ಟ್ರಿಕ್‌ ಹಣತೆಗಳ ಮಾರಾಟ, ತೆಂಗಿನಕಾಯಿ ವ್ಯಾಪಾರ, ಸಿಹಿ ಹಾಗೂ ಕಾರದ ತಿಂಡಿ ತಿನಿಸುಗಳು ಸೇರಿದಂತೆ ಎಲ್ಲ ಬಗೆಯ ವ್ಯಾಪಾರ- ವಹಿವಾಟುಗಳ ಖರೀದಿ ಭರಾಟೆ ನಡೆಯಿತು.

ಮುಂಡರಗಿ: ಪ್ರಸಕ್ತ ವರ್ಷ ಅತಿಯಾದ ಮಳೆಯಿಂದಾಗಿ ರೈತರಿಗೆ ಸಾಕಷ್ಟು ಹಾನಿಯಾಗಿದೆ. ಇದೀಗ ಈರುಳ್ಳಿ ಬೆಳೆ ಬಂದಿದ್ದು, ದರವಿಲ್ಲದೇ ರೈತರಿಗೆ ಕಣ್ಣೀರು ತರಿಸಿದೆ. ಇನ್ನೊಂದೆಡೆ ದೀಪಾವಳಿ ಹಬ್ಬ ಬಂದಿದ್ದು, ಖರೀದಿಗಾಗಿ ಜನತೆ ಸೋಮವಾರ ಪಟ್ಟಣದ ಮಾರುಕಟ್ಟೆಯಲ್ಲಿ ಮುಗಿಬಿದ್ದಿರುವುದು ಕಂಡುಬಂದಿತು.

ಈ ಬಾರಿ ಸೋಮವಾರ ಹಾಗೂ ಮಂಗಳವಾರ ಎರಡು ದಿನ ದೀಪಾವಳಿ ಅಮಾವಾಸ್ಯೆ ಬಂದಿರುವುದರಿಂದಾಗಿ ಹಬ್ಬಕ್ಕೆ ಬೇಕಾದ ಹೊಸ ಬಟ್ಟೆ, ಬಂಗಾರ ಖರೀದಿ ಜತೆಗೆ ಹೂವು, ಹಣ್ಣು, ಬಾಳಿ ಕಂಬ, ಕಬ್ಬು, ಮಾವಿನ ತೋರಣ, ಅಡಕೆ ಹೂವಿನ ಗಿಡ, ಬಣ್ಣ ಬಣ್ಣದ ಅಲಂಕಾರಿಕ ವಸ್ತುಗಳು ಹಾಗೂ ವಿವಿಧ ವಿನ್ಯಾಸದ ಶಿವನ ಪುಟ್ಟಿ ಖರೀದಿ ಜೋರಾಗಿಯೇ ನಡೆಯಿತು.

ಜತೆಗೆ ದಿನಸಿ ಹಾಗೂ ತರಕಾರಿ ಅಂಗಡಿಗಳ ವ್ಯಾಪಾರ ಜೋರಾಗಿತ್ತು. ಇದು ದೀಪಗಳ ಹಬ್ಬವಾಗಿರುವುದರಿಂದ ವಿವಿಧ ಬಗೆಯ ಮಣ್ಣಿನ ಹಾಗೂ ಎಲೆಕ್ಟ್ರಿಕ್‌ ಹಣತೆಗಳ ಮಾರಾಟ, ತೆಂಗಿನಕಾಯಿ ವ್ಯಾಪಾರ, ಸಿಹಿ ಹಾಗೂ ಕಾರದ ತಿಂಡಿ ತಿನಿಸುಗಳು ಸೇರಿದಂತೆ ಎಲ್ಲ ಬಗೆಯ ವ್ಯಾಪಾರ- ವಹಿವಾಟುಗಳ ಖರೀದಿ ಭರಾಟೆ ನಡೆಯಿತು. ದೀಪಾವಳಿಯ ಹಬ್ಬದಲ್ಲಿ ಹೂವು, ಹಣ್ಣು ವ್ಯಾಪಾರದ ಭರಾಟೆ

ಲಕ್ಷ್ಮೇಶ್ವರ: ಪಟ್ಟಣದಲ್ಲಿ ಬೆಳಕಿನ ಹಬ್ಬ ದೀಪಾವಳಿಗೆ ಬಟ್ಟೆ, ಆಕಾಶ ಬುಟ್ಟಿ, ಕಬ್ಬು ಬಾಳೆ ದಿಂಡು, ಹೂವು, ಹಣ್ಣುಗಳ ವ್ಯಾಪಾರದ ಭರಾಟೆ ಜೋರಾಗಿದ್ದು ಕಂಡು ಬಂದಿತು.

ಕಳೆದ ಒಂದು ವಾರದಿಂದ ಸಾಧಾರಣವಾಗಿದ್ದ ಪಟ್ಟಣದಲ್ಲಿನ ವ್ಯಾಪಾರ ವಹಿವಾಟು ಕಳೆದ 2 ದಿನಗಳಿಂದ ಭರ್ಜರಿಯಾಗಿತ್ತು.

ದೀಪಾವಳಿಯ ಹಬ್ಬದ ಸಡಗರಕ್ಕೆ ಬೆಲೆ ಏರಿಕೆಯ ಬಿಸಿ ತಾಗಿದೆ. ಮಾಮೂಲಿ ದಿನಗಳಲ್ಲಿ ಕೇಜಿಗೆ ₹50-60ಗಳಿಗೆ ಮಾರುತ್ತಿದ್ದ ಚೆಂಡು ಹೂವಿನ ಬೆಲೆ ಕೇಜಿಗೆ ₹ 200ಗಳಿಗೆ ಮುಟ್ಟಿದ್ದು ಕಂಡು ಬಂದಿತು. ಸೇವಂತಿಗೆ ಕೇಜಿಗೆ ₹400-600, ಕನಕಾಂಬರ- ₹1000-1200, ಗುಲಾಬಿ- ₹200-400, ಮಲ್ಲಿಗೆ ₹600-800ಗಳಿಗೆ ಮುಟ್ಟಿದ್ದು ಗ್ರಾಹಕರ ಜೇಬು ಬಿಸಿಯಾಗುವಂತೆ ಮಾಡಿತು.ದೀಪಾವಳಿ ಹಬ್ಬಕ್ಕೆ ಹೊಸ ಬಟ್ಟೆಗಳ ಖರೀದಿಯೂ ಜೋರಾಗಿತ್ತು. ಮಹಿಳೆಯರು ಹೊಸ ಸೀರೆ ಖರೀದಿಸುವ ಸಂಭ್ರಮದಲ್ಲಿದ್ದರು.

ಸರಾಫ್ ಬಜಾರ್‌ನಲ್ಲಿ ಜನಸಂದಣಿ: ಹಳದಿ ಲೋಹದ ಬೆಲೆ ಗಗನಮುಖಿಯಾಗಿದ್ದರೂ ಬಂಗಾರ ಕೊಳ್ಳುವವರ ಸಂಖ್ಯೆ ಕಡಿಮೆಯಾಗಿಲ್ಲ. ಮಹಿಳೆಯರು ತಾವು ಉಳಿಸಿದ ಅಲ್ಪ ಸ್ವಲ್ಪ ಹಣದಲ್ಲಿ ಲಕ್ಷ್ಮೀ ಹಬ್ಬಕ್ಕೆ ಬಂಗಾರ ಖರೀದಿಸುವ ಸಂಪ್ರದಾಯ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಸೋಮವಾರ ಮಹಿಳೆಯರು ಬಂಗಾರದ ಅಂಗಡಿಗಳಿಗೆ ಧಾವಿಸುತ್ತಿರುವ ದೃಶ್ಯ ಮಾಮೂಲಿಯಾಗಿತ್ತು.ದೀಪಾವಳಿಯ ಹಬ್ಬದ ವೈಭವ ಹೆಚ್ಚಿಸುವ ಲಕ್ಷ್ಮೀಪೂಜೆಗೆ ಹೂವು, ಹಣ್ಣುಗಳ ಖರೀದಿಯೂ ಜೋರಾಗಿದೆ. ಬಾಳೆ ಹಣ್ಣು, ಸೇಬು, ಮೋಸಂಬಿ. ಕತ್ತಳೆ, ದಾಳಿಂಬೆ, ಚಿಕ್ಕು, ಸೀತಾಫಲ ಹಣ್ಣುಗಳು ಬೆಲೆ ಕೊಂಚ ಹೆಚ್ಚಾಗಿತ್ತು.ಒಟ್ಟಾರೆ ದೀಪಾವಳಿ ಹಬ್ಬದ ವೈಭವವನ್ನು ಬೆಲೆ ಏರಿಕೆಯ ಬಿಸಿ ಕೊಂಚ ಮಟ್ಟಿಗೆ ಕಡಿಮೆ ಮಾಡುವಂತೆ ಮಾಡಿತ್ತು.

PREV

Recommended Stories

ಮಲೆನಾಡು, ಕರಾವಳಿಯಲ್ಲಿ ಮಳೆ : ಜನಜೀವನ ಅಸ್ತವ್ಯಸ್ತ
ಚಿತ್ತಾಪುರದಲ್ಲಿ ನ.2ರಂದು ಪಥ ಸಂಚಲನ: ಅನುಮತಿ ಕೋರಿ ಹೊಸದಾಗಿ ಅರ್ಜಿ