ಕುಷ್ಟಗಿ: ಬೆಳಕಿನ ಹಬ್ಬ ದೀಪಾವಳಿ ಹಿನ್ನೆಲೆ ಮಾರುಕಟ್ಟೆಯಲ್ಲಿ ಬಗೆ ಬಗೆಯ ಆಕಾಶ ಬುಟ್ಟಿಗಳು, ವಿವಿಧ ಅಲಂಕಾರಿಕ ದೀಪಗಳು ಲಗ್ಗೆಯಿಟ್ಟಿದ್ದು, ಹಣ್ಣು, ಹೂವುಗಳು ಮತ್ತು ಅಲಂಕಾರಿಕ ವಸ್ತುಗಳ ಖರೀದಿ ಭರಾಟೆ ಜೋರಾಗಿದೆ.
ಪಟ್ಟಣದ ಬಸವೇಶ್ವರ ವೃತ್ತ, ಕಾಯಿಪಲ್ಯೆ ಮಾರುಕಟ್ಟೆ, ಪೋಲಿಸ ಠಾಣೆಯ ಮುಂಭಾಗ, ಬಸ್ ನಿಲ್ದಾಣದ ಮುಖ್ಯರಸ್ತೆ ಹಾಗೂ ತಾಲೂಕಿನ ದೋಟಿಹಾಳ, ಹನುಮಸಾಗರ, ಹನುಮನಾಳ, ತಾವರಗೇರಾ ಸೇರಿದಂತೆ ವಿವಿಧ ಕಡೆಗಳಲ್ಲಿ ಅಗತ್ಯ ವಸ್ತುಗಳಾದ ಹಣ್ಣು ಹಂಪಲು ಹಾಗೂ ಅಲಂಕಾರಿಕ ವಸ್ತುಗಳ ಖರೀದಿಯಲ್ಲಿ ನಾಮುಂದು ತಾಮುಂದು ಎನ್ನುವಂತೆ ಖರೀದಿಯಲ್ಲಿ ತೊಡಗಿಕೊಂಡಿದ್ದರು.ಹಬ್ಬದ ಪ್ರಮುಖ ಆಕರ್ಷಣೆಯ ಆಕಾಶಬುಟ್ಟಿಗಳು ವರ್ಷದಿಂದ ವರ್ಷಕ್ಕೆ ಸಾಕಷ್ಟು ಬದಲಾವಣೆ ಕಾಣುತ್ತಿದ್ದು, ಮಾರುಕಟ್ಟೆಯಲ್ಲಿ ಬಣ್ಣ, ಬಣ್ಣದ ವಿಶಿಷ್ಟ ಆಕಾರದ ಆಕಾಶ ಬುಟ್ಟಿಗಳ ಸಾಲುಗಳು ಪ್ರಮುಖ ಆಕರ್ಷಣೆಯಾಗಿವೆ. ವೈವಿಧ್ಯಮಯ ಆಕಾಶ ಬುಟ್ಟಿಗಳನ್ನು ಖರೀದಿಸಲು ಜನತೆ ಮಂದಾಗುತ್ತಿದ್ದಾರೆ.
ಮೊದಲು ಆಕಾಶ ಬುಟ್ಟಿ ಕೇವಲ ರಂಗು-ರಂಗಿನ ಹಾಳೆಗಳಿಗೆ ಅಷ್ಟೇ ಸೀಮಿತವಾಗಿದ್ದವು. ಈಗ ಹಾಳೆಯ ಜತೆಗೆ ರಟ್ಟು, ಫೈಬರ್, ಪ್ಲಾಸ್ಟಿಕ್ ಗಳಲ್ಲದೇ ಬಟ್ಟೆಗಳಲ್ಲಿ ತಯಾರಿಸಲಾಗುತ್ತಿದೆ. ಜತೆಗೆ ಗೋಲಾಕಾರ, ಯು ಆಕಾರ, ಚೌಕಾಕಾರ, ನಕ್ಷತ್ರದ ಆಕಾರದಲ್ಲಿ ತಯಾರಿಸಲಾಗುತ್ತಿದೆ. ಇವುಗಳ ದರದಲ್ಲೂ ಏರಿಕೆಯಾಗಿದೆ ಎನ್ನಬಹುದು.ಹೊಸ ಹೊಸ ವಿನ್ಯಾಸದ ಹಲವು ಬಗೆಯ ಉಡುಪುಗಳು ಮಾರುಕಟ್ಟೆಗೆ ಬಂದಿಳಿದಿದ್ದು, ಈ ವರ್ಷ ಬೆಲೆಗಳು ಹೆಚ್ಚಿರುವುದರಿಂದ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿತಟ್ಟಿದೆ. ಬಟ್ಟೆ ಅಂಗಡಿ, ಗೃಹೋಪಯೋಗಿ ವಸ್ತುಗಳ ಅಂಗಡಿ, ದಿನಸಿ ಕಿರಾಣಿ ಅಂಗಡಿ, ಸ್ಟೇಷನರಿ ಅಂಗಡಿಗಳಿಗೆ ಭೇಟಿ ನೀಡುವ ಜನಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬಂತು.
ಹಣ್ಣುಗಳ ದರ:ಲಕ್ಷ್ಮೀ ಪೂಜೆಗೆ ಬೇಕಾದ ಹಣ್ಣುಗಳ ಬೆಲೆ ಏರಿಕೆ ಕಂಡು ಬಂದಿದ್ದು, ಕೆಜಿ ಸೇಬು ಹಣ್ಣು ₹150ರಿಂದ 200, ಮೋಸಂಬಿ ₹100, ಆರೆಂಜ್ ₹220, ಬಿಳಿದಾಕ್ಷಿ ₹180, ಕರಿ ದ್ರಾಕ್ಷಿ ₹220, ದಾಳಿಂಬೆ ₹150, ಚಿಕ್ಕು ಹಣ್ಣು ₹50, ಪೇರಲಹಣ್ಣು ₹60, ಸೀತಾಫಲ ₹80, ಬಾಳೆಹಣ್ಣು ₹40 ಬಾಳೆಗೊನೆ ₹500 ನಿಂದ ₹700, ಕಲ್ಲಂಗಡಿ ₹50, ಕುಂಬಳಕಾಯಿ ಒಂದಕ್ಕೆ ₹50ರಿಂದ 200, ಅಡಿಕೆ ಗಿಡ ₹30, ಚೆಂಡು ಹೂವು ₹50 ರಿಂದ ₹100, ಕಬ್ಬು ₹30 ಸೇರಿದಂತೆ ಹಣ್ಣು ಹಾಗೂ ಹೂವುಗಳ ದರ ಏರಿಕೆಯಾದರೂ ಗ್ರಾಹಕರು ಹಬ್ಬದಾಚರಣೆ ಸಲುವಾಗಿ ಖರೀದಿಸುತ್ತಿರುವದು ಕಂಡು ಬಂತು.
ಬಗೆಬಗೆಯ ತೋರಣ:ಪ್ಲಾಸ್ಟೀಕ್ ಹಾಗೂ ಬಟ್ಟೆಯಿಂದ ತಯಾರು ಮಾಡಲಾಗಿರುವ ಬಾಗಿಲುಗಳಿಗೆ ಕಟ್ಟುವ ತೋರಣ, ದೇವರ ಫೋಟೊಗಳಿಗೆ ಹಾಕುವ ಹಾರ, ಹೂವಿನ ಬಳ್ಳಿಗಳು, ವಿವಿಧ ಹೂವಿನ ಕಾಂಬಿನೇಷನ್ ಇರುವ ಹಾರಗಳು, ಸಿಂಗಲ್ ಹೂವಿನ ಹಾರ, ಹೂವಿನ ಕುಂಡಲಿಗಳು ಇವೆ. ಇವುಗಳಲ್ಲಿ ಚೆಂಡು ಹೂವು, ಮಲ್ಲಿಗೆ, ಸೇವಂತಿಗೆ, ಗುಲಾಬಿ ಸೇರಿದಂತೆ ಅನೇಕ ಹೂವಿನ ತೋರಣಗಳು ವಿವಿಧ ಆಕಾರ, ಗಾತ್ರದಲ್ಲಿದ್ದು, ಅವುಗಳ ಚೆಲುವು ಕೂಡ ಕಣ್ಮನ ಸೆಳೆಯುವಂತಿದೆ. ₹100ನಿಂದ ₹1000 ವರೆಗೆ ದರವಿದೆ. ಅನೇಕರು ತಮ್ಮ ಮನೆ ಬಾಗಿಲು, ಅಂಗಡಿಗಳ ಬಾಗಿಲು ಅಳತೆಗೆ ತಕ್ಕಂತೆ ತಮಗಿಷ್ಟದ ತೋರಣ ಖರೀದಿಸುತ್ತಿರುವದು ಕಂಡು ಬಂತು. ವಾಹನಗಳ ಮಾಲಿಕರು ಹಾಗೂ ರೈತಾಪಿ ಜನರು ತಮ್ಮ ವಾಹನ ಹಾಗೂ ಎತ್ತುಗಳಿಗೆ ಅಲಂಕಾರಿಕ ಸಾಮಾನು ಖರೀದಿ ಮಾಡಿದರು.
ಮುಂಗಾರು ಹಂಗಾಮಿನಲ್ಲಿ ಬೆಳೆದ ಬೆಳೆಗಳು ಕೈತಪ್ಪಿದ್ದು, ಅನಿವಾರ್ಯವಾಗಿ ದೀಪಾವಳಿ ಹಬ್ಬ ಆಚರಣೆ ಮಾಡುತ್ತಿದ್ದೇವೆ ಎತ್ತುಗಳಿಗೆ ಬೇಕಾದಂತಹ ಅಲಂಕಾರಿಕ ವಸ್ತುಗಳ ದರ ಏರಿಕೆಯಾಗಿದ್ದು ಕೈಸುಟ್ಟುಕೊಂಡು ಖರೀದಿಸುತ್ತಿದ್ದೇವೆ ಎಂದು ಕುಷ್ಟಗಿ ರೈತ ಶರಣಪ್ಪ ತಿಳಿಸಿದ್ದಾರೆ.ದೀಪಾವಳಿ ಎರಡು ದಿನ ಆಚರಣೆ ಮಾಡುವಂತಾಗಿದೆ, ಸೋಮವಾರ ವ್ಯಾಪಾರ ಉತ್ತಮವಾಗಿದ್ದು ಮಂಗಳವಾರ ದಿನ ವ್ಯಾಪಾರ ಉತ್ತಮವಾಗುವ ನಿರೀಕ್ಷೆ ಇದೆ ಎಂದು ಚೆಂಡೂ ಹೂವಿನ ವ್ಯಾಪಾರಿರವಿಕುಮಾರ ಭಜಂತ್ರಿ ತಿಳಿಸಿದ್ದಾರೆ.