ಮಳೆಯಾಗದ ಕಾರಣ ಕೆರೆ, ಕಟ್ಟೆ, ಕೃಷಿ ಬಾವಿಗಳ ನೀರಿನ ಮಟ್ಟವು ಕುಸಿದಿದೆ.
ಮಲ್ಲಿಕಾರ್ಜುನ ಎಚ್.
ಸಿರುಗುಪ್ಪ: ತಾಲೂಕಿನಾದ್ಯಂತ ಈ ಬಾರಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಕಾರಣ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಿತ್ತನೆ ಮಾಡಿದ ಬೆಳೆಗಳು ಮಳೆಯ ಅಭಾವದಿಂದ ಒಣಗುತ್ತಿವೆ.
ಮಳೆಯಾಗದ ಕಾರಣ ಕೆರೆ, ಕಟ್ಟೆ, ಕೃಷಿ ಬಾವಿಗಳ ನೀರಿನ ಮಟ್ಟವು ಕುಸಿದಿದೆ. ಜಾನುವಾರುಗಳಿಗೆ ಮೇವು ಮತ್ತು ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ರೈತರು ಉತ್ತಮ ಮಳೆಯ ನಿರೀಕ್ಷೆಯಲ್ಲಿದ್ದು, ಸರ್ಕಾರವು ಬೆಳೆ ಹಾನಿ ಸಮೀಕ್ಷೆ ನಡೆಸಿ ಅಗತ್ಯ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕೆಂದು ರೈತರು ಒತ್ತಾಯಿಸಿದ್ದಾರೆ.
ತಾಲೂಕಿನಲ್ಲಿ ಮುಂಗಾರು ಮತ್ತು ಅದಕ್ಕಿಂತ ಮುಂಚಿತವಾಗಿ ಸುರಿದ ಮಳೆಯಿಂದ ಖುಷಿಗೊಂಡಿದ್ದ ರೈತರು ಮೆಕ್ಕೆಜೋಳ, ಜೋಳ, ಸೂರ್ಯಕಾಂತಿ, ಸಜ್ಜೆ, ಮತ್ತಿತರ ಬೆಳೆಗಳನ್ನು ಕೇವಲ ಬೆರಳೆಣಿಕೆಯ ಸಂಖ್ಯೆಯಲ್ಲಿ ಬಿತ್ತಿದ್ದರು. ನಂತರ ಬರಬೇಕಾದ ಮಳೆ ಬಾರದಿರುವುದು ರೈತರನ್ನು ಸಂಕಷ್ಟಕ್ಕೆ ದೂಡಿದೆ.
ಒಂದೂವರೆ ತಿಂಗಳು ಕಳೆದರೂ ಮಳಯಾಗಿಲ್ಲ. ಬಿತ್ತಿದ್ದ ಬೆಳೆಗಳು ಬೆಳವಣಿಗೆ ಹಂತದಲ್ಲಿ ಒಣಗಲು ಆರಂಭಿಸಿವೆ. ತಾಲೂಕಿನಲ್ಲಿ ಮಳೆಯಾಶ್ರಿತ ಪ್ರದೇಶವಾಗಿದ್ದು, ರೈತರ ಜೀವನ ಸುಧಾರಣೆ ಕಾಣುವ ಲಕ್ಷಣಗಳು ಕಾಣುತ್ತಿಲ್ಲ. ತಾಲೂಕಿನಲ್ಲಿ ಇಲ್ಲಿವರೆಗೂ 36.2 ಮಿ.ಮೀ. ಮಾತ್ರ ಮಳೆ ಬಂದಿದೆ. ಈ ಬಾರಿ 45,066 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತು. ಅದರಲ್ಲಿ 6,525 ಹೆಕ್ಟೇರ್ ಪ್ರದೇಶಗಳಲ್ಲಿ ಮಾತ್ರ ಬಿತ್ತನೆಯಾಗಿದೆ.
ನಮ್ಮ ತಾಲೂಕಿನಲ್ಲಿ ಅಧಿಕಾರಿಗಳ ತಂಡದೊಂದಿಗೆ ಬರ ಅಧ್ಯಯನ ನಡೆಸಲು ಇನ್ನೂ ಬಾರದೇ ಇರುವುದು ರೈತರಲ್ಲಿ ಅತಂಕ ಮೂಡಿಸಿದೆ. ತಾಲೂಕಿನ ಕೃಷಿ, ಕಂದಾಯ, ತೋಟಗಾರಿಕೆ ಅಧಿಕಾರಿಗಳು ಬೆಳೆಗಳ ಸಮೀಕ್ಷೆ ನಡೆಸದೇ ಮೌನ ವಹಿಸಿದ್ದಾರೆ. ಶೇ.50ಕ್ಕೂ ಹೆಚ್ಚು ಮಳೆಯ ಕೊರತೆ ಇದೆ. ಸದ್ಯಕ್ಕೆ ಕುಡಿಯುವ ನೀರಿನ ತೊಂದರೆ ಅಷ್ಟಾಗಿ ಕಂಡು ಬಂದಿಲ್ಲ. ಸಿರುಗುಪ್ಪ ತಾಲೂಕು ಕಳೆದ 2-3 ವರ್ಷಗಳ ನಂತರ ಮತ್ತೆ ಬರಗಾಲ ಪರಿಸ್ಥಿತಿಯನ್ನು ಎದುರಿಸುವಂತಾಗಿದೆ.
ಬರ ಸಮೀಕ್ಷೆ ತಕ್ಷಣ ಕೈಗೊಳ್ಳಬೇಕು. ಪರಪೀಡಿತ ತಾಲೂಕು ಎಂದು ಘೋಷಣೆಯಾಗಬೇಕು. ರೈತರಿಗೆ ಪರಿಹಾರ ನೀಡಬೇಕು. ಜಾನುವಾರುಗಳಿಗೆ ಮೇವು ನೀರಿನ ವ್ಯವಸ್ಥೆ ಮಾಡಬೇಕು. ಕೃಷಿ ಸಾಲಮನ್ನಾ ಮಾಡಬೇಕೆಂದು ತಾಲೂಕಿನ ರೈತರ ಒತ್ತಾಯವಾಗಿದೆ.
ಮಳೆಯಾಶ್ರಿತ 8 ಎಕರೆ ಭೂಮಿಯಲ್ಲಿ ಇನ್ನು ಬಿತ್ತನೆ ಕಾರ್ಯ ನಡೆದಿಲ್ಲ. ಮಳೆ ಬಾರದಿರುವುದರಿಂದ ದಿನದ ಬದುಕು ಸಾಗಿಸಲು ಮತ್ತು ಕುಟುಂಬವನ್ನು ನಿರ್ವಹಣೆ ಮಾಡಲು ಕಷ್ಟದ ಕೆಲಸವಾಗಿದೆ ಎನ್ನುತ್ತಾರೆ ಇಬ್ರಾಹಿಂಪುರದ ಎಚ್.ಹನುಮನಗೌಡ.
ಮೊದಲೇ ಮಳೆ ಇಲ್ಲ. ನದಿಯಲ್ಲಿ ನೀರಿಲ್ಲದೇ ಭತ್ತ ನಾಟಿ ಮಾಡುವುದು ವಿಳಂಬವಾಗಿದೆ. ಕೃಷಿ ಚಟುವಟಿಕೆಗಳು ಇಲ್ಲದೇ ಕೆಲಸ ಕಾರ್ಯಗಳು ಇಲ್ಲದೇ ರೈತರು ತುಂಬ ತೊಂದರೆ ಅನುಭವಿಸುವಂತಾಗಿದೆ. ತುಂಗಭದ್ರಾ ನದಿಗೆ ನೀರು ಬಿಡುವುದರಿಂದ ಜನ ಜಾನುವಾರುಗಳಿಗೆ ಅನುಕೂಲವಾಗುತ್ತದೆ ಎನ್ನುತ್ತಾರೆ ಪ್ರಗತಿಪರ ರೈತ ಗೋರವರ ಶ್ರೀನಿವಾಸ.
ಮುಂಗಾರು ಆರಂಭದಲ್ಲಿ ಸುರಿದ ಉತ್ತಮ ಮಳೆಯಿಂದಾಗಿ ಮಳೆಯಾಶ್ರಿತ ಭೂಮಿಯಲ್ಲಿ ಬಿತ್ತನೆ ನಡೆಸಿದರು. ಬೀಜಗಳು ಅರೆ-ಬರೆ ಮೊಳಕೆಯೊಡೆದವು. ಸಂಪೂರ್ಣ ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಬೆಳೆಗಳು ಒಣಗಿದವು. ಕೃಷಿ ಹೊಂಡ, ಕೊಳವೆಬಾವಿಗಳ ನೀರಿನ ಮೂಲಗಳಿಂದ ಅಲ್ಪ ನೀರಿನಲ್ಲಿ ಬೆಳೆಯುವ ಸಂಪ್ರಾದಯ ಬೆಳೆಗಳ ಬದಲಿಗೆ ಪರ್ಯಾಯ ಬೆಳೆಗಳನ್ನು ರೈತರು ಬೆಳೆಯಬೇಕು. ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದೇ ಕೃಷಿಕರಲ್ಲಿ ಆತಂಕ ತಂದಿದೆ. ರೈತರಿಗೆ ಬೇಕಾಗುವ ಎಲ್ಲ ಬಗೆಯ ಸೌಲಭ್ಯ ನೀಡಲು ಸರ್ಕಾರವು ಬರದ ಸಿದ್ಧತೆ ನಡೆಸುತ್ತಿದೆ ಎನ್ನುತ್ತಾರೆ ಸಹಾಯಕ ಕೃಷಿ ಅಧಿಕಾರಿ ಮಂಜುನಾಥ ರೆಡ್ಡಿ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.