ಸುರಕ್ಷತೆ ಕೊರತೆ: ಅಪಾಯದ ಅಂಚಿನಲ್ಲಿ ಶಾಲಾ ಮಕ್ಕಳು

KannadaprabhaNewsNetwork |  
Published : Jul 25, 2026, 02:30 AM IST
ಮುಂಡಗೋಡ: ಶಾಲೆಯ ಎದುರಲ್ಲೇ ನೀರಿನ ಹೊಂಡ, ಶಿಥಿಲಾವಸ್ಥೆಯಲ್ಲಿರುವ ಅಡುಗೆ ಕೋಣೆ ಹೀಗೆ ಅವ್ಯವಸ್ಥೆಯ ಆಗರವಾಗಿ ಮಾರ್ಪಟ್ಟಿರುವ ತಾಲೂಕಿನ ಚವಡಳ್ಳಿ ಗ್ರಾ.ಪಂ ವ್ಯಾಪ್ತಿಯ ಮಲವಳ್ಳಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆ ಮಕ್ಕಳಿಗೆ ಸುರಕ್ಷತೆ ಇಲ್ಲದಂತಾಗಿದ್ದು, ಅಪಾಯದ ಸೂಚನೆ ನೀಡುತ್ತಿದ್ದರೂ ಕೂಡ ಸಂಬಂಧಿಸಿದ ಇಲಾಖೆ ಅಗತ್ಯ ಸುರಕ್ಷತಾ ಕ್ರಮ ಕೈಗೊಳ್ಳದೆ ನಿರ್ಲಕ್ಷವಹಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. | Kannada Prabha

ಸಾರಾಂಶ

ತಾಲೂಕಿನ ಚವಡಳ್ಳಿ ಗ್ರಾಪಂ ವ್ಯಾಪ್ತಿಯ ಮಲವಳ್ಳಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆ ಅವ್ಯವಸ್ಥೆಯ ಆಗರವಾಗಿ ಮಾರ್ಪಟ್ಟಿದೆ.

ಶಾಲೆಯ ಎದುರಲ್ಲೇ ನೀರಿನ ಹೊಂಡ, ಶಿಥಿಲಾವಸ್ಥೆಯಲ್ಲಿರುವ ಅಡುಗೆ ಕೋಣೆ: ಪಾಲಕರಲ್ಲಿ ಆತಂಕ

ಸಂತೋಷ ದೈವಜ್ಞ

ಕನ್ನಡಪ್ರಭ ವಾರ್ತೆ ಮುಂಡಗೋಡ

ಶಾಲೆಯ ಎದುರಲ್ಲೇ ನೀರಿನ ಹೊಂಡ, ಶಿಥಿಲಾವಸ್ಥೆಯಲ್ಲಿರುವ ಅಡುಗೆ ಕೋಣೆ ಹೀಗೆ...

ತಾಲೂಕಿನ ಚವಡಳ್ಳಿ ಗ್ರಾಪಂ ವ್ಯಾಪ್ತಿಯ ಮಲವಳ್ಳಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆ ಅವ್ಯವಸ್ಥೆಯ ಆಗರವಾಗಿ ಮಾರ್ಪಟ್ಟಿದೆ. ಮಕ್ಕಳಿಗೆ ಸುರಕ್ಷತೆ ಇಲ್ಲದಂತಾಗಿದ್ದು, ಅಪಾಯದ ಸೂಚನೆ ನೀಡುತ್ತಿದ್ದರೂ ಕೂಡ ಸಂಬಂಧಿಸಿದ ಇಲಾಖೆ ಅಗತ್ಯ ಸುರಕ್ಷತಾ ಕ್ರಮ ಕೈಗೊಳ್ಳದೆ ನಿರ್ಲಕ್ಷವಹಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ೪೧ ಮಕ್ಕಳು ಹಾಗೂ ಉರ್ದು ಮಾಧ್ಯಮದಲ್ಲಿ ೨೭ ಸೇರಿದಂತೆ ಒಟ್ಟು 68 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಕೆರೆಯ ಸುತ್ತಲೂ ಯಾವುದೇ ಭದ್ರತಾ ಬೇಲಿ ಅಥವಾ ಎಚ್ಚರಿಕೆ ಫಲಕಗಳಿಲ್ಲದಿರುವುದು ಪಾಲಕರು ಮತ್ತು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಇದರಿಂದ ಯಾವ ಸಮಯದಲ್ಲಿ ಏನು ಅಪಾಯವಾಗುತ್ತದೆ ಎಂಬ ಭಯದಿಂದ ಮಕ್ಕಳನ್ನು ಶಾಲೆಗೆ ಕಳುಹಿಸಲು ಪಾಲಕರು ಹಿಂದೇಟು ಹಾಕುವಂತಾಗಿದೆ. ಈ ಹಿಂದೆ ಬಾಲಕನೋರ್ವ ಈ ಹೊಂಡದಲ್ಲಿ ಬಿದ್ದು ಮೃತಪಟ್ಟಿದ್ದಾನೆ. ಅಲ್ಲದೇ ದನ ಕರುಗಳು ಕೂಡ ಈ ಹೊಂಡದಲ್ಲಿ ಬಿಳುತ್ತಲೇ ಇರುತ್ತವೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಈಗ ಮಳೆಗಾಲವಾಗಿರುವುದರಿಂದ ಕೆರೆಯಲ್ಲಿ ನೀರಿನ ಪ್ರಮಾಣ ಹೆಚ್ಚಾಗುವುದರಿಂದ ಅಪಾಯದ ಮಟ್ಟ ಮತ್ತಷ್ಟು ಹೆಚ್ಚುತ್ತದೆ. ಶಾಲಾ ಸಮಯದಲ್ಲಿ ಮಕ್ಕಳು ಆಟವಾಡುತ್ತಾ ಕೆರೆಯ ಸಮೀಪಕ್ಕೆ ತೆರಳುತ್ತಾರೆ. ಇದರಿಂದ ಅವಘಡ ಸಂಭವಿಸುವ ಭೀತಿಯೂ ಇದೆ. ಸಣ್ಣ ಮಕ್ಕಳಿಗೆ ಅಪಾಯದ ಅರಿವು ಕಡಿಮೆ ಇರುವುದರಿಂದ ವಿಶೇಷ ಮುನ್ನೆಚ್ಚರಿಕೆ ಅಗತ್ಯವಾಗಿದೆ.

ಸ್ಥಳೀಯ ನಿವಾಸಿಗಳು ಹಾಗೂ ಪಾಲಕರು ಹಲವು ಬಾರಿ ಸಂಬಧಪಟ್ಟ ಅಧಿಕಾರಿಗಳ ಗಮನಕ್ಕೆ ಈ ವಿಷಯವನ್ನು ತಂದಿದ್ದೇವೆ. ಅಲ್ಲದೇ ಹೊಂಡ ಮುಚ್ಚಿ ತಡೆಗೋಡೆ ನಿರ್ಮಾಣ ಮಾಡುವಂತೆ ಗ್ರಾಮ ಅಭಿವೃದ್ದಿ ಸಮಿತಿಯವರು ಕೂಡ ಈ ಹಿಂದೆ ಮನವಿ ಸಲ್ಲಿಸಿದ್ದಾರೆ ಆದರೂ ಕೂಡ ಇದುವರೆಗೆ ಯಾವುದೇ ಶಾಶ್ವತ ಕ್ರಮ ಕೈಗೊಳ್ಳಲಾಗಿಲ್ಲ. ಇಲಾಖೆಯ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಕೇವಲ ನೋಡಿಕೊಂಡು ಹೋಗುತ್ತಾರೆ ವಿನಃ ಕ್ರಮ ಕೈಗೊಳ್ಳಲು ಮುಂದಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದು, ತಕ್ಷಣ ಶಾಲೆಯ ಸುತ್ತಮುತ್ತ ತಡೆಗೋಡೆ ನಿರ್ಮಿಸಿ ಸುರಕ್ಷತಾ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಶಿಥಿಲಾವಸ್ಥೆ ತಲುಪಿದ ಅಡುಗೆ ಕೋಣೆ:

ಶಾಲೆಯ ಅಡುಗೆ ಕೋಣೆ ಚಾವಣಿ ಸೋರುತ್ತಿದ್ದು, ಶಿಥಿಲಾವಸ್ಥೆಗೆ ತಲುಪಿದೆ. ಆದರೂ ಕೂಡ ಕಟ್ಟಡ ದುರಸ್ತಿಗೊಳಿಸಲಾಗಿಲ್ಲ. ಅಡುಗೆ ಕೋಣೆ ಕಟ್ಟಡ ಕುಸಿದುಬಿದ್ದು, ಮಕ್ಕಳಿಗೇನಾದರೂ ಅಪಾಯ ಸಂಭವಿಸಿದರೆ ಯಾರು ಹೊಣೆ ಎಂದು ಪಾಲಕರು ಪ್ರಶ್ನಿಸುತ್ತಿದ್ದಾರೆ. ಒಟ್ಟಾರೆ ಸಾಕಷ್ಟು ಅವ್ಯವಸ್ಥೆಯಿಂದ ಕೂಡಿರುವ ಈ ಶಾಲೆಗೆ ಸಮರ್ಪಕ ಕಾಯಕಲ್ಪ ನೀಡುವ ಅವಶ್ಯಕತೆ ಇದ್ದು, ಈಗಲಾದರೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕುಂದು ಕೊರತೆ ಆಲಿಸಿ ಅಗತ್ಯ ಕ್ರಮ ಕೈಗೊಳ್ಳುತ್ತಾರೆಯೇ ಕಾದು ನೋಡಬೇಕಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಂತಿಮ ಮತದಾರರ ಪಟ್ಟಿ ಅ.19ರಂದು ಪ್ರಕಟ: ಡಿಸಿ
ಕೇಂದ್ರ ಕಾರಾಗೃಹದಲ್ಲಿ ಕನ್ನಡಗೀತೆಗಳ ಗಾಯನ