ಅಧಿಕಾರಿಗಳಲ್ಲಿ ಕರ್ತವ್ಯ ಪ್ರಜ್ಞೆ ಕೊರತೆ: ದಯಾನಂದ್‌

KannadaprabhaNewsNetwork | Updated : Jun 08 2024, 12:12 PM IST

ಸಾರಾಂಶ

ಥಣಿಸಂದ್ರದ ಉತ್ತರ ಸಿಎಆರ್‌ ಕವಾಯತು ಮೈದಾನದಲ್ಲಿ ಶುಕ್ರವಾರ ಮಾಸಿಕ ಕವಾಯತಿ ನಡೆಯಿತು.

 ಬೆಂಗಳೂರು :  ನಗರದ ಕೆಲ ಪೊಲೀಸ್‌ ಠಾಣೆಗಳಲ್ಲಿ ಸಿಬ್ಬಂದಿಗೆ ಇರುವ ಮಾಹಿತಿ, ಜ್ಞಾನ, ಕರ್ತವ್ಯ ಪ್ರಜ್ಞೆ ಪೊಲೀಸ್‌ ಅಧಿಕಾರಿಗಳಲ್ಲಿ ಕಾಣುತ್ತಿಲ್ಲ ಎಂದು ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಥಣಿಸಂದ್ರದ ಉತ್ತರ ಸಿಎಆರ್‌ ಕವಾಯತು ಮೈದಾನದಲ್ಲಿ ಶುಕ್ರವಾರ ನಡೆದ ಮಾಸಿಕ ಕವಾಯತಿನಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇಂದು ನಡೆದ ಕವಾಯತಿನಲ್ಲಿ ಸಿಬ್ಬಂದಿ ಕವಾಯತು ಮಟ್ಟ ಉತ್ತಮವಾಗಿದೆ. ಆದರೆ, ಪ್ಲಟೂನ್‌ ಕಮಾಂಡರ್‌ಗಳ ಡ್ರಿಲ್‌ ಮತ್ತು ಕಮಾಂಡ್‌ಗಳು ಸಮಂಜಸವಾಗಿರಲಿಲ್ಲ. ಈ ಬಗ್ಗೆ ಡಿಸಿಪಿ ಮತ್ತು ಎಸಿಪಿಗಳು ಗಮನ ಹರಿಸಬೇಕು ಎಂದರು.

ನಗರದ ಕೆಲ ಪೊಲೀಸ್‌ ಠಾಣೆಗಳಲ್ಲಿ ಸಿಬ್ಬಂದಿಗೆ ಇರುವ ಮಾಹಿತಿ, ಜ್ಞಾನ, ಕರ್ತವ್ಯ ಪ್ರಜ್ಞೆ ಅಧಿಕಾರಿಗಳಲ್ಲಿ ಕಾಣುತ್ತಿಲ್ಲ. ಇನ್‌ಸ್ಪೆಕ್ಟರ್‌ ಮಟ್ಟದ ಅಧಿಕಾರಿಗಳಿಗೆ ಕಮಾಂಡ್‌ಗಳು ಗೊತ್ತಾಗುತ್ತಿಲ್ಲ. ಇದನ್ನು ಸರಿಪಡಿಸುವ ಜವಾಬ್ದಾರಿ ಹಿರಿಯ ಅಧಿಕಾರಿಗಳ ಮೇಲಿದೆ. ಡಿಸಿಪಿ, ಎಸಿಪಿಗಳು ಈ ಬಗ್ಗೆ ಮುತುವರ್ಜಿ ವಹಿಸಬೇಕು. ಕವಾಯತು ಬಗ್ಗೆ ಮಾಹಿತಿ ಇರಬೇಕು. ಏಕೆಂದರೆ, ಅನೇಕ ಸಂದರ್ಭಗಳಲ್ಲಿ ತಪ್ಪು ಕಮಾಂಡ್‌ಗಳು, ಡ್ರಿಲ್‌ ತಪ್ಪು ಮಾಡಿದರೂ ಮೂಕಪ್ರೇಕ್ಷರಾಗಿ ನಿಲ್ಲುತ್ತಿದ್ದಾರೆ. ಇದನ್ನು ಸರಿಪಡಿಸದಿದ್ದಲ್ಲಿ ಇದೇ ರೂಢಿಗತವಾಗಿ ಶಿಸ್ತು ಪಾಲನೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಹೇಳಿದರು.

ಪರೇಡ್‌, ಡ್ರಿಲ್‌ ಬಗ್ಗೆ ಗಮನಹರಿಸಿ:

ಪರೇಡ್‌ ಮತ್ತು ಶಿಸ್ತು ಪೊಲೀಸ್‌ ಇಲಾಖೆಯ ಅಂತರ್ಗತ ಭಾಗ. ಡಿಸಿಪಿಗಳು ಮತ್ತು ಎಸಿಪಿಗಳು ಠಾಣಾ ಮಟ್ಟದಲ್ಲಿ ಪರೇಡ್‌ ತಪಾಸಣೆ ಮಾಡಬೇಕು. ಠಾಣಾ ಇನ್‌ಸ್ಪೆಕ್ಟರ್‌ಗಳು, ಸಬ್‌ ಇನ್‌ಸ್ಪೆಕ್ಟರ್‌ಗಳು ಠಾಣೆಯಲ್ಲಿ ಹೇಗೆ ಪರೇಡ್‌ ಆಯೋಜಿಸುತ್ತಾರೆ ಎಂಬುದನ್ನು ಗಮನಿಸಬೇಕು. ಹೊಸದಾಗಿ ಬಂದಿರುವ ಪಿಎಸ್‌ಐಗಳು ಪ್ಲಟೂನ್‌ ಕಮಾಂಡರ್‌ಗಳಾಗಿದ್ದಾರೆ. ಅವರಿಗೆ ಸರಿಯಾದ ಕಮಾಂಡ್‌, ಡ್ರಿಲ್‌ ಬರುತ್ತಿಲ್ಲ. ಈ ಬಗ್ಗೆ ಗಮನಹರಿಸಬೇಕು. ಕಮಾಂಡ್‌ಗಳು ಮತ್ತು ಡ್ರಿಲ್‌ ಬಗ್ಗೆ ವಿಡಿಯೋ ಮಾಡಿದ್ದೇವೆ. ಆ ವಿಡಿಯೋಗಳನ್ನು ಆಯಾಯ ವಾಟ್ಸಾಪ್‌ ಗ್ರೂಪ್‌ಗಳಲ್ಲಿ ಹಾಕಬೇಕು ಎಂದು ತಿಳಿಸಿದರು.

ದೇಹದ ತೂಕ ಇಳಿಸಿ:

ಪೊಲೀಸ್‌ ಅಧಿಕಾರಿಗಳು ಮತ್ತು ಸಿಬ್ಬಂದಿ ದೈಹಿಕ ಮತ್ತು ಮಾನಸಿಕ ಆರೋಗ್ಯದತ್ತ ಗಮನಹರಿಸಬೇಕು. ನಗರದಲ್ಲಿ ಕೆಲ ಅತೀತೂಕದ ಪೊಲೀಸರು ಇದ್ದಾರೆ. ಆರೋಗ್ಯದ ದೃಷ್ಟಿಯಿಂದ ತೂಕ ಇಳಿಸಬೇಕು. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಕಾರ್ಯಕ್ರಮ ರೂಪಿಸಲು ಪ್ರಯತ್ನಿಸಲಾಗುವುದು. ಇನ್ನು ಜುಲೈ 1ರಿಂದ ಹೊಸ ಕಾನೂನುಗಳು ಜಾರಿಯಾಗಲಿವೆ. ಆ ಹೊಸ ಕಾನೂನುಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಬೇಕು. ಹೀಗಾಗಿ ಯಾವುದೇ ವ್ಯತ್ಯಾಸಗಳು ಆಗದಂತೆ ಹೊಸ ಕಾನೂನುಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದು ಬಿ.ದಯಾನಂದ ಪೊಲೀಸ್‌ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಕಿವಿಮಾತು ಹೇಳಿದರು.

Share this article